ಶಿರಹಟ್ಟಿಯಲ್ಲಿ ಕಟ್ಟಿಗೆ ಅಡ್ಡೆಗಳ ದರ್ಬಾರಿಗೆ ಅನುಮತಿ ಕೊಟ್ಟವರು ಯಾರು..?

ನಿನ್ನೆಯಷ್ಟೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿರುವ ಕಟ್ಟಿಗೆ ಅಡ್ಡೆಗಳಿಂದ ಕೊರೊನ ಭಯದ ಕುರಿತು ನಿಮ್ಮ ಉತ್ತರಪ್ರಭ ಬೆಳಕು ಚೆಲ್ಲಿತ್ತು. ಆದರೆ ಇದರ ಬೆನ್ನಲ್ಲೆ ಕೇವಲ ಶಿರಹಟ್ಟಿ ತಾಲೂಕು ಮಾತ್ರವಲ್ಲ, ಜಿಲ್ಲೆಯಲ್ಲಿನ ಕಟ್ಟಿಗೆ ಅಡ್ಡಗಳಿಂದ ಆಗುತ್ತಿರುವ ತೊಂದರೆ ಕುರಿತು ಸಾಕಷ್ಟು ಜನರು ಕರೆ ಮಾಡಿ ತಿಳಿಸಿದರು. ಜೊತೆಗೆ ಉತ್ತರಪ್ರಭದ ಜನಪರ ಕಾಳಜಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಜನರಿಂದ ಬಂದ ಅಭಿಪ್ರಾಯ ಮತ್ತು ಮಾಹಿತಿಯನ್ನು ನಿಮ್ಮ ಉತ್ತರಪ್ರಭ ಬೆನ್ನತ್ತಿ ಹೋದಾಗ ಶಿರಹಟ್ಟಿಯಲ್ಲಿನ ಕಟ್ಟಿಗೆ ಅಡ್ಡೆಗಳ ಬೇರುಗಳು ಎಷ್ಟರ ಮಟ್ಟಿಗೆ ಆಳಕ್ಕಿಳಿದಿವೆ ಎನ್ನುವ ಆಶ್ಚರ್ಯಕರ ಸಂಗತಿ ಗೊತ್ತಾಯಿತು. ಹೀಗಾಗಿ ಶಿರಹಟ್ಟಿಯಲ್ಲಿನ ಕಟ್ಟಿಗೆ ಅಡ್ಡೆಗಳ ಕುರಿತಾದ ವಿವರವಾದ ವರದಿ ಮಾಡಲು ನಿಮ್ಮ ಉತ್ತರಪ್ರಭ ಮುಂದಾಗಿದೆ.

ಗದಗ: ನಿನ್ನೆಯಷ್ಟೆ ಕಟ್ಟಿಗೆ ಅಡ್ಡೆಗಳಿಂದ ಕೊರೊನಾ ಆತಂಕ ಎನ್ನುವ ಶಿರ್ಷಿಕೆಯಡಿ ವಿಶೇಷ ವರದಿಯನ್ನು ಉತ್ತರಪ್ರಭ ಪ್ರಕಟಿಸಿತ್ತು. ಆದರೆ ಇದರ ಆಳಕ್ಕಿಳಿದಾಗ ಗೊತ್ತಾಗಿದ್ದು, ಶಿರಹಟ್ಟಿಯಲ್ಲಿನ ಕಟ್ಟಿಗೆ ಅಡ್ಡೆಗಳಿಗೆ ಅನುಮತಿ ನೀಡಿದವರು ಯಾರು? ಎನ್ನುವ ಪ್ರಶ್ನೆ.

