ತೋಂಟದ ಶ್ರೀ ಕಣ್ಣಂಚಿನಲ್ಲಿ ಹಸಿರು ಸೊಗಸು…

ಆಲಮಟ್ಟಿ ನೈಸರ್ಗಿಕ ವೈಭವಕ್ಕೆ ಪೂಜ್ಯರ ಮೆಚ್ಚುಗೆ
ವರದಿ ಗುಲಾಬಚಂದ ಜಾಧವ
ಆಲಮಟ್ಟಿ : ಮುಂಗಾರು ಋತುವಿನಲ್ಲಿ ಹಚ್ಚು ಹಸಿರಾಗಿ ಕಂಗೊಳಿಸುವ ಆಲಮಟ್ಟಿ ಧರೆಯ ಮೇಲಿನ ನೈಸರ್ಗಿಕ ಹಸಿರಿನ ಕಾವ್ಯ ವೈಭವವನ್ನು ಗದುಗಿನ ತೋಂಟದಾರ್ಯ ಸಂಸ್ಥಾನಮಠದ ಪೀಠಾಧಿಪತಿ ತೋಂಟದ ಡಾ. ಸಿದ್ದರಾಮ ಮಹಾಸ್ವಾಮೀಜಿಯವರು ಕಣ್ತುಂಬಿಸಿಕೊಂಡು ಖುಷಿ ಪಟ್ಟರು.

ಇಲ್ಲಿನ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀಗಳು ತಮ್ಮ ಸಂಸ್ಥೆಯ ಮೂಲಕ ಇಲ್ಲಿ ಕರುನಾಡು ಗಾಂಧಿ ಮಂಜಪ್ಪ ಹಡೇ೯ಕರ ಹಾಗು ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಶರಣರ ಹೆಸರಿನ ಮೇಲೆ ನಡೆಯುತ್ತಿರುವ ವಿವಿಧ ಶಾಲಾ,ಕಾಲೇಜಿಗೆ ಆಕಸ್ಮಿಕ ಭೇಟಿ ನೀಡಿ ಶೈಕ್ಷಣಿಕ ಪ್ರಗತಿ, ಅಭಿವೃದ್ಧಿ ಕೆಲಸ ಕಾರ್ಯಗಳ ಪರಿಶೀಲನೆ ನಡೆಸಿದ ಬಳಿಕ ಶಿಕ್ಷಣ ಸಮುಚ್ಚಯದಲ್ಲಿ ಮೈದೇಳಿರುವ ಹಸಿರು ಸೊಬಗಿಗೆ ಸಂತಸಗೊಂಡರು.
ಹಸಿರೆಲೆಗಳ ಮುದ ಮನದೊಳಗಿರಿಸಿ ಸಂತೋಷಗೊಂಡ ಸಿದ್ದರಾಮ ಶ್ರೀ ನೈಸರ್ಗಿಕ ಮಂದಾರ ಪುಷ್ಪಗಳ ನಳನಳಿಸುವ ಅಭೂತಪೂರ್ವ ದೃಶ್ಯ ವೈಭವ ಮನಸ್ಸಾರೆ ಸವಿದರು.


ನಿಸರ್ಗ ಪ್ರಿಯರಾಗಿರುವ ತೋಂಟದ ಸಿದ್ದರಾಮ ಶ್ರೀ ಶಿಕ್ಷಣ ಸಂಸ್ಥೆಯ ವಿಶಾಲ ಅಂಗಳದಲ್ಲಿ ಹೆಮ್ಮರವಾಗಿ ಬೆಳೆದಿರುವ ನೂರಾರು ಪ್ರಭೇದಗಳ ಗಿಡಮರಗಳನ್ನು ಕಂಡು ಪ್ರಸನ್ನಗೊಂಡರು.
ಶಾಲಾ,ಕಾಲೇಜು ಕಟ್ಟಡದ ಮೇಲೆ ನಿಂತು ಹಸಿರು ನೋಟ ಹೀರಿದರು. ಆವರಣದ ಸುತ್ತಲೂ ಇರುವ ಹಸಿರು ಸೌಂದರ್ಯದ ಉತ್ತುಂಗಕ್ಕೆ ಬೆರಗಾದರು. ಮನಸ್ಸು ಬಿಚ್ಚಿ ಹೂನಗೆ ಬೀರುತ್ತಾ ಮೋಹಕ ವಿಹಂಗಮ ದೃಶ್ಯ ಲೋಕ ಕಂಗಳಲ್ಲಿ ಸೆರೆಹಿಡಿದು ಆನಂದಿಸಿದರು.‌ ಹಸಿರು ಭಿನ್ನಾಣಕ್ಕೆ ಅರಿವಿಲ್ಲದೆ ಸಂತೃಪ್ತ ನಗು ತುಟಿಯಾಚೆಯಿಂದ ಸೂಸಿದರು. ‌ಮನ ಸೆಳೆದ ಹಸಿರು ಸುಗಂಧದ ವರ್ಣನೆ ಶ್ರೀಗಳ ಹೃದಯಾಂತರಾಳದ ಭಾವದಿಂದ ತೇಲಿ ಬಂದವು. ಇಲ್ಲಿ ನಿಸರ್ಗ ಆವಿಷ್ಕಾರವಾಗಿದೆ ಎಂಬ ಮೆಚ್ಚುಗೆಯ ನುಡಿಮುತ್ತುಗಳು ಉದರಿದವು.


