ಸಿನಿಪ್ರಿಯರಿಗೆ ಸಿಹಿ ಸುದ್ದಿ; ಯೂಟ್ಯೂಬ್‌ನಲ್ಲಿ 10 ದಿನಗಳ ಜಾಗತಿಕ ಸಿನಿ ಉತ್ಸವ

ನೆಟ್‌ಫ್ಲಿಕ್ಸ್‌ ದುಬಾರಿ, ಅಮೆಜಾನ್‌ನಲ್ಲಿರುವುದನ್ನೆಲ್ಲಾ ನೋಡಿ ಆಯ್ತು. ಟಿವಿ ಬೋರಾಯ್ತು ಎಂದು ಬೇಸರಿಸಿಕೊಳ್ಳುತ್ತಿರುವ ಸಿನಿಮಾ ಪ್ರಿಯರಿಗೊಂದು ಸಿಹಿ ಸುದ್ದಿ. ಯೂಟ್ಯೂಬ್‌ 20 ಪ್ರಖ್ಯಾತ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಚಲನ ಚಿತ್ರಗಳನ್ನು ಉಚಿತವಾಗಿ ಯೂಟ್ಯೂಬ್‌ನಲ್ಲಿ 10 ದಿನಗಳ ಕಾಲ ಬಿತ್ತರಿಸುತ್ತಿದೆ!

ವಿಶ್ವ ಪ್ರಸಿದ್ಧ ಎಲ್ಲ ಚಲನಚಿತ್ರೋತ್ಸವಗಳ ಸಿನಿಮಾಗಳನ್ನು ಹತ್ತು ದಿನಗಳ ಈ ಉತ್ಸವದಲ್ಲಿ ನೋಡಬಹುದು. ಅದಕ್ಕಾಗಿ ಪ್ರತ್ಯೇಕ ಪೇಜ್‌ ರೂಪಿಸಿದ್ದು, ‘ವಿ ಆರ್‌ ಒನ್‌’ ಹೆಸರಿನಲ್ಲಿ ಈ ಸಿನಿಮಾ ಪ್ರದರ್ಶನಗಳು ನಡೆಯಲಿವೆ. ಈ ಸಿನಿಮಾಗಳಿಂದ ಬರುವ ಜಾಹೀರಾತು ಆದಾಯವನ್ನು ಕೋವಿಡ್‌ ನಿಧಿಗೆ ಬಳಸಲಾಗುತ್ತಿದೆ.

ಮೇ 29ರಿಂದ ಆರಂಭವಾಗುತ್ತಿರುವ ಈ ಸಿನಿ ಉತ್ಸವ ಜೂನ್‌ 7ರವರೆಗೆ ನಡೆಯಲಿದೆ. ಇದಕ್ಕಾಗಿ ಪ್ರತ್ಯೇಕ ಪೇಜ್‌ ಅನ್ನು ಮೀಸಲಿರಿಸಲಿದೆ. ಈ ಸಿನಿಮಾಗಳನ್ನು ಉಚಿತವಾಗಿ ನೋಡಬಹುದಾಗಿದೆ. ಬರ್ಲಿನ್‌ ಅಂತಾರಾಷ್ಟ್ರೀಯ ಚಿತ್ರೋತ್ಸವ, ಕಾನ್ಸ್‌, ಸನ್‌ಡಾನ್‌, ಟೊರಂಟೊ, ಟೋಕಿಯೋ, ಟ್ರೈಬೆಕಾ, ಜೆರುಸಲೇಂ, ವೆನಿಸ್‌ ಸೇರಿದಂತೆ 20 ಚಿತ್ರೋತ್ಸವಗಳ ಸಿನಿಮಾಗಳನ್ನು ಈ ಜಾಗತಿಕ ಸಿನಿ ಉತ್ಸವದಲ್ಲಿ ನೋಡಬಹುದು.

