ಗ್ರಾಮಪಂಚಾಯಿತಿಗೆ ಸದಸ್ಯರ ನೇಮಕ: ಕಾಂಗ್ರೆಸ್ ವಿರೋಧ


ಬೆಂಗಳೂರು: ಅವಧಿ ಪೂರ್ಣಗೊಳ್ಳುವ ಗ್ರಾಮ ಪಂಚಾಯಿತಿಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಅವಕಾಶ ನೀಡದಂತೆ ಹಾಗೂ ಪಂಚಾಯಿತಿಗಳಿಗೆ ಚುನಾವಣೆ ನಡೆಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರ ನಿಯೋಗ ಮೂಲಕ ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿತು.

ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಿರಿಯ ನಾಯಕರಾದ ಎಸ್.ಆರ್.ಪಾಟೀಲ್, ಎಚ್.ಕೆ.ಪಾಟೀಲ್ ಮೊದಲಾದ ನಾಯಕರು ಹಾಜರಿದ್ದರು.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಗ್ರಾಮ ಪಂಚಾಯತಿಗಳ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದರೂ ಚುನಾವಣಾ ಆಯೋಗ ಗ್ರಾಮ ಪಂಚಾಯತಿ ಚುನಾವಣಾ ಪ್ರಕ್ರಿಯೆಯನ್ನು ಸಂವಿಧಾನದ ಪರಿಚ್ಛೇದ 1950 ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಕಾಯ್ದೆ 1993ರ ಆಶಯದಂತೆ ಆರಂಭಿಸಿಲ್ಲದಿರುವುದು ಸಂವಿಧಾನ ವಿರೋಧಿ ನಡೆ ಎಂದಿದ್ದಾರೆ.

SavePanchayatRaj ಸಂವಿಧಾನದ 243ಇ ವಿಧಿಯಂತೆ ಗ್ರಾಮ ಪಂಚಾಯತಿಗೆ ಮೊದಲ ಸಭೆಯ ದಿನದಿಂದ 5 ವರ್ಷ ಅಧಿಕಾರವಿರುತ್ತದೆ. 2015ರಲ್ಲಿ ರಾಜ್ಯದ 6024 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆದಿತ್ತು. ಬಹುಪಾಲು ಗ್ರಾಮ ಪಂಚಾಯತಿಗಳ ಅಧಿಕಾರಾವಧಿ ಜೂನ್-ಜುಲೈ ತಿಂಗಳಲ್ಲಿ ಮುಕ್ತಾಯವಾಗುತ್ತದೆ. ಇಲ್ಲಿಯವರೆಗೆ ಸರ್ಕಾರ ಏನು ಮಾಡುತ್ತಿತ್ತು? ಎಂದು ಅವರು ಪ್ರಶ್ನಿಸಿದರು.

ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತಿಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆಗಳನ್ನು ನಡೆಸದೆ ಇರುವುದರಿಂದ ಗ್ರಾಮಗಳ ವಿಕೇಂದ್ರೀಕೃತ ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆಯನ್ನು ದಮನ ಮಾಡಿದಂತಾಗುತ್ತದೆ. ಇದರಿಂದ ಸಂವಿಧಾನದ 73ನೇ ತಿದ್ದುಪಡಿಯ ಧ್ಯೇಯೋದ್ದೇಶಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದಿದ್ದರು.
ಪಂಚಾಯತ್ ರಾಜ್ ಕಾಯ್ದೆ ಪ್ರಕಾರ, ಚುನಾವಣಾ ಆಯೋಗ ಪಂಚಾಯತಿಗಳ ಅಧಿಕಾರಾವಧಿ ಮುಗಿಯುವ ಮೊದಲೆ ಚುನಾವಣಾ ಪ್ರಕ್ರಿಯೆ ಮುಗಿಸಬೇಕಾಗುತ್ತದೆ. ಇದಕ್ಕಾಗಿ ಚುನಾವಣಾ ವೇಳಾಪಟ್ಟಿ ಮತ್ತು ಮೀಸಲಾತಿ ವಿವರಗಳನ್ನು ಚುನಾವಣೆಗಳ ಅಧಿಸೂಚನೆ ಹೊರಡಿಸುವ 45 ದಿನ ಮೊದಲೇ ಹೊರಡಿಸಬೇಕಾಗುತ್ತದೆ. ಆ ಪ್ರಕ್ರಿಯೆ ಯಾಕೆ ಪ್ರಾರಂಭಿಸಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.
ಗ್ರಾಮ ಪಂಚಾಯತಿಗಳ ಅಧಿಕಾರಾವಧಿ ಮುಗಿದು ಹೋಗುತ್ತಿದ್ದರೂ ಮೀಸಲಾತಿ ನಿಗದಿ, ವೇಳಾಪಟ್ಟಿಗಳ ಪ್ರಕಟ ಮುಂತಾದ ಯಾವುದೇ ಚುನಾವಣಾ ಪ್ರಕ್ರಿಯೆಗಳನ್ನು ಯಾಕೆ ಪ್ರಾರಂಭಿಸಿಲ್ಲ? ಈ ಮೂಲಕ ಚುನಾವಣಾ ಆಯೋಗ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ಉಲ್ಲಂಘನೆ ಮಾಡಿದಂತಾಗಿದೆ ಎಂದಿದ್ದಾರೆ.
ಭಾರತ ಸಂವಿಧಾನದ ಅನುಚ್ಛೇದ 243ಇ[3]ರ ಅನ್ವಯ ಯಾವುದೇ ಪಂಚಾಯತಿಯ ಐದು ವರ್ಷಗಳ ಅಧಿಕಾರಾವಧಿ ಮುಕ್ತಾಯಗೊಳ್ಳುವ ಮೊದಲೇ ಚುನಾವಣೆಗಳನ್ನು ನಡೆಸಬೇಕೆಂಬ ಸ್ಪಷ್ಟ ನಿರ್ದೇಶನವಿದೆ. ಆದ ಕಾರಣ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವುದು ರಾಜ್ಯ ಚುನಾವಣಾ ಆಯೋಗದ ಕಡ್ಡಾಯ ಕರ್ತವ್ಯವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮ ಪಂಚಾಯತಿಗಳಿಗೆ ಸದಸ್ಯರನ್ನು ಚುನಾಯಿಸುವುದು ಅಸಾಧ್ಯವಾದಾಗ ಅಥವಾ ನಿರಂತರವಾಗಿ 2 ಚುನಾವಣೆ ನಡೆಸಿದರೂ ಸದಸ್ಯರ ಆಯ್ಕೆ ಆಗದಿದ್ದರೆ ಮಾತ್ರ ಆಡಳಿತ ಸಮಿತಿಯನ್ನು ನೇಮಿಸಬಹುದು. ಇಂಥಹ ಯಾವುದೇ ಪರಿಸ್ಥಿತಿ ಈಗ ಉದ್ಭವವಾಗಿಲ್ಲ. ಹಾಗಾಗಿ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 8 ರಂತೆ ಆಡಳಿತ ಸಮಿತಿಗಳನ್ನು ರಚಿಸಲು ಅವಕಾಶವಿಲ್ಲ ಎಂದಿದ್ದರು.
ರಾಜ್ಯ ಚುನಾವಣಾ ಆಯೋಗವು ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ನ್ಯಾಯಬದ್ಧವಾಗಿ, ಪಕ್ಷಪಾತರಹಿತವಾಗಿ ರಾಷ್ಟ್ರದ ಸಂವಿಧಾನ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರಂತೆ ನೈಜ ಸ್ಫೂರ್ತಿಯಿಂದ ವರ್ತಿಸಿ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯಬೇಕೆಂದು ಆಗ್ರಹಿಸುತ್ತೇವೆ ಎಂದು ಅವರು ಹೇಳಿದ್ದಾರೆ.

Exit mobile version