ಕಂಡಕ್ಟರ್, ಡ್ರೈವರ್ ಗಳನ್ನು ಟಾರ್ಗೇಟ್ ಮಾಡಿದ್ರಾ ಡಿಪೋ ಮ್ಯಾನೇಜರ್..?

ಗದಗ: ನಿನ್ನೆಯಷ್ಟೆ ಗದಗ ಕೆಎಸ್ಆರ್ಟಿಸಿ ಡಿಪೋದಲ್ಲಿ ಸಾರಿಗೆ ಸಿಬ್ಬಂಧಿಗಳು ಪ್ರತಿಭಟನೆ ನಡೆಸಿದ್ದರು. ಡ್ರೈವರ್ ಮತ್ತು ಕಂಡಕ್ಟರ್ ಗಳನ್ನು ಡಿಪೋ ಮ್ಯಾನೇಜರ್ ಬಸಪ್ಪ ಪೂಜಾರ್ ಗೇಟ್ ಹೊರಗೆ ಹಾಕಿದರು ಎಂದು ಆರೋಪಿಸಿ ಸಿಬ್ಬಂಧಿ ಪ್ರತಿಭಟಿಸಿದ್ದರು. ಈ ಬಗ್ಗೆ ನಿಮ್ಮ ಉತ್ತರಪ್ರಭ ವರದಿ ಪ್ರಕಟಿಸಿತ್ತು. ಆದರೆ ಮೇಲಧಿಕಾರಿಗಳ ಮನಸ್ಥಿತಿ ಹೇಗಿರುತ್ತದೆ ಎನ್ನುವುದಕ್ಕೆ ಡಿಪೋ ಮ್ಯಾನೇಜರ್ ವರ್ತನೆ ಸಾಕ್ಷಿಯಾಗಿದೆ. ಶ್ರಮದ ಬದುಕಿನಿಂದಲೇ ಸಿಗುವ ವೇತನದಿಂದ ಬದುಕು ಕಟ್ಟಿಕೊಂಡ ಬಡಪಾಯಿಗಳ ಮೇಲೆ ಮೇಲಧಿಕಾರಿಗಳ ದರ್ಪ ಹೇಗೆಲ್ಲ ಇರುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ.

ವ್ಯಕ್ತಿ ಎಂದ ಮೇಲೆ ಪ್ರತಿಯೊಬ್ಬರಿಗೂ ಅವರದ್ದೆ ಆದ ಮರ್ಯಾದೆ ಇರುತ್ತದೆ. ಹೀಗಿದ್ದಾಗಲೂ ನಿನ್ನೆ ಡ್ಯೂಟಿಗೆ ಬಂದ ಸಿಬ್ಬಂಧಿಗಳನ್ನು ಗದಗ ಡಿಪೋ ಮ್ಯಾನೇಜರ್ ಗೇಟ್ ಹೊರಹಾಕಿದರು. ನಾವು ಸ್ವಾಭಿಮಾನಿಗಳು ಬೇಕಾದ್ರೆ ನಾವು ತಡವಾಗಿ ಬಂದಿದ್ದರೆ ನಮ್ಮ ಹಾಜರಿ ಗೈರು ಹಾಕಲಿ ಅದನ್ನ ಬಿಟ್ಟು ಗೇಟ್ ಹೊರಹಾಕುವುದು ಎಂದರೇನು? ನಾವು ಮನುಷ್ಯರೇ ಮೇಲಧಿಕಾರಿಗಳು ಸ್ವಲ್ಪ ಹೆಚ್ಚು ಸಂಬಳ ಪಡಿಯುತ್ತಾರೆ ಎಂದರೆ ಅವರು ಹೇಗೆಲ್ಲ ವರ್ತಿಸಬಹುದಾ? ಎನ್ನುವ ಆಕ್ರೋಶಕ್ಕೆ ಡಿಪೋ ಮ್ಯಾನೇಜರ್ ಕಾರಣವಾಗಿದ್ದರು. ಕೊನೆಗೂ ನಿನ್ನೆ ಮೇಲಧಿಕಾರಿಗಳ ಹಾಗೂ ಸಾರಿಗೆ ನೌಕರರ ಮುಖಂಡರಿಂದ ಸಮಾಧಾನಗೊಂಡು ಡ್ರೈವರ್ ಹಾಗೂ ಕಂಡಕ್ಟರ್ ಗಳು ಕೆಲಸಕ್ಕೆ ಹಾಜರಾಗಿದ್ದರು.

