ಕಂಡಕ್ಟರ್- ಡ್ರೈವರ್ ಗಳಿಗೆ ವೇತನ ರಹಿತ ರಜೆಗೆ ಚಿಂತನೆ?

ಬೆಂಗಳೂರು: ಲಾಕ್ ಡೌನ್ ಹಿನ್ನೆಲೆ ಬಂದ್ ಆಗಿದ್ದ ಬಸ್ ಸಂಚಾರ ಈಗಷ್ಟೆ ಆರಂಭವಾಗಿದೆ. ಆದರೆ ಪ್ರಯಾಣಿಕರು ಕೊರೊನಾ ಸೋಂಕಿನ ಭಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಪ್ರಯಾಣಕ್ಕೆ ಮುಂದಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಜೊತೆಗೆ ಸಾರಿಗೆ ಇಲಾಖೆಯೂ ಕೂಡ ನಷ್ಟ ಅನುಭವಿಸುತ್ತಿದ್ದು ಇಲಾಖೆ ಚೇತರಿಕೆ ದೃಷ್ಟಿಯಿಂದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಸರ್ಕಾರಕ್ಕೆ ಕೆಲವು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಇಲಾಖೆಯ ಚೇತರಿಕೆಗಾಗಿ ತಳಹಂತದಲ್ಲಿರುವ ಕಾರ್ಮಿಕರ ವೇತನಕ್ಕೆ ಕತ್ತರಿ ಹಾಕುವ ಮಾಸ್ಟರ್ ಪ್ಲಾನ್ ಫರ್ವೇಜ್ ಅವರು ಮಾಡಿದ್ದಾರೆ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.
ಮೂಲಗಳ ಮಾಹಿತಿ ಪ್ರಕಾರ ಅಂಜುಮ್ ಫರ್ವೇಜ್ ಅವರು ಕೆಲವು ಅಂಶಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಶಿಫಾರಸ್ಸಿನಲ್ಲಿ ಕಾರ್ಮಿಕರ ಹಿತವನ್ನು ಗಣನೆಗೆ ತೆಗೆದುಕೊಳ್ಳದೇ ಕೇವಲ ಇಲಾಖೆ ಹಿತವನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.

ಸರ್ಕಾರಕ್ಕೆ ನೀಡಿದ ಶಿಫಾರಸ್ಸುಗಳು
• ಬಸ್ ಗಳ ಶೆಡ್ಯೂಲ್ ಪ್ರತಿಶತಃ ಶೇ.50 ಕ್ಕೆ ಇಳಿಕೆ ಮಾಡಬೇಕು. ಜೊತೆಗೆ ಚಾಲಕ ಮತ್ತು ನಿರ್ವಾಹಕರನ್ನು ವೇತನ ರಹಿತ ರಜೆಯನ್ನು ಕೊಡುವ ಮೂಲಕ ಸರತಿಯಂತೆ ಸೇವೆಗೆ ನಿಯುಕ್ತಿಗೊಳಿಸುವುದು. ಈ ಪದ್ಧತಿಯನ್ನು ನಾಲ್ಕು ತಿಂಗಳ ಕಾಲ ಮುಂದುವರೆಸಬೇಕು.
• ರಾಜ್ಯದಲ್ಲಿ ಲಾಂಗ್ ರೂಟ್ ಬಸ್ ಗಳ ಸೇವೆಯನ್ನು ರಾತ್ರಿಯೂ ಆರಂಭಿಸಬೇಕು
• ಅಂತರಾಜ್ಯ ಸಾರಿಗೆ ಪ್ರಾರಂಭಿಸುವುದು ಅದರಲ್ಲಿ ಎಸಿ ಮತ್ತು ನಾನ್ ಎಸಿ ಬಸ್ ಗಳನ್ನು ನೆರೆ ರಾಜ್ಯಗಳಿಗೆ(ಕೋವಿಡ್ 19 ಸೋಂಕು ಹೆಚ್ಚಿರುವ ರಾಜ್ಯಗಳನ್ನು ಹೊರತು ಪಡಿಸಿ) ಸೇವೆ ಆರಂಭಿಸಬೇಕು.
• ಕಡಿಮೆ ದರದಲ್ಲಿ ನಾಲ್ಕು ತಿಂಗಳ ಕಾಲ ತೈಲ ಪೂರೈಕೆ ಕುರಿತು ತೈಲ ಕಂಪನಿಗಳ ಜೊತೆಗೆ ಮಾತುಕತೆ ನಡೆಸಬೇಕು
• ಲಾಂಗ್ ರೂಟ್ ಬಸ್ ನ ಪ್ರಯಾಣ ದರವನ್ನು ಶೇ.30 ರಿಂದ 50 ಪ್ರತಿಶತಃಕ್ಕೆ ಏರಿಕೆ ಮಾಡುವುದು
• ಬಿಎಂಟಿಸಿಯ ಹವಾನಿಯಂತ್ರಿತ ಬಸ್ ಗಳ ಪ್ರಯಾಣ ದರವನ್ನು ಶೇ.30-50ಕ್ಕೆ ಏರಿಕೆ ಮಾಡುವುದು
• ಈ ಬಗ್ಗೆ ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಮಾತನಾಡಿ ಶೇ.50 ರಷ್ಟು ವೇತನವನ್ನು ನಾಲ್ಕು ತಿಂಗಳ ಕಾಲ ಕಡಿತಗೊಳಿಸಲು ಚಿಂತನೆ ನಡೆಸಲು ಸಲಹೆ.
• ಸಂಚರಿಸುವ ಬಸ್ ಗಳ ಸಾಮಾನ್ಯ ನಿರ್ವಹಣೆಯ ವೆಚ್ಚವನ್ನು ಕಡಿಮೆಗೊಳಿಸುವುದು
• ಸಾಲದ ಮೂಲಗಳನ್ನು ಹುಡುಕಿ ಇಲಾಖೆ ಸಿಬ್ಬಂಧಿಗಳ ವೇತನ ಪೂರೈಸುವುದು
• ಹೊಸ ಟಾಯರ್ ಗಳನ್ನು ಖರೀದಿಸುವಂತಿಲ್ಲ, ಉತ್ತಮ ರೀತಿಯಲ್ಲಿರುವ ಟಾಯರ್ ಹೊಂದಿರುವ ಬಸ್ ಗಳನ್ನು ಮಾತ್ರ ಸಂಚಾರಕ್ಕೆ ಅವಕಾಶ.
• ಸ್ಥಳೀಯ ಮತ್ತು ಲಾಂಗ್ ರೂಟ್ ಬಸ್ ಗಳ ಆಸನ ಸಾಮಾರ್ಥ್ಯ ಹೆಚ್ಚಿಸಬೇಕು
• ಬೇರೆ ಯಾವುದಾದರೂ STU ಗೆ ಸಹಾಯವಾಗುವಂತಹ ಸಲಹೆಗಳಿದ್ದರೆ ನೀಡುವಂತೆ ಶಿಫಾರಸ್ಸಿನಲ್ಲಿ ತಿಳಿಸಿದ್ದಾರೆ.