ಸಿನಿಮಾಗಳ ಜೊತೆಗೆ, ಕಿರುಚಿತ್ರಗಳು, ಡಾಕ್ಯುಮೆಂಟರಿಗಳು, ಸಂವಾದ, ಸಂಗೀತ ಮುಂತಾದ ವಿಡಿಯೋಗಳನ್ನು ನೋಡಲಿಕ್ಕೆ ಅವಕಾಶ ಕಲ್ಪಿಸುತ್ತಿದೆ.
ಕೋವಿಡ್‌ 19 ವ್ಯಾಪಕವಾಗುತ್ತಿದ್ದು, ಜಗತ್ತನ್ನೇ ತಲ್ಲಣಗೊಳಿಸಿರುವಾಗ, ಮನೆಯಲ್ಲೇ ಇರುವುದು ಅನಿವಾರ್ಯವಾಗಿದೆ. ಈ ಕಾರಣಕ್ಕಾಗಿ ಸಿನಿಮಾಗಳ ಮೂಲಕ ರಂಜಿಸುವ ಪ್ರಯತ್ನವನ್ನು ಯೂಟ್ಯೂಬ್‌ ಮಾಡುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಯೂಟ್ಯೂಬ್‌ ಚೀಫ್‌ ಬಿಸಿನೆಸ್‌ ಆಫೀಸರ್‌ ರಾಬರ್ಟ್‌ ಕಿನ್ಸಲ್‌, ” ಇಂದು ಎಲ್ಲರೂ ಮನೆಯಲ್ಲೇ ಇರುವಂತೆ ಆಗಿರುವ ಸಂದರ್ಭ, ಅನನ್ಯ ಮತ್ತು ಸ್ಫೂರ್ತಿ ತುಂಬುವಂತಹದ್ದು. ಇದು ನಾವೆಲ್ಲರೂ ಒಂದು ಎಂಬ ಭಾವವವನ್ನು ಮೂಡಿಸುತ್ತಿದೆ” ಎಂದಿದ್ದಾರೆ.

ಟ್ರೈಬೆಕಾ ಚಿತ್ರೋತ್ಸವದ ಸಿಇಒ ಜೇನ್‌ ರೊಸೆಂತಾಲ್‌ ಅವರು ಈ ಚಿತ್ರೋತ್ಸವ ಕುರಿತು ನೀಡಿರುವ ಹೇಳಿಕೆಯಲ್ಲಿ, ” ನಾವು ಸಾಮಾನ್ಯವಾಗಿ ಮಾತನಾಡಿಕೊಳ್ಳುವಂತೆ ಚಿತ್ರಗಳಿಗೆ ಅನನ್ಯವಾದ ಸ್ಫೂರ್ತಿ ತುಂಬುವ ಮತ್ತು ಗಡಿ, ಬೇಧಗಳಾಚೆಗೆ ಎಲ್ಲರನ್ನು ಬೆಸೆಯುವ ಗುಣವಿದೆ. ಇದು ಜಗತ್ತಿಗೆ ಎಂಥದ್ದೇ ಘಾಸಿಗಳಿಂದ ಗುಣಮಾಡುವ ಶಕ್ತಿ ನೀಡುತ್ತದೆ. ಈಗ ಇಡೀ ಜಗತ್ತಿಗೆ ಅಂಥದ್ದೇ ಒಂದು ಗುಣಪಡಿಸುವ ಶಕ್ತಿ ಬೇಕಿದೆ” ಎಂದಿದ್ದಾರೆ.

ಈ ಚಿತ್ರ ಪ್ರದರ್ಶನದಿಂದ ಸಿಗುವ ಜಾಹೀರಾತು ಆದಾಯವನ್ನು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್‌ 19 ಸಾಲಿಡಾರಿಟಿ ರೆಸ್ಪಾನ್ಸ್‌ ಫಂಡ್‌ಗೆ ನೀಡುವುದಾಗಿ ಯೂಟ್ಯೂಬ್‌ ತಿಳಿಸಿದೆ

ಕೃಪೆ: ಟೆಕ್ ಕನ್ನಡ.

Exit mobile version