ಇನ್ನೇನು ಸೂರ್ಯಾ ಮುಳಗೋ ಹೊತ್ನ್ಯಾಗ ತಲಿ ಕೆರ್ಕೊಂಡು ಮುಗಿಲು ನೋಡ್ಕೊಂಡ್ ಕುಂತ ಗಂಗ್ಯಾ ಮುಗಿಲಾ…. ಮೈಮ್ಯಾಲ್ ಬಿಳತೈತೇನೋ ಅನ್ನೋವಂಗ ಯೋಚನೆ ಮಾಡ್ತಾ ಕುಂತಿದ್ದ. ಇದೇನ್ ಈ ಸಂಜಿ ಹೊತ್ನಾಗ್ ಗಂಗ್ಯಾ ಗುಂಗು ಬಡಿದವರಂಗ ಕುಂತಾನಲ್ಲ? ಅಂತಾ ಯೋಚನೆ ಮಾಡ್ಕೊಂತ ಬಂದಾವ ಕ್ವಾಟರ್ ಕಟ್ಟ್ಯಾ. ಇವ್ನ ಹೆಸ್ರು ಕಟ್ಟೆಪ್ಪ ಅಂತಾರಿ. ಆದ್ರ ಇವನಿಗೆ ಕ್ವಾಟರ್ ಮ್ಯಾಲೀನ್ ಪ್ರೀತಿ ಕಂಡು ಜನಾ ಇಂವ್ಗಾ ಕ್ವಾಟರ್ ಕಟ್ಟ್ಯಾ ಅಂತ ಕರಿತಾರ್ರಿ. ನಮ್ಮ ಕಟ್ಯಾ ಜೀವನದಾಗ ಎಂದು ಸಾರಾಯಿ ಕುಡಿದಂಗ ಮಲಗ್ದವನಲ್ಲ. ಆದ್ರ ಈ ಕೊರೋನಾ ಕಟ್ಟ್ಯಾಗ ಭಾಳ್ ಕೆಟ್ ಪಾಠ ಕಲಿಸ್ತು ನೋಡ್ರಿ. ಒಂದುವರಿ ತಿಂಗಳದಿಂದ ಸಾರಾಯಿ ಇಲ್ದ ಕಂಗಾಲಾಗಿದ್ದ ಕಟ್ಯಾಗ ಈಗ ಮುಗದಾಣ ಬಿಚ್ಚಿ ಬಾನಿಗೆ ಹೊಡದಂಗ ಆಗೈತಿ. ಇನ್ನೇನು ಸಂಜಿ ಆತಲ್ಲ, ಸ್ವಲ್ಪ ಹೊಂಡಾ ಹಾರಿ ಬಂದ್ರಾತು ಅಂತ ಹೊಂಟಿದ್ದ ಕಟ್ಯಾಗ ಗಂಗ್ಯಾನ್ ಈ ಸ್ಥಿತಿ ನೋಡಿ ಸ್ವಲ್ಪ ಯೋಚನೆ ಮಾಡಾಕತ್ತ. ಎಷ್ಟ ಆದ್ರೂ ಕಟ್ಟ್ಯಾ-ಗಂಗ್ಯಾ ಚೆಡ್ಡಿ ದೋಸ್ತ್ರು, ಅಷ್ಟ ಅಲ್ರಿ ಇಬ್ರು ಗ್ಲಾಸ್ ಮೇಟ್ಸ್..!