ಈ ಎಲ್ಲ ಅಂಶಗಳನ್ನು ನೋಡಿದಾಗ ಕಂಡಕ್ಟರ್ ಮತ್ತು ಡ್ರೈವರ್ ಗಳಿಗೆ ನಾಲ್ಕು ತಿಂಗಳ ಸರತಿಯಂತೆ‌ ಡ್ಯೂಟಿಗೆ ನಿಯೋಜಿಸಿ ಉಳಿದ ದಿನಗಳ ಸಂಬಳ ರಹಿತ ರಜೆ ನೀಡುವುದು ಎಷ್ಟು ಸರಿ? ಇನ್ನು ಸಾರಿಗೆ ಸಿಬ್ಬಂಧಿಗಳ ವೇತನ ಪಾವತಿಗೆ ಸಾಲದ ಮೂಲ ಹುಡುಕು ಬಗ್ಗೆ ಉತ್ತಮ ಸಲಹೆ ನೀಡಿದ್ದಾರೆ. ಆದರೂ ಇದರಲ್ಲಿನ ಕೆಲವು ಶಿಫಾರಸ್ಸುಗಳು ಮಾತ್ರ ಸಿಬ್ಬಂಧಿಗಳಿಗೆ ಮಾರಕವೇ ಸರಿ. ಸಾರಿಗೆ ಇಲಾಖೆ ಮೂಲತ: ನಷ್ಟ ಅನುಭವಿಸುತ್ತಿದೆ‌‌. ಆದರೆ ನಷ್ಟ ಅನುಭವಿಸುತ್ತಿದೆ ಎಂದ ಮಾತ್ರಕ್ಕೆ ತಳಹಂತದ ನೌಕರರ ವೇತನವನ್ನು ಗುರಿಯಾಗಿಸುವುದು ಎಷ್ಟು ಸರಿ?
ಅಧಿಕಾರಿ ಮಾಡಿದ ಶಿಫಾರಸ್ಸುಗಳೆಲ್ಲವನ್ನು ಸರ್ಕಾರ ಜಾರಿ ಮಾಡುತ್ತೆ ಅಂತೆನಿಲ್ಲ. ಆದರೂ ಒಂದೊಂದು ಸಂದರ್ಭದಲ್ಲಿ ಎಲ್ಲ ಶಿಫಾರಸ್ಸು ಜಾರಿಯಾದರೂ ಆಶ್ಚರ್ಯವೇನು ಇಲ್ಲ. ಇಲಾಖೆ ದುಡಿಯುವ ವರ್ಗದ ಬಗ್ಗೆ ಕಾಳಜಿಯಿಂದ ನಿರ್ಧಾರ ತೆಗೆದುಕೊಂಡ್ರೆ ದುಡಿಮೆಯನ್ನೆ ನಂಬಿದ ಕುಟುಂಬಗಳು ನೆಮ್ಮದಿಯಿಂದ ಇರಲು ಸಾಧ್ಯ.

Exit mobile version