ಹೌದು, 1993 ರಲ್ಲಿಯೇ ಶಿರಹಟ್ಟಿಯಲ್ಲಿ ಕಟ್ಟಿಗೆ ಅಡ್ಡೆಗಳು ಆರಂಭವಾಗಿವೆ. ಆ ಸಂದರ್ಭದಲ್ಲಿ ಜನವಸತಿ ಪ್ರದೇಶಗಳಿಂದ ದೂರವಿದ್ದ ಕಟ್ಟಿಗೆ ಅಡ್ಡಗಳು ಇದೀಗ ಪಟ್ಟಣದ ಹೃದಯ ಭಾಗದಲ್ಲಿವೆ. ಆದರೆ ಮೂಲದ ಮಾಹಿತಿ ಪ್ರಕಾರ 1993ರಲ್ಲಿ ಈ ಕಟ್ಟಿಗೆ ಅಡ್ಡೆಗಳಿಗೆ ಅನುಮತಿಯನ್ನು ಪಟ್ಟಣ ಪಂಚಾಯತಿ ನೀಡಿತ್ತು. ಆದರೆ ಕೈಗಾರಿಕೆಯೊಂದಕ್ಕೆ ಅನುಮತಿ ನೀಡಲು ಪಟ್ಟಣ ಪಂಚಾಯತಿಗೆ ಏನು ಅಧಿಕಾರವಿದೆ ಎನ್ನುವುದು ಮೂಲ ಪ್ರಶ್ನೆ ಉದ್ಭವವಾಗಿದೆ. ಆದರೆ ಈಗ ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಜನವಸತಿ ಪ್ರದೇಶಗಳ ಮದ್ಯದಲ್ಲಿ ಕಟ್ಟಿಗೆ ಅಡ್ಡೆಗಳಿವೆ. ಇದನ್ನು ಕೇಳಬೇಕಾದ ಅಧಿಕಾರಿಗಳು ಮೌನವಹಿಸಿದ್ದು ಏಕೆ? ಅಧಿಕಾರಿಗಳು ಅಸಹಾಯಕರಾಗಿ ಕೈಚೆಲ್ಲಿದ್ದಾರಾ..? ಅಥವಾ ಅಧಿಕಾರಿಗಳು ಮತ್ತು ಕಟ್ಟಿಗೆ ಅಡ್ಡೆಗಳ ಮಾಲಿಕರ ಮದ್ಯೆ ಸಮ್ ತಿಂಗ್ ವ್ಯವಹಾರ ಏನಾದರೂ ನಡೆದಿದೆಯಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಮೂಡುತ್ತಿವೆ. ಇದಕ್ಕೆ ಮುಖ್ಯವಾಗಿ ಕಾಡುವ ಪ್ರಶ್ನೆ ಮಾತ್ರ ಕಟ್ಟಿಗೆ ಅಡ್ಡೆಗಳಿಗೆ ಅನುಮತಿ ನೀಡಿದವರು ಯಾರು? ಎನ್ನುವ ಪ್ರಶ್ನೆಗಳು ಹಲವು ಕರಾಳ ಕಟು ಸತ್ಯವನ್ನು ಬಿಚ್ಚಿಡುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಿ.ಮಲ್ಲೇಶ್, ಈಗಾಗಲೇ ಸಾಕಷ್ಟು ಬಾರಿ ಕಟ್ಟಿಗೆ ಅಡ್ಡೆ ಮಾಲಿಕರಿಗೆ ನೋಟಿಸ್ ನೀಡಲಾಗಿದೆ. ಆದರೆ ಈವರೆಗೂ ಅವರು ಅಡ್ಡೆ ಸ್ಥಳಾಂತರ ಮಾಡುತ್ತಿಲ್ಲ. ಪಟ್ಟಣ ಪಂಚಾಯತಿಯಿಂದ ಯಾವುದೇ ಅನುಮತಿಯನ್ನು ನೀಡಿಲ್ಲ. ಆದರೆ ಈ ಹಿಂದೆ 1993ರಲ್ಲಿ ಆಗಿನ ಅಧಿಕಾರಿಗಳು ಅನುಮತಿಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಬಂದ ಮೇಲೆ ಯಾವ ಅಡ್ಡೆಗಳಿಗೂ ಅನುಮತಿ ನೀಡಿಲ್ಲ. ಈ ಬಗ್ಗೆ ನೋಟಿಸ್ ನೀಡಿದರೂ ಅಡ್ಡೆಗಳ ಮಾಲಿಕರು ಮಾತ್ರ ನಿಷ್ಕಾಳಜಿ ತೋರುತ್ತಿದ್ದಾರೆ. ಶಿಘ್ರ ಕ್ರಮಕ್ಕೆ ಮುಂದಾಗುತ್ತೇನೆ ಎಂದು ತಿಳಿಸಿದರು.

ಪಟ್ಟಣದಲ್ಲಿ ಕಟ್ಟಿಗೆ ಅಡ್ಡೆಗಳ ಪಟ್ಟು..!

ಸದ್ಯ ಇಲ್ಲಿನ 18 ವಾರ್ಡಗಳಲ್ಲಿ 7 ಕಟ್ಟಿಗೆ ಅಡ್ಡೆಗಳಿವೆ. ಆದರೆ ಆ ಅಡ್ಡೆಗಳಿಗೆ ಪಟ್ಟಣ ಪಂಚಾಯತಿ ಅನುಮತಿಯನ್ನು ನೀಡಿಲ್ಲ. ಇನ್ನು ಕಟ್ಟಿಗೆ ಅಡ್ಡೆ ಕೈಗಾರಿಕೆ ವ್ಯಾಪ್ತಿಯಲ್ಲಿ ಬರುವುದರಿಂದ ಇವರಿಗೆ ಕೈಗಾರಿಕಾ ಇಲಾಖೆ  ಕೂಡ ಅನುಮತಿ ನೀಡಿಲ್ಲ. ಇನ್ನು ಮುಖ್ಯವಾಗಿ ವಸತಿ ಉದ್ದೇಶಿತ ಸ್ಥಳದಲ್ಲಿ ಕಟ್ಟಿಗೆ ಅಡ್ಡೆಗಳು ಹೇಗೆ ನಡೆಸಲು ಅವಕಾಶವಿರುತ್ತದೆ. ಈ ಹಿಂದೆ ಇಲ್ಲಿನ ಕಟ್ಟಿಗೆ ಅಡ್ಡೆಗಳಿಗೆ ಸ್ಥಳೀಯ ಪಟ್ಟಣ ಪಂಚಾಯತಿಯೇ ಎನ್.ಓ.ಸಿ ನೀಡಿದೆ ಎಂದು ಹೇಳಲಾಗುತ್ತದೆ. ಆದರೆ ಕೈಗಾರಿಕೆ ಇಲಾಖೆ ನೀಡಬೇಕಿದ್ದ ಎನ್.ಓ.ಸಿಯನ್ನು ಪಟ್ಟಣ ಪಂಚಾಯತಿ ಹೇಗೆ ನೀಡಿತು? ಎನ್ನುವ ಪ್ರಶ್ನೆ ಈಗ ಕಾಡುತ್ತಿದೆ.

ಈಗಾಗಲೇ ಕಳೆದ 20 ವರ್ಷಗಳಿಂದ ಕಟ್ಟಿಗೆ ಅಡ್ಡೆಗಳ ಮಾಲಿಕರ ಲಾಭಿಗೆ ಮಣಿದ ಅಧಿಕಾರಿಗಳು, ಮಾಲಿಕರಿಗೆ ಈತನಕ ಪೂರಕವಾಗಿಯೇ ಕೆಲಸ ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. 

Exit mobile version