ಕಟ್ಟ್ಯಾನ್ ನೋಡಿದ ಗಂಗ್ಯಾ ಏನಿಲ್ಲಲೇ ಕಟ್ಟ್ಯಾ..! ಇದ್ದ ರೊಕ್ಕ ಖಾಲಿಯಾಗಿ ಕಿಸೆ ಬರಿದಾಗೈತಿ. ಮನ್ಯಾಗಿದ್ದ ಸಣ್ಣ ಪುಟ್ಟ ಸಾಮಾನ ಮಾರಿ ಸ್ವಲ್ಪ ದಿನ ಕುಡಿದ್ಯಾ. ಈಗ ನೋಡಿದ್ರ ಕಿಸಿದಾಗ ನಯಾಪೈಸೆ ಇಲ್ಲ. ಇವ್ನೌನ್ ಸಂಜಿ ಆಗ್ತಿದ್ದಂಗ ತಲಿ ದಿಂಮ್ ಹಿಡದಂಗಾಕ್ಕೈತಿ ಅಂದ. ಗೆಳೆಯನ ಮಾತು ಕೇಳಿ ಕಟ್ಟ್ಯಾನ್ ಕರುಣೆ ಕಟ್ಟಿ ಒಡಿತ ನೋಡ್ರಿ. ಬಾಲೇ ದೋಸ್ತಾ ಕಟ್ಟ್ಯಾ ಇರೋ ಮಟಾ ಕುಡಿಯಾಕ್ ಯಾಕ್ ಚಿಂತಿ. ಹೋಗಂಬಾ ಅಂತಾ ಕರ್ಕೊಂಡ ಹ್ವಾದ.
ಬಾರ್ ಮುಟ್ಟಿ ಕ್ವಾಟರ್ ತುಗೊಳ್ಳೊದ್ರಾಗ ಕತ್ತಲ ಕವಿದಿತ್ತು. ಈಗ ಸರ್ಕಾರ ಬರೀ ಪಾರ್ಸಲ್ ಗೆ ಅಷ್ಟ ಅವಕಾಶ ಕೊಟ್ಟಿರಾದ್ರಿಂದ ಎಲ್ಲಿ ಕುಡಿಬೇಕು ಅಂತ ಜಾಗ ಹುಡಕಾದ ಭಾಳ್ ಕಷ್ಟದ್ ಕೆಲ್ಸಾ ಆಗೈತಿ. ಈ ಸಮಸ್ಯೆ ಇಂದ ಶಾಲಿ-ಗೀಲಿ ಸಹಿತ ಭಾಳ್ ಮಂದಿಗೆ ಕಣ್ಣಿಗೆ ಕಾಣ್ವಲ್ವು. ಶಾಲಿ ಕಟ್ಟಿ, ಅಂಗಳ ಎಲ್ಲಿ ನೋಡಿದ್ರು ಸಾರಾಯಿ ಸೀಸೆನಾ ತುಂಬಿರ್ತಾವು. ಆದ್ರ ನಮ್ ಕಟ್ಯಾ-ಚೆನ್ನ ಮಾತ್ರ ಆ ತಪ್ಪು ಮಾಡಲಿಲ್ಲ. ಊರ ಸಮೀಪ ಇರೋ ಹೊಲವಾರಿ ಹಿಡದ್ ಹೊಂಟ್ರು. ಹಂಗು ಹಿಂಗೂ ಮಾಡಿ ಒಂದ್ ಜಾಗ ಹುಡುಕಿ ಕುಂತ ಖಡ್ರಕ್ ಅನಿಸಿ ಗ್ಲಾಸಿಗೆ ಯಣ್ಣಿ ಹಾಕ್ಕೊಳ್ಳೋದ್ರಾಗ ಅಲ್ಲೆ ಸಮೀಪದ್ರಾಗ ಚೀಯರ್ಸ್ ಅನ್ನೋ ಶಬ್ದ ಕೇಳಿತು. ಹೊಗ್ಗೋ ನಿನ್ನ ನಮ್ಮಂಗ ಎಷ್ಟ ಮಂದಿ ತೊಂದರಿ ಅನುಭವಿಸಾಕತ್ಯಾರಲ್ಲ ಅಂತ ತಮ್ಮ ತಮ್ಮ ನೋವು ಇಬ್ರು ಹಂಚಿಕೊಂಡ್ರು. ಅಷ್ಟರೊಳಗ ಇಬ್ರು ಗೆಳೆಯಾರ್ ಮಾತು ಮುಂದುವರಿತು. ಅಲ್ಲೋ ಈ ಕುಡಿತ ನಮ್ ಚಟಾ, ನಮ್ ಚಟಾ ನಮ್ ಹದಬಸ್ತ್ ನ್ಯಾಗಿರಬೇಕಪಾ, ಯಣ್ಣಿ ಸಿಗಲಿಲ್ಲಾ ಅಂತ ಅದೆಷ್ಟೋ ಮಂದಿ ಸಾಯಾಕತ್ಯಾರ, ಇನ್ನು ಗೆಳಿಯಾರ್ ಕೂಡಿ ಪಾರ್ಟಿ ಮಾಡುವಾಗ ಇದ್ದ ಗೆಳೆಯಾರೊಳಗ ಒಬ್ಬಾಂವ ಹೆಚ್ಚ ಕುಡಿದ ಅಂತ ಅವ್ನ ಮರ್ಡರ್ ಮಾಡ್ಯಾರ್ ಇಂಥದ್ದೆಲ್ಲ ಒಳ್ಳೆದಲ್ಲ. ಕುಡಿದ್ ನಿಶೆದಾಗ ಮಾನವೀಯತೆ, ಸಂಬಂಧ ಮರಿಬಾರ್ದು. ನೀನು ಯಣ್ಣಿ ಸಿಗಲಿಲ್ಲ ಅಂತ ಮುಗಿಲ ಮ್ಯಾಲ್ ಬಿದ್ದವರಂಗ ಕುಂದ್ರೋದು ಬಿಡಲೆ ಗಂಗ್ಯಾ ಅಂತ ಗೆಳೆಯಾಗ ಕ್ವಾಟರ್ ಕಟ್ಟ್ಯಾ ಬುದ್ದಿ ಹೇಳಿದ. ಮಾತಾಡ್ತಾ ಮಾತಾಡ್ತಾ ಗಂಗ್ಯಾ ಗ್ಲಾಸಿಗೆ ಯಣ್ಣಿ ಹಾಕಿ ಕಟ್ಟ್ಯಾಗ್ ಒಂದು ಗ್ಲಾಸ್ ಕೊಟ್ಟು ಚೆಸ್ ಅಂದ.
ಹೇ..! ಇದೇನ್ಲೆ ಗಂಗ್ಯಾ ಚೆಸ್-ಪಸ್ ಅನ್ನಾಕತ್ತಿಯಲ್ಲ. ಹೇ ಮತ್ತಾ ನಂಗೇನ್ ಗೊತ್ತು ಇಲ್ಲೆ ಸಮೀಪ ಕುಂತೋರು ಹಂಗಂದ್ರಲ್ಲ ಅದಕ್ ಹಂಗ ಅಂದ ಕುಡಿದ್ರ ಸಾರಾಯಿ ಹುಲಸ ಹೆಚ್ಚಾಕೈತೇನೋ ಅಂತ ನಾನು ಅಂದೇ ನೋಡ್ಪಾ. ಹೊತ್ತಾಕ್ಕೈತಿ ತಡ್ಕೊಳ್ಳೊ ಶಕ್ತಿ ನಂಗಿಲ್ಲ ಅಂತ ಸಾರಾಯಿ ಸಿಕ್ಕ ಖುಷಿಯೊಳಗ ಮತ್ತೊಮ್ಮೆ ಜೋರಾಗಿ ಚೆಸ್ ಅಂತ ಕೂಗಿದ. ಆಗ ಕಟ್ಟ್ಯಾ..!, ಶ್..!, ಅದು ಚೆಸ್ ಅಲ್ಲಲೇ ಗಂಗ್ಯಾ ಚೀಯರ್ಸ್… ಅನ್ನು ಅಂದ. ಗೆಳಿಯಾ ಹೇಳದಂಗ ಮತ್ತೊಮ್ಮೆ ಗಂಗ್ಯಾ ಜೋರಾಗಿ ಚೀಯರ್ಸ್ ಅಂತ ಕೂಗಿದ. ಗಂಗ್ಯಾ ಕೂಗಿದ್ದ ತಡಾ ಹೊಲದ ಬದುವಿನಗಿಂತ ಸ್ವಲ್ಪ ಮುಂದ ಜ್ವಾಳದ್ ಸಾಲಿನ್ಯಾಗ ಕನ್ನಡ ಪಂಡಿತ ಒಬ್ಬಾಂವ ಟವಲ್ ಹೊಚಗಕೊಂಡು ಮುಖ ಮುಚ್ಕೊಂಡು ಯಣ್ಣಿ ಹೊಡಿಯಾಕತ್ತಿದ್ದ ಕತ್ತಲಾಗಿದ್ರಿಂದ ಅವನ್ ಮುಖ ಇವರಿಗೆ ಕಾಣಲಿಲ್ಲ. ಇವರ ಚೆಸ್-ಚೀಯರ್ಸ್ ವಾದಾ ನೋಡಿ ಪಂಡಿತ ಬಂದ್ ಬಿಟ್ಟಾ.
