ಏಡ್ಸ್ ರೋಗ ಹತ್ತಿಕ್ಕಲು ಜನಜಾಗೃತಿ ಹೆಚ್ಚಳ-ಬಾಬುರಾವ ತಳವಾರ


ಆಲಮಟ್ಟಿ: 2030 ರೊಳಗೆ ಭಾರತದಲ್ಲಿ ಮಹಾಮಾರಿ ಏಡ್ಸ್ ರೋಗದ ಹಾವಳಿ ಸಂಪೂರ್ಣವಾಗಿ ತಡೆಗಟ್ಟಬೇಕಿದೆ. ಈ ಮಾರಕ ರೋಗವನ್ನು ಹೊಡೆದೋಡಿಸಲು ಜನತೆಯಲ್ಲಿ ಜಾಗೃತಿ ಕಾರ್ಯಕ್ರಮ ಹೆಚ್ಚಿಸಲಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕ ಬಾಬುರಾವ ತಳವಾರ ಹೇಳಿದರು.
ಇಲ್ಲಿನ ಮೊಘಲ್ ಉದ್ಯಾನದಲ್ಲಿ ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ, ನಿಡಗುಂದಿ ಐಸಿಟಿಸಿ ಹಾಗು ಕೆಬಿಜೆಎನ್ ಎಲ್ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಾಯಾ೯ಲಯದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆಲಮಟ್ಟಿಯ ಉದ್ಯಾನದ ದಿನಗೂಲಿ ನೌಕರರಿಗೆ ವಿವಿಧ ಆರೋಗ್ಯ ತಪಾಸಣಾ ಶಿಬಿರ ಮತ್ತು ಸಮೂದಾಯ ಆಧಾರಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಏಡ್ಸ್ ರೋಗ ಬಾಧೆ ಗಂಭೀರ ಸ್ವರೂಪ ಪಡೆಯುವ ಮುನ್ನವೇ ಎಚ್ಚೆತ್ತು ತ್ವರಿತ ತಪಾಸಣೆಗೆ ಮುಂದಾಗಬೇಕು.ಎಚ್ಚರಿಕೆ ಕ್ರಮಗಳನ್ನು ವಹಿಸುವುದೇ ಏಡ್ಸ್ ಹತೋಟೆಗೆ ಮೊದಲು ಮದ್ದು ಎಂದರು.


ತ್ವರಿತ ತಪಾಸಣೆಯಿಂದ ರೋಗ ಪತ್ತೆಯಾಗುತ್ತದೆ.ಅಲ್ಲದೇ ಉಚಿತವಾಗಿ ನೀಡುವ ಮಾತ್ರೆಗಳಿಂದ ಎಚ್ ಐವಿ ನಿಯಂತ್ರಣದಲ್ಲಿರುತ್ತದೆ. ತಪಾಸಣೆ ಕ್ರಮ ತ್ವರಿತವಾದರೆ ಮತ್ತೊಬ್ಬರಿಗೆ ಹರಡುವ ಪ್ರಮಾಣವನ್ನು ನಿಯಂತ್ರಿಸಬಹುದಾಗಿದೆ ಎಂದರು.
ರಾಜ್ಯದಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ಎಚ್ ಐವಿ ಸೋಂಕಿತರು ಹೆಚ್ಚಿನ ಜನರಿದ್ದು, ಈ ರೋಗದ ಬಗ್ಗೆ ಜಾಗೃತಿ, ತಪಾಸಣೆ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಸಮರೋಪಾದಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಾಬುರಾವ ತಳವಾರ ತಿಳಿಸಿದರು.
ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ಮಾತನಾಡಿ, ಉದ್ಯಾನದಲ್ಲಿ ದಿನಗೂಲಿ ಕಾರ್ಮಿಕರು, ಉದ್ಯಾನದ ಸುಂದರೀಕರಣಕ್ಕಾಗಿ ಹಗಲು ರಾತ್ರಿ ದುಡಿಯುತ್ತಾರೆ, ಅವರ ಆರೋಗ್ಯವೂ ಮುಖ್ಯ, ಹೀಗಾಗಿ ಆರೋಗ್ಯ ತಪಾಸಣೆಯನ್ನು ಮೇಲಿಂದ ಮೇಲೆ ನಡೆಸಿ ಅವರ ರೋಗಗಳ ಪತ್ತೆ ಕಾರ್ಯ ನಡೆಸಲಾಗುತ್ತದೆ ಎಂದರು.
ಕೆಎಸ್ ಐಎಸ್ ಎಫ್ ಪೊಲೀಸ್ ಇನ್ಸ್ ಪೆಕ್ಟರ್ ಶರಣಬಸವರಾಜ, ಉಪ ವಲಯ ಅರಣ್ಯಾಧಿಕಾರಿ ಸತೀಶ ಗಲಗಲಿ, ವಿಜಯಲಕ್ಷ್ಮಿ ರೆಡ್ಡಿ, ಪ್ರವೀಣ ಹಚ್ಯಾಳಕರ, ಆಪ್ತ ಸಮಾಲೋಚಕ ಗಿರೀಶ ಹೂಗಾರ, ಬಸವರಾಜ ಚಿಕ್ಕಬೇವನೂರ, ಎಸ್.ಕೆ. ದೊಡಮನಿ, ರಫೀಕ್ ಕಲಾಲ ಇನ್ನೀತರರು ಇದ್ದರು.
ಶಿಬಿರ:
ಈ ಸಮುದಾಯ ಆರೋಗ್ಯ ತಪಾಸಣಾ ಶಿಬಿರದಲ್ಲಿ 97 ಜನ ಉದ್ಯಾನದ ಕಾರ್ಮಿಕರಿಗೆ ಎಚ್.ಐ.ವಿ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೈಪೆಟೈಸಿಸ್ ಬಿ ಸೇರಿ ನಾನಾ ಪರೀಕ್ಷೆ ನಡೆಸಲಾಯಿತು. ಕಫದ ಸಂಗ್ರಹವೂ ನಡೆಯಿತು.
ಫೋಟೋ:
ಆಲಮಟ್ಟಿಯ ಮೊಘಲ್ ಉದ್ಯಾನದ ಎಂಟ್ರನ್ಸ್ ಪ್ಲಾಜಾ ಬಳಿ ಶುಕ್ರವಾರ ನಡೆದ ಸಮುದಾಯ ಆರೋಗ್ಯ ತಪಾಸಣಾ ಶಿಬಿರವನ್ನುದ್ದೇಶಿಸಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕ ಬಾಬುರಾವ ತಳವಾರ ಮಾತನಾಡಿದರು.

Exit mobile version