ಮೈಸೂರು: ಲಾಕ್ ಡೌನ್ ನಿಂದ ಬಡವರ ಬದುಕು ಬೀದಿಗೆ ಬಂದು ನಿಂತಿದೆ. ಜಿಲ್ಲೆಯ ಬಣ್ಣಾರಿ ಸಕ್ಕರೆ ಕಾರ್ಖಾನೆಯ 350ಕ್ಕೂ ಹೆಚ್ಚು ಕಾರ್ಮಿಕರು ಸದ್ಯ ಇದರಿಂದಾಗಿ ಬೀದಿಗೆ ಬಂದಿದ್ದಾರೆ. ಹಲವು ದಿನದಿಂದ ಸಕ್ಕರೆ ಕಾರ್ಖಾನೆ ಆವರಣದಲ್ಲಿಯೇ ಇದ್ದ ಉತ್ತರ ಭಾರತ ಮೂಲದ ಈ ಕಾರ್ಮಿಕರೀಗ ತಮ್ಮನ್ನು ತವರಿಗೆ ಕಳುಹಿಸಿ ಕೊಡಿ ಎಂದು ನಂಜನಗೂಡು ತಹಶೀಲ್ದಾರ್‌ಗೆ ದುಂಬಾಲು ಬಿದ್ದಿದ್ದಾರೆ.
ತಮಗೆ ಕಳೆದ ಎರಡು ತಿಂಗಳಿಂದ ಸಂಬಳ ನೀಡಿಲ್ಲ. ಹಲವು ದಿನದಿಂದ ಊಟಕ್ಕೂ ಕಷ್ಟಪಡುತ್ತಿದ್ದೇವೆ ಎಂದು ಕಾರ್ಮಿಕರು ನೋವು ವ್ಯಕ್ತಪಡಿಸುತ್ತಿದ್ದಾರೆ. ಉತ್ತರಾಂಚಲ, ಜಾರ್ಖಂಡ್, ಬಿಹಾರದ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಚೆಟ್ಟಿನಾಡು ಎಂಬ ಗುತ್ತಿಗೆ ಸಂಸ್ಥೆ ಇವರನ್ನೆಲ್ಲ ಬಿಹಾರ ಮತ್ತು ಉತ್ತರ ಪ್ರದೇಶದಿಂದ ಕರೆ ತಂದಿತ್ತು. ಆದರೆ ಒಂದು ತಿಂಗಳಿಂದ ಚೆಟ್ಟಿನಾಡು ಗುತ್ತಿಗೆ ಸಂಸ್ಥೆಯ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂಬುದಾಗಿ ಕಾರ್ಮಿಕರು ಆರೋಪಿಸಿದ್ದಾರೆ.
