ಗೋವಿನ ಪ್ರತಿ ಅಂಗಳದಲ್ಲಿಯೂ ದೇವ- ದೇವತೆಗಳು ನೆಲೆಸಿವೆ- ಸತ್ಯಾರ್ಥತೀರ್ಥ ಶ್ರೀ


“ಯಲಗೂರ ಗೋಶಾಲೆ ಪ್ರೇರಕ ಶಕ್ತಿ ಸುಧಾಮೂತಿ೯ ಕರುನಾಡಿಗೆ ಸ್ಪೂರ್ತಿ”

ಉತ್ತರಪ್ರಭ ಆಲಮಟ್ಟಿ:

ಗೋವುಗಳನ್ನು ಕಸಾಯಿಕಾನೆಗೆ ಕಳುಹಿಸಲು ಪ್ರೋತ್ಸಾಹ ನೀಡುವ ರಾಷ್ಟ್ರಕ್ಕೆ ಹಾನಿ ಸಂಭವಿಸುತ್ತದೆ, ಗೋ ರಕ್ಷಣೆಯಿಂದ ದೇಶ ಮಂಗಲವಾಗುತ್ತದೆ ಎಂದು ಉತ್ತರಾದಿಮಠದ ಶ್ರೀ ಸತ್ಯಾರ್ಥತೀರ್ಥ ಶ್ರೀಪಾದಂಗಳವರು ಹೇಳಿದರು.
ಇಲ್ಲಿಗೆ ಸಮೀಪದ ಯಲಗೂರದ ಪ್ರಮೋದಾತ್ಮ ಗೋಶಾಲೆಯಲ್ಲಿ ಮೂರ್ತಿ ಫೌಂಡೇಶನ್ ನೀಡಿದ 1.5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ಗೋಶಾಲೆಯ ನೂತನ ಕಟ್ಟಡ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಗೋವಿನ ಪ್ರತಿ ಅಂಗಗಳಲ್ಲಿಯೂ ದೇವತೆಗಳು ನೆಲೆಸಿದ್ದಾರೆ ಎಂದರು.

ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಸುಧಾಮೂರ್ತಿ ಅವರು ಈ ಗೋಶಾಲೆಯನ್ನು ಹೆಚ್ಚುವರಿ ಕೊಠಡಿಯನ್ನು ಕಟ್ಟಿಸಿಕೊಟ್ಟಿದ್ದಾರೆ. ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಡುವ ಜತೆಗೆ, ಅಂಗವಿಕಲರಿಗೆ, ಎಲ್ಲಾ ವರ್ಗದ ಜನರಿಗೆ ಶೈಕ್ಷಣಿಕವಾಗಿ,ವೈದ್ಯಕೀಯವಾಗಿ, ಸಾಮಾಜಿಕವಾಗಿ ಸಹಾಯ ಮಾಡಿ ಅವರನ್ನು ಮೇಲೆತ್ತುವ ಕಾರ್ಯ ಮಾಡಿದ್ದಾರೆ. ಸರಳತೆ ಭಾವದ ಧೀರ ಮಹಿಳೆ ಸುಧಾಮೂತಿ೯ ನಿಜಕ್ಕೂ ನಮ್ಮ ಕುರುನಾಡಿನ ಸ್ಪೂರ್ತಿಯಾಗಿದ್ದಾರೆ. ಜಗದಗಲಕ್ಕೂ ತಮ್ಮ ಸೇವಾಭಾವದಿಂದ ಜನಜನಿತರಾಗಿದ್ದಾರೆ ಎಂದರು.
ಪಾವಗಡ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಜಪಾನಂದಜೀ ಮಹಾರಾಜರು ಮಾತನಾಡಿ, ರಾಜ್ಯದ ಮೂರು ಕಡೆ ಗೋಶಾಲೆ ತೆರೆದು ಸುಮಾರು 10000 ಕ್ಕೂ ಅಧಿಕ ಗೋವುಗಳನ್ನು ರಕ್ಷಿಸಿ ಸಾಕಲಾಗುತ್ತಿದೆ. ಇದಕ್ಕೆಲ್ಲಾ ಹಿಂದಿನ ಪ್ರೇರಕ ಶಕ್ತಿ ಸುಧಾಮೂರ್ತಿಯವರು ಎಂದರು.
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡಿ, ಪ್ರತಿಯೊಬ್ಬರು ಗೋಗ್ರಾಸಕ್ಕಾಗಿ ನಿತ್ಯ 10 ರೂ ತೆಗೆದಿಡಬೇಕು,ನಾನು ಕೂಡಾ ಪ್ರತಿ ವರ್ಷ ಮೇವಿಗಾಗಿ 2 ಲಕ್ಷ ರೂ ನೀಡುವುದಾಗಿ ಘೋಷಿಸಿದರು.
ರಘೋತ್ತಮಾಚಾರ್ಯ ಅರ್ಜುಣಗಿ ಪ್ರಾಸ್ತವಿಕವಾಗಿ ಮಾತನಾಡಿ, 2004 ರಲ್ಲಿ ಕೇವಲ 10 ಹಸುಗಳಿಂದ ಆರಂಭಗೊಂಡ ಈ ಪ್ರಮೋದಾತ್ಮ ಗೋಶಾಲೆಯಲ್ಲೀಗ 700 ಕ್ಕೂ ಅಧಿಕ ಗೋವುಗಳಿವೆ. ಪ್ರತಿ ವರ್ಷ 18 ಲಕ್ಷ ರೂ ಮೌಲ್ಯದ ಒಣಮೇವು ಖರೀದಿಸಲಾಗುತ್ತದೆ ಎಂದರು. ಗೋವಿನ ಹೆಂಡಿಯಿಂದ ಗೊಬ್ಬರ ತಯಾರಿಸಿ ಅದನ್ನು ಮಾರಲಾಗುತ್ತದೆ. ಹಾಲು ಆಕಳಿನಿಂದ ಹಿಂಡಲು ಪ್ರಾಶಸ್ತ್ಯ ನೀಡದೇ, ಕರುಗಳಿಗೆ ಕುಡಿಯಲು ಬಿಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪಂಡಿತ ಮಧ್ವಾಚಾರ್ಯ ಮೊಕಾಶಿ ರಮೇಶ್, ಸುನಂದಾ ಕುಲಕರ್ಣಿ, ಸತ್ಯಧ್ಯಾನಾಚಾರ್ಯ ಕಟ್ಟಿ, ವಿದ್ಯಾಧೀಶಾಚಾರ್ಯ ಗುತ್ತಲ, ರಘೋತ್ತಾಮಾಚಾರ್ಯ ನಾಗಸಂಪಿಗೆ, ಸುಧೀಂದ್ರಾಚಾರ್ಯ ಗದ್ದನಕೇರಿ, ಅನಂತ ಓಂಕಾರ, ಪ್ರಸನ್ನಾಚಾರ್ಯ ಕಟ್ಟಿ, ಡಾ ಕೃಷ್ಣ ಕಟ್ಟಿ ಇತರರು ಇದ್ದರು. ಗೋಶಾಲೆಗೆ ನೆರವಾದ ಹಲವು ಮಹನೀಯರನ್ನು ಶ್ರೀಗಳು ಸನ್ಮಾನಿಸಿದರು.