ಆದರೆ ಇದೀಗ ಡಿಪೋ ಮ್ಯಾನೇಜರ್ ಬಸಪ್ಪ ಪೂಜಾರ್ ಅವರ ವರ್ತನೆ ಮತ್ತೊಂದು ಯಡವಟ್ಟಿಗೆ ಕಾರಣವಾಗಿದೆ. ನಿನ್ನೆ ಘಟನೆ ನಂತರ ಇದೀಗ ಸಿಬ್ಬಂಧಿಗಳನ್ನು ಡಿಪೋ ಮ್ಯಾನೇಜರ್ ಟಾರ್ಗೆಟ್ ಮಾಡಿದ್ದಾರೆಯೇ? ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಡಿಪೋ ಮ್ಯಾನೇಜರ್ ಮಾಡಿದ ಯಡವಟ್ಟು

ಮ್ಯಾನೇಜರ್ ಬಸಪ್ಪ ಅವರು ನಿನ್ನೆ ಸಂಜೆಯೇ ಡ್ರೈವರ್ ಹಾಗೂ ಕಂಡಕ್ಟರ್ ಗಳಿಗೆ ಮರುದಿನದ ಅಂದರೆ ಬುಧುವಾರದ ಡ್ಯೂಟಿ ಹಾಕಿದ್ದಾರೆ. ಅದರಲ್ಲಿ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯೊಳಗೆ ಬಹುತೇಕರಿಗೆ ಡ್ಯೂಟಿ ಹಾಕಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಡ್ಯೂಟಿ ಅಂದರೆ ಅವರು ಟಿಪೋಗೆ ಬರುವುದಾದರೂ ಹೇಗೆ? ಕೊರೋನಾದ ಈ ಸಂದಿಗ್ಧತೆಯಲ್ಲಿ ಅವರು ಮನೆಯಿಂದ ಹೇಗೆ ಬರಬೇಕು? ಜೊತೆಗೆ 50 ಕ್ಕೂ ಹೆಚ್ಚು ಸಿಬ್ಬಂಧಿಗಳಿಗೆ ಏಕಕಾಲದಲ್ಲಿಯೇ ಡ್ಯೂಟಿ ಹಾಕಿದ್ದಾರೆ. ಅಂದರೆ ಡ್ಯೂಟಿ ಹಾಕಿದವರ ಎಲ್ಲ ಬಸ್ ಗಳು ಏಕಕಾಲಕ್ಕೆ ಹೊರಡುತ್ತವೆಯೇ? ಈ ಎಲ್ಲ ಪ್ರಶ್ನೆಗಳಿಗೆ ಡಿಪೋ ಮ್ಯಾನೇಜರ್ ಎಡೆ ಮಾಡಿಕೊಟ್ಟಿದ್ದಾರೆ. ಇದನ್ನೆಲ್ಲ ಗಮನಿಸಿದಾಗ ನಿನ್ನೆಯ ತಮ್ಮ ವಿರುದ್ಧ ಹೋರಾಟ ಮಾಡಿರುವ ಉದ್ದೇಶದಿಂದ ಕೆಲವರನ್ನು ಟಾರ್ಗೇಟ್ ಮಾಡಿ ಈ ರೀತಿ ಮಾಡಿದ್ದಾರೆ ಎಂದು ಇದೀಗ ಮತ್ತೆ ಡ್ರೈವರ್ ಹಾಗೂ ಕಂಡಕ್ಟರ್ ಗಳು ಡಿಪೋ ಮ್ಯಾನೇಜರ್ ಬಸಪ್ಪ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗಾದ ಅನ್ಯಾಯ ಪ್ರಶ್ನಿಸಲು ನಮಗೆ ಹಕ್ಕಿದೆ. ಈ ನಿಟ್ಟಿನಲ್ಲಿ ನಿನ್ನೆ ಅಧಿಕಾರಿಗಳ ದಬ್ಬಾಳಿಕೆ ಬೇಸತ್ತು ನಾವು ಪ್ರತಿಭಟನೆ ಮಾಡಿದ್ದೇವೆ. ಆದರೆ ಡಿಪೋ ಮ್ಯಾನೇಜರ್ ಅವರು ಅದನ್ನೆ ಗಮನದಲ್ಲಿಟ್ಟುಕೊಂಡು ಮಾನವೀಯತೆಯನ್ನು ಮರೆತು ತಮಗೆ ತಿಳಿದಂತೆ ಡ್ಯೂಟಿ ಹಾಕಿದರೆ ಹೇಗೆ? ಇದರಿಂದ ನಮಗೆ ಬಹಳಷ್ಟು ತೊಂದರೆಯಾಗಿದೆ ಎಂದು ಉತ್ತರಪ್ರಭಕ್ಕೆ ಹೆಸರು ಹೇಳಲಿಚ್ಛಿಸದ ಕಂಡಕ್ಟರ್ ಒಬ್ರು ಹೇಳಿದರು.

