ಜಿಲ್ಲೆಯಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಸೂಕ್ತ ಕ್ರಮವಹಿಸಿ: ಸಚಿವ ಸಿ.ಸಿ.ಪಾಟೀಲ

ಗದಗ: ಕಳೆದ ಕೆಲವು ದಿನಗಳಿಂದ ಕೊವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜರುಗಿದ ಕೊವಿಡ್-19 ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈವರೆಗೆ ಕೊವಿಡ್-19 ರೋಗ ನಿಯಂತ್ರಣದಲ್ಲಿ ಜಿಲ್ಲಾಡಳಿತ ಸೇರಿದಂತೆ ಎಲ್ಲರೂ ಸಫಲರಾಗಿದ್ದೆವು. ಇತ್ತಿಚೆಗೆ ಕೊವಿಡ್-19 ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದ್ದು, ನಿಯಂತ್ರಣಕ್ಕಾಗಿ ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮ ಅಗತ್ಯವಾಗಿದೆ ಎಂದರು.

ಇಷ್ಟುದಿನ ಪ್ರಮುಖವಾಗಿ ಅನ್ಯ ರಾಜ್ಯದಿಂದ ಬಂದವರ ಮೇಲೆ ನಿಗಾವಹಿಸಿ ಕ್ರಮ ವಹಿಸಲಾಗುತ್ತಿತ್ತು. ಕೆಲವು ದಿನಗಳಿಂದ ಕೋರೊನಾ ರೋಗವು ಜಿಲ್ಲೆಯ ಗ್ರಾಮಗಳಿಗೂ ಕಾಲಿಟ್ಟಿದೆ. ಇದು ಆತಂಕಕಾರಿ ವಿಷಯವಾಗಿದೆ. ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಿ ಕೊವಿಡ್-19 ನಿಯಂತ್ರಿಸಬೇಕು ಎಂದು ಸೂಚಿಸಿದರು.

ಪ್ರತಿದಿನ ಗದಗ ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕೊವಿಡ್-19 ತಪಾಸಣೆಯ 215 ಗಂಟಲು ದ್ರವದ ಕೊವಿಡ್-19 ಪರೀಕ್ಷೆ ಮಾಡಬಹುದಾಗಿದೆ. ಇದರಲ್ಲಿ ಮರು ಪರೀಕ್ಷೆಗಳು ಸೇರಿವೆ. ಮರು ಪರೀಕ್ಷೆಗಳನ್ನು ಹೊರತು ಪಡಿಸಿದರೆ, ಒಂದು ದಿನಕ್ಕೆ 150 ಹೊಸ ಪರೀಕ್ಷೆ ನಡೆಸಿ ವರದಿ ನೀಡುವ ಸಾಮರ್ಥ್ಯ ಇರುವುದಾಗಿ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಇದಕ್ಕೆ ಸಚಿವ ಸಿ.ಸಿ.ಪಾಟೀಲ್ ಪ್ರತಿಕ್ರಿಯಿಸಿ, ಜಿಲ್ಲೆಯ ಪ್ರತಿ ತಾಲ್ಲೂಕುವಾರು ಗಂಟಲು ದ್ರವಗಳ ಪರೀಕ್ಷೆಗಳು ನಡೆಯುವಂತೆ ನೋಡಿಕೊಳ್ಳಿ, ಸಾಧ್ಯವಾದಷ್ಟು ಅಧಿಕ ಪ್ರಮಾಣದ ಕೊವಿಡ್-19 ಪರೀಕ್ಷೆಗಳು ನಡೆಸಿರಿ. ಇದಕ್ಕೆ ಅಗತ್ಯವಿರುವ ಸಾಮಗ್ರಿಗಳ ಕೊರತೆಯಾಗದಂತೆ ಮುಂಜಗ್ರತೆ ವಹಿಸುವುದು ಸೂಕ್ತ ಎಂದರು.

ಕೊವಿಡ್-19 ರೋಗ ಲಕ್ಷಣಗಳಿರುವ ರೋಗಿಯ ಗಂಟಲು ದ್ರವ ಸಂಗ್ರಹಿಸಲು ಬೇಕಾದ ವಿಟಿಎಂ ಕಿಟ್‍ಗಳನ್ನು ತಾಲ್ಲೂಕುವಾರು ಮೊದಲೇ ದಾಸ್ತಾನಿರುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ನಿಗಾ ವಹಿಸಬೇಕು. ಈ ಕುರಿತು ಪ್ರತಿದಿನ ತಾಲ್ಲೂಕುಗಳ ವೈದ್ಯಾಧಿಕಾರಿಗಳೊಂದಿಗೆ ಸಮನ್ವಯ ವಹಿಸುವುದು ಸೂಕ್ತ. ಕೊವಿಡ್-19 ರೋಗ ನಿಯಂತ್ರಣದಲ್ಲಿ ಬೇಜವಾಬ್ದಾರಿ ಬೇಡ ಎಂದರು.

ಜಿಲ್ಲೆಯಲ್ಲಿ ಗುರುತಿಸಿದ ಕೇಂದ್ರಗಳು
ಜಿಲ್ಲೆಯಲ್ಲಿ ಸಮುದಾಯ ಭವನ, ಕಲ್ಯಾಣ ಮಂಟಪ, ವಸತಿ ಶಾಲೆ, ಹೋಟೆಲ್, ಒಳಾಂಗಣ ಕ್ರೀಡಾಂಗಣ ಸೇರಿದಂತೆ 278 ಕೇಂದ್ರಗಳನ್ನು ಗುರುತಿಸಲಾಗಿದೆ. ಅಗತ್ಯವಿದ್ದಲ್ಲಿ ಕೊವಿಡ್-19 ಆರೈಕೆ ಕೇಂದ್ರವಾಗಿ ಮಾಡಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಪಂ ಸಿಇಓ ಡಾ.ಆನಂದ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಎಂ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರಿಗಿಡದ, ತಾಲ್ಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ನೀಲಗುಂದ ಸೇರಿದಂತೆ ಮತ್ತಿತರರು ಹಾಜರಿದ್ದರು.

Exit mobile version