ಗೋಶಾಲೆ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ – 2 ಲಕ್ಷ ರೂ ಮೇವಿಗಾಗಿ ನೀಡಿದ ಸುಧಾಮೂರ್ತಿ:


ಬೇಸಿಗೆಯಲ್ಲಿ ಹಸಿ ಮೇವಿನ ಖರೀದಿಗಾಗಿ ಗೋಶಾಲೆಗೆ 2 ಲಕ್ಷ ರೂ ನೀಡಿದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡಿ, ಇಲ್ಲಿ ಸೇರಿದ ಪ್ರತಿಯೊಬ್ಬ ಹೆಣ್ಣು ಮಕ್ಕಳು ಪ್ರತಿ ಕುಟುಂಬದ ಪರವಾಗಿ ಗೋಗ್ರಾಸಕ್ಕಾಗಿ (ಗೋವಿನ ಆಹಾರಕ್ಕಾಗಿ) 10 ರೂ ತೆಗೆದಿರಿಸಬೇಕು. ವಾರ್ಷಿಕ 3650 ರೂಗಳನ್ನು ಗೋಶಾಲೆಗೆ ನೀಡಬೇಕು. ಎಲ್ಲರೂ ಗೋಶಾಲೆಯ ಅಭಿವೃದ್ಧಿ ಕೈಜೋಡಿಸಬೇಕು, ನಾನು ನನ್ನ ಕೈಲಾದ ಸಹಾಯ ಮಾಡುವುದಾಗಿ ಹೇಳಿದರು.
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿ ದೆಹಲಿಯಿಂದ ನೇರವಾಗಿ ಬೆಂಗಳೂರು, ಹುಬ್ಬಳ್ಳಿ ಮೂಲಕ ಯಲಗೂರಕ್ಕೆ ಬಂದಿರುವ ಸುಧಾಮೂರ್ತಿ ಅವರ ಸೆಲ್ಫಿಗಾಗಿ ನೂರಾರು ಜನರು ಮುಗಿಬಿದ್ದರು. ಯಲಗೂರೇಶ ದೇವಸ್ಥಾನದಲ್ಲಿ ದೇವಸ್ಥಾನ ಟ್ರಸ್ಟ್ ನವರು ಸುಧಾಮೂರ್ತಿ ಅವರನ್ನು ಸನ್ಮಾನಿಸಿದರು. ಇಲ್ಲಿಯ ಅರೆ ಝಳದ ಬಿಸಲಿಗೆ ಬಳಲಿದಂತೆ ಕಂಡ ಸುಧಾಮೂರ್ತಿಯವರು ಪೂಜೆ, ಶೋಭಾ ಮೆರವಣಿಗೆಯಲ್ಲಿ ಮಿಂಚಿದರು.

Exit mobile version