ಆಲಮಟ್ಟಿಯಲ್ಲಿ ಹಸಿರುಲೋಕ ಮೈವೆತ್ತಿಕೊಂಡಿದೆ.ಅವಾಹಿಸಿಕೊಂಡಿರುವ ಹಸಿರು ವಿಪುಲ ಐಸಿರಿ ನಿಜಕ್ಕೂ ನಿಸರ್ಗ ಪ್ರಿಯರನ್ನು ಮೈ ಮರೆಯುವಂತೆ ನಿಬ್ಬೆರಗಾಸುತ್ತದೆ. ಕಣ್ಣು ಪೀಳಿಕಸದಂತೆ ಸ್ವಚ್ಛ, ಸುಂದರ ಹಸಿರು ರಸ ನಾದಮಯ ಪುಳಕುಗೊಳಿಸುತ್ತದೆ. ಅಂತರಂಗದ ತಮುಲಗಳ ಬೇಗುದಿಯ ತಳಮಳಗಳನ್ನು ಸಸ್ಯ ಕಾವ್ಯ ಮರೆಸುತ್ತವೆ. ಅಂಥದೊಂದು ಪ್ರಭಾವಿಸುವ ಅದ್ಭುತ ಶಕ್ತಿ ಪ್ರಕೃತಿ ಮಾತೆಯಲ್ಲಿದ್ದು ಅದು ಇಲ್ಲಿ ಚಿಗುರೊಡೆದು ಹಸಿರು ಸಂಪತ್ತಭರಿತ ಲೋಕ ಅನಾವರಣಗೊಂಡಿದೆ ಎಂದು ತೋಂಟದ ಸಿದ್ದರಾಮ ಶ್ರೀ ಬಣ್ಣಿಸಿದರು.


ಈ ಸಂದರ್ಭದಲ್ಲಿ ವಿಜಯಪುರದ ಅಭಿನವ ಸಿದ್ದಾರೂಢ ಸ್ವಾಮೀಜಿ, ಬಸವನ ಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ವಿಶ್ರಾಂತ ಪ್ರಾಚಾರ್ಯ ಸುರೇಶಗೌಡ ಪಾಟೀಲ, ವಿಜಯಪುರ ತೋಂಟದಾರ್ಯ ಅನುಭವ ಮಂಟಪದ ಎನ್.ಕೆ‌.ಕುಂಬಾರ, ಪ್ರಾಚಾರ್ಯರಾದ ಪ್ರಭುಸ್ವಾಮಿ ಹೇಮಗಿರಿಮಠ, ಎಚ್.ಎನ್.ಕೆಲೂರ, ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ಎಸ್ ಆಯ.ಗಿಡ್ಡಪ್ಪಗೋಳ, ಎನ್.ಎಸ್.ಬಿರಾದಾರ, ಆರ್.ಎಂ.ರಾಠೋಡ, ಎಂ.ಎಸ್.ಸಜ್ಜನ,ಪ್ರಕಾಶ ಧನಶೆಟ್ಟೆ, ಡಿ.ಟಿ.ಸಿಂಗಾರಿ,ಶಾಂತೂ ತಡಸಿ, ಮಹಾಂತೇಶ ಚಳಮರದ ಇತರರಿದ್ದರು.
ಪೋಟೋ ಆಲಮಟ್ಟಿಯ ಆರ್.ಬಿ.ಪಿ.ಜಿ.ಹಳಕಟ್ಟಿ, ಎಂ.ಎಚ್.ಎಂ.ಪ.ಪೂ ಹಾಗು ಪದವಿ ಕಾಲೇಜು ಕಟ್ಟಡ ಮೇಲಿಂದ ನಿಸರ್ಗ ಸೌಂದರ್ಯ ಸವಿಯುತ್ತಿರುವ ಗದುಗಿನ ತೋಂಟದ ಡಾ. ಸಿದ್ದರಾಮ ಸ್ವಾಮೀಜಿಯವರು.

Exit mobile version