ಕಲಬುರಗಿ: ಕ್ವಾರಂಟೈನ್ ಕೇಂದ್ರದಲ್ಲಿ ತಮಗೆ ಚಿಕನ್ ಕೊಡಲಿಲ್ಲ ಎಂದು ಆರೋಪಿಸಿ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿದ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಚಿಕನ್ ಊಟ ಕೊಡದಿದ್ದಕ್ಕೆ ಆಶಾ ಕಾರ್ಯಕರ್ತೆಯನ್ನು ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ್ ಗ್ರಾಮದಲ್ಲಿ ಆಶಾ ಕಾರ್ಯಕರ್ತೆ ರೇಣುಕಾ ಕುಡಕಿ ಹಲ್ಲೆಗೊಳಗಾಗಿದ್ದಾರೆ.
ಚಿಕನ್ ಗಾಗಿ ಸೋಮನಾಥ್ ಕಾಂಬಳೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದ್ದು ಇದರಿಂದ ರೇಣುಕಾ ಕೈ ಮೂಳೆ ಮುರಿದಿದೆ. ಚಿಕಿತ್ಸೆಗಾಗಿ ರೇಣುಕಾ ಅವರನ್ನು ಆಳಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕ್ವಾರಂಟೈನ್ ಇರುವ ಕಾರಣಕ್ಕೆ ಸದ್ಯಕ್ಕೆ ಆರೋಪಿಯನ್ನು ಬಂಧಿಸಿಲ್ಲ. ಕ್ವಾರಂಟೈನ್ ಮುಗಿದ ಮೇಲೆ ಆತನ ವಿರುದ್ಧ ಕ್ರಮ ಕೈಗೊಳ್ಳೋ ಸಾಧ್ಯತೆಗಳಿವೆ.
ಮುಂಬೈನಿಂದ ಬಂದು ಗ್ರಾಮದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿರುವ ಸೋಮನಾಥ, ಊಟಕ್ಕೆ ಚಿಕನ್ ಬೇಕು, ಮಕ್ಕಳಿಗೆ ಚಿಪ್ಸ್ ಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಆಶಾ ಕಾರ್ಯಕರ್ತೆ ರೇಣುಕಾ ಸೋಮನಾಥ್ ಗೆ ತಿಳಿ ಹೇಳಿದ್ದಾರೆ.
ಇದಕ್ಕೆ ಸುಮ್ಮನಾಗದ ಸೋಮನಾಥ ಕೋಪಗೊಂಡ ಹೆಂಡತಿ ಮತ್ತು ಕುಟುಂಬದ ಐವರು ಸದಸ್ಯರು ಸೇರಿ ರೇಣುಕಾ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಲ್ನೋಟಕ್ಕೆ ಇದು ಕೋಳಿಗಾಗಿ ಜಗಳದಂತೆ ಕಂಡು ಬಂದರೂ ಆಂತರಿಕ ಕಾರಣ ಬೇರೆಯೇ ಇದೆ ಎನ್ನುವ ಮಾತು ಕೇಳಿ ಬರುತ್ತಿವೆ.