ಶು..!, ಕರ್ನಾಟಕದಾಗ ಹುಟ್ಟಿ ಹಂಗೆಲ್ಲ ಇಂಗ್ಲೀಷ್ ನ್ಯಾಗ್ ಹೇಳ ಬ್ಯಾಡ್ರಿ ಅಂದ, ಕನ್ನಡಾಭಿಮಾನಿಗಳು ಯಾರಾದ್ರು ಕೇಳಿಸಿಕೊಂಡ್ರ ಕುಡುಕರೆಲ್ಲ ಕನ್ನಡ ಬಿಟ್ಟು ಇಂಗ್ಲೀಷ್ ಮಾತಾಡಾಕತ್ಯಾರ ಅಂತ ಸ್ಟ್ರೈಕ್ ಮಾಡಿ ಬಾರ್ ಬಂದ್ ಮಾಡಿಸಿಗಿಡಿಸ್ಯಾರೋ ಮಾರಾಯ್ರ. ಹಂಗೆಲ್ಲ ಹೇಳಾಕ್ ಹೋಗ್ ಬ್ಯಾಡ್ರಿ ಅಂದ. ಮತ್ತ ಇದನ್ನ ಕನ್ನಡದಾಗ ಹೇಳಬಹುದೇನ್ರಿ ಅಂತ ಪಂಡಿತಗ ಕೇಳಿದ್ರು ಇಬ್ರು ಗೆಳೆಯಾರು.
ಅದಕ್ಕ ಪಂಡಿತ ಹೇಳಿದ ಉಲ್ಲಾಸ ಉತ್ಸಾಹ ಸತ್ಸಂಗ ಚಿರಾಯುವಾಗ್ಲಿ ಅಂತ ಹೇಳಬೇಕು ನೋಡಪಾ. ಅಂದ ಇಷ್ಟುದ್ದದ್ದು ಸಾಲ ಹೇಳಾಕ್ ಸ್ವಲ್ಪ ಕಷ್ಟ ಆಗಿ ಸಾರಾಯಿ ಕುಡಿದು ಮನಿಗೆ ಬರೋ ದಾರಿಗುಂಟ ಒಬ್ಬರಿಗೊಬ್ಬರು ಇದನ್ನ ಬಾಯಿಪಾಠ ಮಾಡ್ಕೊತಾ ಬಂದ್ರು. ಮನಿ ಬರೋದ್ರಾಗ ಕುಡಿದ ನಿಶೆದಾಗ ಉಲ್ಲಾಸ, ಉತ್ಸಾಹ ಅಂತೆಲ್ಲ ಹೇಳಿ ಹೇಳಿ ನಿಶೆನಾ ಇಳಿದ್ ಹೋತು ನೋಡ್ರಿ.
- ಮಾತಿನ ಮಲ್ಲ
