ಗದಗ: ಈಗಾಗಲೇ ಒಂದುವರೆ ತಿಂಗಳ ಲಾಕ್ ಡೌನ್ ನಿಂದಾಗಿ ಬಹುತೇಕ ಬಡ ಹಾಗೂ ಮದ್ಯಮ ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಿವೆ. ಇದರಿಂದಾಗಿ ಸಾಕಷ್ಟು ಜನ ತಮ್ಮದೇ ಆದ ರೀತಿಯಲ್ಲಿ ಜನ ಸೇವಾ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಮುಂಡರಗಿ ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್ ಕೂಡ ಇಡೀ ಮುಂಡರಗಿ ತಾಲೂಕಿಗೆ ಆಹಾರ ಕಿಟ್ ಹಾಗೂ ತರಕಾರಿ ವಿತರಿಸಲು ಮುಂದಾಗಿದ್ದಾರೆ.
ಬಸವೇಶ್ವರ ವಿದ್ಯಾ ಸಮಿತಿ ಕಲಕೇರಿ, ಶ್ರೀ ಎಸ್.ಎಸ್.ಪಾಟೀಲ ಪ್ರತಿಷ್ಠಾನ, ಶ್ರೀ.ಎಸ್.ಎಸ್.ಪಾಟೀಲ್, ಮಾಜಿ ಸಹಕಾರ ಸಚಿವರು, ಕರ್ನಾಟಕ ಸರಕಾರ ಹಾಗೂ ಶಾಸಕರು ಮುಂಡರಗಿ ಮತಕೇತ್ರ ಮತ್ತು ಮುಂಡರಗಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಆಡಳಿತ ಮಂಡಳಿ, ತಾಲೂಕಿನ ವಿವಿಧ ಸಹಕಾರಿ ಸಂಘಗಳ ಆಡಳಿತ ಮಂಡಳಿ ಹಾಗೂ ಶ್ರೀಮತಿ ಗಂಗಮ್ಮ ಎಸ್. ಪಾಟೀಲ ಮೆಮೊರಿಯಲ್ ಬಾಗೇವಾಡಿ, ಶ್ರೀಮತಿ ಸುಶೀಲಮ್ಮ ಎಸ್. ಪಾಟೀಲ ಮೆಮೊರಿಯಲ್ ಗಂಗಾಪೂರ, ಶ್ರೀ ಶಿವಕುಮಾರಗೌಡ ಎಸ್. ಪಾಟೀಲ, ಅಧ್ಯಕ್ಷರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಡರಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮುಂಡರಗಿ ತಾಲೂಕಿನ ಎಲ್ಲ ಗ್ರಾಮಗಳ ಪ್ರತಿ ಮನೆಗೂ ಆಹಾರ ಕಿಟ್ ಹಾಗೂ ತರಕಾರಿ ವಿತರಣೆಗೆ ಮುಂದಾಗಿದ್ದಾರೆ.
ಮೇ.5 ರಂದು ಡಂಬಳ ಗ್ರಾಮದಿಂದ ಈ ಕಾರ್ಯ ಆರಂಭವಾಗಲಿದೆ. ಈಗಾಗಲೇ ತಾಲೂಕಿನ ಒಟ್ಟು 60 ಗ್ರಾಮಗಳ ಪೈಕಿ ಅಂದಾಜು 30,000 ಮನೆಗಳಿಗೆ ಕಿಟ್ ಪೂರೈಕೆಯ ಯೋಜನೆ ಹಮ್ಮಿಕೊಂಡಿದ್ದಾರೆ. ದಿನ ಬಳಕೆಯ ಆಹಾರ ಸಾಮಾಗ್ರಿ ಹಾಗೂ ಸ್ವತಃ ರೈತರಿಂದ ಖರೀದಿಸಿದ ತರಕಾರಿಯನ್ನು ಪ್ರತಿ ಮನೆಮನೆಗೆ ವಿತರಿಸಲಾಗುತ್ತದೆ.
ಕೊರೋನಾ ಸೊಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ದೇಶವನ್ನು ಈಗಾಗಲೇ ಲಾಕ್‌ಡೌನ್ ಮಾಡಲಾಗಿದೆ. ಇದರಿಂದ ಹಲವಾರು ಕುಟುಂಬಗಳಿಗೆ ಕೆಲಸವಿಲ್ಲದೆ ಹಣಕಾಸಿನ ತೊಂದರೆಯಾಗಿ ಆಹಾರ ಹಾಗೂ ತರಕಾರಿ ತೆಗೆದುಕೊಳ್ಳಲು ತೊಂದರೆಯಾಗಿದೆ. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಬ್ಬರ ಸಂಕಷ್ಟಕ್ಕೆ ಮತ್ತೊಬ್ಬರು ಸ್ಪಂದಿಸುವುದು ಮಾನವೀಯ ಗುಣವಾಗಿದೆ. ಈ ಕಾರಣದಿಂದ ಮುಂಡರಗಿ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ವಾಸವಾಗಿರುವಂತಹ ಕುಟುಂಬಗಳಿಗೆ ದಿನಬಳಕೆಗೆ ಬೇಕಾಗುವಂತಹ ಆಹಾರ ಧಾನ್ಯ ಪದಾರ್ಥಗಳು ಹಾಗೂ ರೈತರಿಂದ ನೇರವಾಗಿ ಖರೀದಿಸಿರುವಂತಹ ತರಕಾರಿ ವಿತರಣೆ ಮಾಡಲು ನಿರ್ಣಯಿಸಲಾಗಿದೆ ಅಂತಾರೆ ಶಿವಕುಮಾರಗೌಡ.
ಮುಂಡರಗಿ ಪಟ್ಟಣದ ಎಪಿಎಂಸಿ ಗೋಡೌನ್ ನಲ್ಲಿ ಕಿಟ್ ಗಳ ಪ್ಯಾಕಿಂಗ್ ಕಾರ್ಯ ಭರದಿಂದ ಸಾಗಿದೆ. ಇವರ ಈ ಜನಪರ ಕಾರ್ಯದ ಸಹಭಾಗಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯರು, ಸಹಕಾರಿಗಳು, ಯುವಕರು ಬೆಂಬಲವಾಗಿ ನಿಂತಿದ್ದು, ಪ್ರಸ್ತುತ ದಿನಮಾನಗಳಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಅನಿವಾರ್ಯತೆ ಇದೆ.
