ಬೀದರ್: ಲಾಕ್ ಡೌನ್ ನಿಂದಾಗಿ ಅದೆಷ್ಟೋ ಜನರು ಆಹಾರಕ್ಕೆ ಪರಿತಪಿಸುವಂತಾಗಿದೆ. ಅಂಥದ್ದರಲ್ಲ ಮೂಕ ಪ್ರಾಣಿಗಳ ಮೂಕ ವೇದನೆ ಯಾರಿಗೆ ಅರ್ಥವಾಗಬೇಕು ಹೇಳಿ?
ಆದರೆ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಹುಮನಾಬಾದ್ ರಸ್ತೆಯಲ್ಲಿರುವ ಚೇಕ್ ಪೊಸ್ಟ್ ನಲ್ಲಿ ಮಂಗಗಳಿಗೆ ಆಹಾರ ನೀಡುವ ಮೂಲಕ ಪೊಲೀಸರು ಪ್ರಾಣಿಗಳ ಹಸಿವಿಗೆ ಮಿಡಿದಿದ್ದಾರೆ. ಈ ಮೂಲಕ ಖಾಕಿಯೊಳಗಿನ ಅಂತಃ ಕರಣದ ಮನಸ್ಸು ಜನರ ಮೆಚ್ಚುಗೆಗೆ ಕಾರಣವಾಗಿದೆ.
ಪೇದೆಗಳಾದ ಕನಕ ಪೂಜಾರಿ ಹಾಗೂ ಶರಣು ಪವಾರ ಮಂಗಗಳಿಗೆ ಬಿಸ್ಕೇಟ್, ಆಹಾರ, ತರಕಾರಿ ಹೀಗೆ ನಿತ್ಯ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಲಾಕ್ ಡೌನ್ ಹಿನ್ನೆಲೆ ಪ್ರಾಣಿಗಳಿಗೂ ಕೂಡ ಆಹಾರ ಸಿಗದಂತಾಗಿದೆ. ಹೀಗಾಗಿ ಇಲ್ಲಿನ ಚೆಕ್ ಪೋಸ್ಟ್ ಬಳಿ ಇರುವ ಮರಗಳಲ್ಲಿ ಬೀಡಾರ ಹೂಡಿರುವ ವಾನರ ಸೇನೆಯ ಆರ್ಥನಾದವನ್ನು ಈ ಪೊಲೀಸರು ಅರ್ಥೈಸಿಕೊಂಡಿದ್ದಾರೆ. ಮಂಗಗಳೊಂದಿಗೆ ಸ್ನೇಹ ಬೆಳೆಸುವ ಮೂಲಕ ನಿತ್ಯ ಆಹಾರ ಪೂರೈಸಿ ಪ್ರಾಣಿಗಳ ಮೂಕ ವೇದನೆಗೆ ಸ್ಪಂದಿಸಿದ್ದಾರೆ.
ಪೊಲೀಸರು ಅದೆಷ್ಟೋ ಕಡೆಗಳಲ್ಲಿ ಹಸಿದ ಹೊಟ್ಟೆಗೆ ಅನ್ನ ನೀರು ನೀಡಿ ಮಾನವೀಯತೆ ಪ್ರದರ್ಶಿಸಿದ್ದಾರೆ. ಆದರೆ ಇಲ್ಲಿ ಪ್ರಾಣಿಗಳ ಮೇಲೂ ದಯೆ ತೋರಿರುವ ಮೂಲಕ ಪೊಲೀಸರ ಖಾಕಿಯೊಳಗಿನ ಕಾಳಜಿ ತೋರಿಸಿದ್ದಾರೆ.
ಕೊರೋನಾ ಸಂಕಷ್ಟ ಕಾಲದಲ್ಲಿಯೂ ಒತ್ತಡದ ಕೆಲಸದ ಮದ್ಯದಲ್ಲಿಯೂ ಇಂಥಹ ಜನಪರ, ಜೀವಪರ ಕಾರ್ಯಗಳಿಗೆ ಮಿಡಿಯುತ್ತಿರುವ ಪೊಲೀಸರಿಗೊಂದ ಸಲಾಂ.