ಕೊರೋನಾ ಭಾಳ್ ಹರಡಾಕತ್ತೈತಿ ಈ ಕೆಲ್ಸಾ ಯಾಕ್ ಬೇಕು ಅಂತ ಮನಿ ಮಂದಿಯಲ್ಲಾ ಹೇಳಾಕತ್ಯಾರ್ರಿ, ಆದ್ರ ಇಷ್ಟ ವರ್ಷ ಕೆಎಸ್ಆರ್ಟಿಸಿ ಅನ್ನಾ ತಿಂದು ಈಗ ಕಷ್ಟ ಬಂದೈತಿ ಅಂತ ಬಿಟ್ ಹೋದ್ರ ಹ್ಯಾಂಗ್ ಅಂತ ನಾನು ಪ್ರಾಮಾಣಿಕ ಕೆಲ್ಸಾ ಮಾಡಾಕತ್ತಿನ್ರಿ, ಆದ್ರ ಮೇಲಧಿಕಾರಿಗಳ ಇಂಥ ಕಿರಿಕಿರಿಗೆ ನೌಕರಿ ಹ್ಯಾಂಗ್ ಮಾಡಬೇಕ್ರಿ. ಇವರ್ ಅಂದಿದ್ ಅನಿಸಕೊಂಡ್, ಹೇಳಿದ್ ಕೇಳ್ಕೊಂಡ್ ಇರಾಕ್ ನಾವು ಗುಲಾಮರಲ್ಲ. ನಾವು ಸರ್ಕಾರದ ಸೇವಕರು ನಮ್ಮ ಕೆಲಸಾ ನಾವು ಸರಿ ಮಾಡಿದ್ರು ವಿನಾ: ಕಾರಣ ಅಧಿಕಾರಿಗಳು ಹಿಂಗ್ ತೊಂದರಿ ಕೊಟ್ರ ಹ್ಯಾಂಗ್ ಅಂತ ಡ್ರೈವರ್ ಒಬ್ರು ಪ್ರಶ್ನಿಸಿದ್ರು.

ಏನೇ ಆಗ್ಲಿ ಒಬ್ಬ ಅಧಿಕಾರಿ ತನ್ನ ಸಿಬ್ಬಂಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಮಾತ್ರ ಆ ಇಲಾಖೆ ಅಭಿವೃದ್ಧಿ ಹೊಂದಲು ಸಾಧ್ಯ. ಆದ್ರೆ ಡಿಪೋ ಮ್ಯಾನೇಜರ್ ಈ ರೀತಿ ವರ್ತಿಸಿ ಸಿಬ್ಬಂಧಿಗಳಿಗೆ ಮೇಲೆ ದರ್ಪ ತೋರುವುದು ಎಷ್ಟು ಸರಿ? ಎಂದು ಸಾರಿಗೆ ನೌಕರರ ಕಾರ್ಮಿಕರ ಸಂಘಟನೆಗಳ ಮುಖಂಡರು ಕೇಳುತ್ತಿದ್ದಾರೆ.

Exit mobile version