ವಿಧಾನ ಮಂಡಲದಲ್ಲಿ ಶಿಕ್ಷಕರ ವರ್ಗಾವಣೆ ವಿಧೇಯಕ ಮಂಡನೆ-ಶಿಕ್ಷಕರ ಸಂಘ ಹರ್ಷ

ಉತ್ತರಪ್ರಭ ಸುದ್ದಿ
ಆಲಮಟ್ಟಿ:
ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕವು ವಿಧಾನಮಂಡಲದಲ್ಲಿ ಮಂಡನೆಯಾಗಿದ್ದು, ಇದರಿಂದ ರಾಜ್ಯದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಇನ್ನಷ್ಟು ಸರಳಗೊಂಡಿವೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಿಳಿಸಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಸಂಘದ ನಿರಂತರ ಪ್ರಯತ್ನದ ಫಲವಾಗಿ ಶಿಕ್ಷಕ ಸ್ನೇಹಿ ವರ್ಗಾವಣೆ ಕಾಯ್ದೆ ಮಂಡನೆಯಾಗಿದೆ ಎಂದಿದ್ದಾರೆ.

ಹತ್ತು ವರ್ಷದ ಸೇವೆ, ಅಖಂಡ 15 ವರ್ಷದ ಸೇವೆಯನ್ನು ಪರಿಗಣಿಸಿ ಶಿಕ್ಷಕರಿಗೆ ಶೇ.25 ರಷ್ಟು ಖಾಲಿ ಹುದ್ದೆಗಳ ಮಿತಿಯಿಲ್ಲದೆ ಖಾಲಿ ಹುದ್ದೆಗಳಿಗೆ ವರ್ಗಾವಣೆಗೆ ಅವಕಾಶ,ಪರಸ್ಪರ ವರ್ಗಾವಣೆಗೆ ಸಂಬಂಧಿಸಿದಂತೆ ಸೇವೆಗೆ ಸೇರಿದ ಮೊದಲ 5 ವರ್ಷ, ನಿವೃತ್ತಿ ಹೊಂದಲು ಮೊದಲಿನ 5 ವರ್ಷ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಪರಸ್ಪರ ವರ್ಗಾವಣೆಗೆ ಅವಕಾಶ, ಪ್ರತಿ 3 ವರ್ಷಕೊಮ್ಮೆ ಸೇವಾವಧಿಯಲ್ಲಿ ಎಷ್ಟು ಬಾರಿ ಬೇಕಾದರೂ ಪರಸ್ಪರ ವರ್ಗಾವಣೆ ಹೊಂದಲು ಅವಕಾಶ ದೊರೆತಿದೆ ಎಂದರು.

ಪತಿ‌ ಪತ್ನಿ ಪ್ರಕರಣದಲ್ಲಿ ಪತಿ ಅಥವಾ ಪತ್ನಿ ಕೆಲಸ ಮಾಡುವ ತಾಲ್ಲೂಕುಗಳಲ್ಲಿ ಖಾಲಿ ಹುದ್ದೆಗಳು ಲಭ್ಯತೆ ಇಲ್ಲದೇ ಹೋದಲ್ಲಿ ಪಕ್ಕದ ತಾಲ್ಲೂಕಿಗೆ ವರ್ಗಾವಣೆ ಹೊಂದಲು ಅವಕಾಶ, ಶೇ. 25 ಕ್ಕಿಂತ ಖಾಲಿ ಹುದ್ದೆಗಳಿರುವ ತಾಲ್ಲೂಕಿನ ಒಳಗಡೆ ಕೂಡ ವರ್ಗಾವಣೆ ಹೊಂದಲು ಅವಕಾಶ ಕಲ್ಪಿಸಲಾಗಿದೆ. ಸಿಆರ್‌ಪಿ, ಬಿಆರ್‌ಪಿಯಾಗಿ 3ವರ್ಷ ಅಥವಾ 5ವರ್ಷ ಸೇವೆ ಪೂರೈಸಿರುವವರಿಗೆ ಶಾಲೆಗೆ ಹೋಗಲು ಕೌನ್ಸಿಲಿಂಗ್‌ನಲ್ಲಿ ಅವಕಾಶ. ಯಾವುದೇ ಆದ್ಯತೆಯನ್ನು ಸೇವಾವಧಿಯಲ್ಲಿ ಒಂದು ಬಾರಿ ಮಾತ್ರ ಪಡೆಯತಕ್ಕದ್ದು. ಮಲೆನಾಡು ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಹಾಗೂ ಹೈದ್ರಾಬಾದ್-ಕರ್ನಾಟಕದ ತಾಲ್ಲೂಕುಗಳಿಗೆ ಒಳಗಡೆ ಬರುವವರಿಗೆ ಯಾವುದೇ ವರ್ಗಾವಣೆ ಮಿತಿಯಿಲ್ಲ ಎಂಬ ಅಂಶವನ್ನು ವಿಧೇಯಕದಲ್ಲಿ ಸೇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ಅಂಶಗಳನ್ನು ತಿದ್ದುಪಡಿ ಮಾಡುವುದರ ಮೂಲಕ ರಾಜ್ಯದ ಸಮಸ್ತ ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ ನಾಗೇಶ್, ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಆಯುಕ್ತ ಆರ್ವಿಶಾಲ್ ಹಾಗೂ ಪ್ರಾಥಮಿಕ ಶಿಕ್ಷಣದ ನಿರ್ದೇಶಕ ಪ್ರಸನ್ನಕುಮಾರ ಅವರಿಗೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಭಿನಂದನೆ ಸಲ್ಲಿಸಲಿದೆ ಎಂದು ಅವರು ತಿಳಿಸಿದ್ದಾರೆ.

Exit mobile version