ಇನ್ಮುಂದೆ ಕಸ ಸಂಗ್ರಹ ತೊಂದರೆಗೆ ಮುಕ್ತಿ ? ಗ್ರಾಪಂ ಯತ್ನ ! ಕಸವಿಲೇವಾರಿ 2 ನೇ ಹೊಸ ವಾಹನಕ್ಕೆ ಚಾಲನೆ

ಉತ್ತರಪ್ರಭ
ಆಲಮಟ್ಟಿ
: ಗಾಡಿವಾಲಾ ಆಯಾ ಜರಾ ಕಚರಾ ನಿಕಾಲ್ ಸದ್ದಿನೊಂದಿಗೆ ಕಸವಿಲೇವಾರಿಯ ಹೊಸದಾದ ವಾಹನವೊಂದು ರಸ್ತೆಗೆ ಇಳಿಯಲಿದೆ. ಈ ಮೊದಲು ಒಂದೇ ವಾಹನ ಇದಿದ್ದರಿಂದ ಕಸ ಸಂಗ್ರಹದ ತಾಪತ್ರಯ ಇಲ್ಲಿ ಹೆಚ್ಚಾಗಿತ್ತು. ಆ ಸಮಸ್ಯೆ ಸ್ವಲ್ಪ ಮಟ್ಟಿಗೆ ತಗ್ಗಿಸಲು ಸ್ಥಳೀಯ ಗ್ರಾಮ ಪಂಚಾಯತಿ ಇದೀಗ ಮುಂದಾಗಿದೆ. ಉಂಟಾಗಿದ್ದ ತೊಂದರೆ ಇನ್ಮುಂದೆ ಹೆಚ್ಚು ಕಡಿಮೆ ದೂರಾಗಲಿದೆ. ಕಸವಿಲೇವಾರಿ ಎರಡನೇ ಹೊಸ ವಾಹನ ಗ್ರಾಪಂ ಖರೀದಿಸಿದ್ದು ಬುಧವಾರ ಪೂಜೆಯೊಂದಿಗೆ ಚಾಲನೆ ನೀಡಲಾಗಿದೆ.
ಆಲಮಟ್ಟಿ ಗ್ರಾಮ ಪಂಚಾಯ್ತಿಯ ವಿದ್ಯುತ್ ಬಿಲ್ ಉಳಿತಾಯದಲ್ಲಿ 6 ಲಕ್ಷ ರೂ ವೆಚ್ಚದಲ್ಲಿ ಕಸವಿಲೇವಾರಿ ವಾಹನ ಖರೀದಿಸಲಾಗಿದೆ.
ಬುಧವಾರ ಗ್ರಾಮ ಪಂಚಾಯ್ತಿ ಆವರಣದಲ್ಲಿ ಆ ವಾಹನಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯ್ತಿಯಿಂದ ಗ್ರಾಮ ಪಂಚಾಯ್ತಿಯ ವಿವಿಧ ಯೋಜನೆಗಳ ವಿದ್ಯುತ್ ಬಿಲ್ ಪಾವತಿಗಾಗಿ ನೀಡಿದ ಹಣದಲ್ಲಿ, ಉಳಿತಾಯ ಮಾಡಿ, 6 ಲಕ್ಷ ರೂ ಮೌಲ್ಯದ ವಾಹನ ಖರೀದಿಸಲಾಗಿದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಹಿರೇಮಠ ಈ ಸಂದರ್ಭದಲ್ಲಿ ತಿಳಿಸಿದರು.
ಆಲಮಟ್ಟಿ ಗ್ರಾಮ ಪಂಚಾಯ್ತಿಯ ವಿಸ್ತಾರ ಹೆಚ್ಚಿದೆ. ಎಲ್ಲೆಡೆಯೂ ನಿತ್ಯ ಸಂಚರಿಸಿ ಕಸ ಸಂಗ್ರಹಿಸಲು ಈ ಮೊದಲು ಕೇವಲ ಒಂದೇ ವಾಹನವಿತ್ತು. ಇದರಿಂದ ಬಹಳಷ್ಟು ತೊಂದರೆಯಾಗುತ್ತಿತ್ತು. ಇನ್ನೊಂದು ವಾಹನದ ಅವಶ್ಯಕತೆ ಮನಗಂಡು ಈ ವಾಹನ ಖರೀದಿಸಲಾಗಿದೆ. ಇನ್ನೂ ಮುಂದೆ ವಾರದ ಆರು ದಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರತಿ ಹಳ್ಳಿಗಳ ಮನೆ ಮನೆಗೂ ಸಂಚರಿಸಿ ಕಸ ಸಂಗ್ರಹಿಸಲಾಗುವುದು ಎಂದು ಮಂಜುನಾಥ ತಿಳಿಸಿದರು.
ಇಲ್ಲಿಯ ಕಸ ವಿಲೇವಾರಿ ಘಟಕದಲ್ಲಿ ಕಸ ವಿಂಗಡಣೆ ಕಾರ್ಯವನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ವಾಹನಕ್ಕೆ ಪೂಜೆ ಸಲ್ಲಿಸಿ, ನಂತರ ಪ್ಲ್ಯಾಸ್ಟಿಕ್ ತ್ಯಜಿಸಿ ಆಂದೋಲನವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮೀನಾಕ್ಷಿ ಉಪ್ಪಾರ, ಪಿಡಿಓ ಜಿ.ಬಿ. ಕಲ್ಯಾಣಿ, ಗ್ರಾಮ ಪಂಚಾಯ್ತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Exit mobile version