ತೋಂಟದಾರ್ಯ ಇಂಜನೀಯರಿಂಗ್ ಕಾಲೇಜಿಗೆ ಎನ್.ಬಿ.ಎ ಮಾನ್ಯತೆ

ಗದಗ: ನಗರದ ತೋಂಟದಾರ್ಯ ಇಂಜನೀಯರಿಂಗ್ ಕಾಲೇಜಿಗೆ ಎನ್.ಬಿ.ಎ ಮಾನ್ಯತೆ ದೊರೆತಿದೆ. ಈ ಮೂಲಕ ಗದಗ ಜಿಲ್ಲೆಯಲ್ಲಿ ಎನ್.ಬಿ.ಎ ಮಾನ್ಯತೆ ಪಡೆದ ಮೊದಲ ಕಾಲೆಜು ಎನ್ನುವ ಹೆಗ್ಗಳಿಗೆ ತೋಂಟದಾರ್ಯ ಇಂಜನೀಯರಿಂಗ್ ಕಾಲೇಜ್ ಪಾತ್ರವಾಗಿದೆ.

ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೇಕ್ಟ್ರೀಕಲ್ ವಿಭಾಗಕ್ಕೆ ಮೂರು ವರ್ಷದ ಅವಧಿಗೆ ಎನ್.ಬಿ.ಎ ಮಾನ್ಯತೆ ನೀಡಿದೆ. ಈಗಾಗಲೇ 24 ವರ್ಷ ಈ ಭಾಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಒದಗಿಸುತ್ತಿದ್ದ ತೋಂಟದಾರ್ಯ ಇಂಜನೀಯರಿಂಗ್ ಕಾಲೇಜಿಗೆ ಎನ್.ಬಿ.ಎ ಮಾನ್ಯತೆ ದೊರೆತಿದ್ದು ಆಡಳಿತ ಮಂಡಳಿ, ಕಾಲೇಜು ಸಿಬ್ಬಂಧಿ ಹಾಗೂ ವಿದ್ಯಾರ್ಥಿಗಳ ಸಂತಸಕ್ಕೆ ಕಾರಣವಾಗಿದೆ. ಎನ್.ಬಿ.ಎ ಮಾನ್ಯತೆ ಯಿಂದ ಬೇರೆ ಬೇರೆ ಕಂಪನಿಗಳು ಕಾಲೇಜಿಗೆ ಬಂದು ಕ್ಯಾಂಪಸ್ ಆಯ್ಕೆ ಮಾಡಲಿವೆ. ಇದರಿಂದ ಉದ್ಯೋಗ ಅರಸಿ ಬೇರೆ ಕಾಲೇಜು ಅಲಿಯಬೇಕಿದ್ದ ಇಲ್ಲಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ಈ ಬಗ್ಗೆ ಕಾಲೇಜಿನಲ್ಲಿ ಏರ್ಪಡಿಸಿದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ್ ಮಾತನಾಡಿ ಈ ಭಾಗದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎನ್.ಬಿ.ಎ ಮಾನ್ಯತೆ ದೊರೆತಿದ್ದು ಸಂತಸದ ವಿಷಯವಾಗಿದೆ. ವಿದ್ಯಾರ್ಥಿಗಳಿಗೆ ಹಲವಾರು ಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣದ ಮೂಲಕ ರಾಜ್ಯದಲ್ಲಿ ತೋಂಟದಾರ್ಯ ಇಂಜನೀಯರಿಂಗ್ ಕಾಲೇಜು ಪ್ರಸಿದ್ಧಿ ಪಡೆದಿದೆ. ಇದೀಗ ಎನ್.ಬಿ.ಎ ಮಾನ್ಯತೆ ಯಿಂದ ಕಾಲೇಜಿಗೆ ಹೆಮ್ಮೆಯ ಗರಿ ಮೂಡಿದಂತಾಗಿದೆ ಎಂದರು.

ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು. ಈ ಭಾಗದ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಪಡೆಯಬೇಕು ಎನ್ನುವುದು ಲಿಂಗೈಕ್ಯ ಜಗದ್ಗುರು ತೋಂಟದ ಸಿದ್ಧಲಿಂಗಶ್ರೀಗಳ ಕನಸಾಗಿತ್ತು. ಅವರ ಕನಸಿನಂತೆ ಈಗಾಗಲೇ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅನೇಕರು ರಾಜ್ಯದಲ್ಲಷ್ಟೆ ಅಲ್ಲದೇ ದೇಶ – ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಾಲೇಜಿನ ಹೆಮ್ಮೆ ಎಂದು ಹೇಳಿದರು.

ಈ ವೇಳೆ ಪ್ರಾಚಾರ್ಯ ಎಮ್.ಎಮ್.ಅವಟಿ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾಲೇಜಿನ ಸಿಬ್ಬಂಧಿಗಳು ಇದ್ದರು.  

Exit mobile version