ದಲಿತರ ಮೇಲೆ ಮಾರಣಾಂತಿಕ ಹಲ್ಲೆ : ದೌರ್ಜನ್ಯಕೋರರನ್ನು ಗೂಂಡಾ ಕಾಯ್ದೆ ಅನ್ವಯ ಬಂಧನಕ್ಕೆ ಆಗ್ರಹ

ಉತ್ತರಪ್ರಭ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ದೌರ್ಜನ್ಯಕೋರರನ್ನು ಗೂಂಡಾ ಕಾಯ್ದೆ ಅನ್ವಯ ಬಂಧನಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಾ.ಎನ್.ಮೂರ್ತಿ ಬಣದಿಂದ ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.

 ಈ ವೇಳೆ ಜಿಲ್ಲಾಧ್ಯಕ್ಷ ಲಕ್ಷ್ಮಣ ವಾಯ್ ಮಾದಿನೂರು ಮಾತನಾಡಿ, ಬಿಜೆಪಿಯ ಆಡಳಿತಾವಧಿಯಲ್ಲಿ ದಲಿತ ಹೆಣ್ಣು ಮಕ್ಕಳ ಅತ್ಯಾಚಾರ, ದಲಿತರ ಕೊಲೆ, ಹಲ್ಲೆ, ದೌರ್ಜನ್ಯಗಳು ಹೆಚ್ಚಳವಾಗಿವೆ. ಪಟ್ಟಭದ್ರ ಸವರ್ಣಿಯರಿಂದ ದೌರ್ಜನ್ಯಕ್ಕೊಳಗಾದ ಪ್ರಕರಣಗಳಲ್ಲಿ ೯೮% ರಷ್ಟು ಅಪರಾಧಿಗಳು ದೋಷಮುಕ್ತರಾಗಿ ಬಿಡುಗಡೆಯಾಗುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ದಲಿತರನ್ನು ನಾಯಿ, ಹಂದಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿದೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಇತ್ತೀಚಿಗೆ ಕಾರಟಗಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದ ೨೦೦ ರಿಂದ ೨೫೦ ಸವರ್ಣಿಯರು ದೊಣ್ಣೆ, ಕೊಡಲಿ, ಭರ್ಜಿ ಕಬ್ಬಿಣದ ಸರಳು, ಮಚ್ಚುಗಳನ್ನು ಹಿಡಿದು ದಲಿತರ ಕೇರಿಗೆ ನುಗ್ಗಿ ಭೀಕರ ಧಾಳಿ ನಡೆಸಿದ್ದಾರೆ. ದಲಿತರ ಮನೆಯೊಳಗೆ ನುಗ್ಗಿ ಹೆಂಗಸರು, ಮಕ್ಕಳು, ವೃದ್ಧರೆನ್ನದೆ ಎಳೆದಾಡಿ ಸಿಕ್ಕ ಸಿಕ್ಕ ಹಾಗೆ ಮನಬಂದಂತೆ ಮಾರಕಾಸ್ತ್ರಗಳಿಂದ ಬಡಿದು ಹಾಕಿದ್ದಾರೆ. 60 ಜನ ಧಾಳಿಕೋರರ ಮೇಲೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಜರುಗಿದ ಒಂದೂವರೆ ತಿಂಗಳಾಗಿದ್ದು, ಅನೇಕ ಹಲ್ಲೆಕೋರರನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯತೆ ತಾಳಿದೆ ಹಾಗಾಗಿ ಕೊಪ್ಪಳ ಜಿಲ್ಲಾದ್ಯಂತ ದಲಿತರ ಮೇಲೆ ಹಲ್ಲೆ ದೌರ್ಜನ್ಯ ಪ್ರಕರಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪ್ರತಿಭಟನಾನಿರತ ಲಕ್ಷ್ಮಣ ಮಾದಿನೂರು ಆರೋಪಿಸಿದರು.

ಪ್ರಮುಖ ಬೇಡಿಕೆಗಳಾದ ನಂದಿಹಳ್ಳಿ ದಲಿತರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು, ಶಾಲೆ, ಅಂಗನವಾಡಿ, ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮನೆ, ಉದ್ಯೋಗ, ಹೈನುಗಾರಿಕೆಯಂತಹ ಸೌಲಭ್ಯ ಕಲ್ಪಿಸಿ ದಲಿತರನ್ನು ಸಬಲೀಕರಣ ಮಾಡಬೇಕು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಸಮಿತಿ ಸದಸ್ಯರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ದಾದಾಸಾಹೇಬ ಡಾ.ಎನ್.ಮೂರ್ತಿ, ರಾಜ್ಯ ಸಮಿತಿ ಸದಸ್ಯ ಡಾ.ಜ್ಞಾನಸುಂದರ, ವಿಭಾಗೀಯ ಉಪಾಧ್ಯಕ್ಷ ಮರಿಯಪ್ಪ ಯತ್ನಟ್ಟಿ, ಕಾರ್ಯದರ್ಶಿ ರಾಮಣ್ಣ ಕಂದಾರಿ, ಸಮಿತಿಯ ಜಿಲ್ಲಾಧ್ಯಕ್ಷ ಲಕ್ಷ್ಮಣ ವಾಯ್ ಮಾದನೂರು, ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಬಸವರಾಜ ಬೂದಗುಂಪಾ, ಮುದಿಯಪ್ಪ ಪೂಜಾರ, ಹನುಮಂತಪ್ಪ ಜೂಲಕಟ್ಟಿ, ಚಂದ್ರಪ್ಪ ಕುದರಿ, ನಿಂಗಪ್ಪ ಕಾಮನೂರು, ನಾಗರಾಜ ರ್‍ಯಾವಣಕಿ, ಹನುಮಂತಪ್ಪ ಹಿರೇಸಿಂದೋಗಿ, ಹನುಮಂತ ಗುಮಗೇರಿ, ಫಕೀರಪ್ಪ ಕೆ.ದೊಡ್ಡಮನಿ, ಬಸವರಾಜ, ಆರ್.ಚಿನ್ನಪ್ಪ, ಮರಿಸ್ವಾಮಿ, ಕೃಷ್ಣಪ್ಪ, ಎನ್.ಸರಸ್ವತಿ, ಶಿವಪ್ಪ ಬಗನಾಳ ಮೊದಲಾದವರು ಪಾಲ್ಗೊಂಡಿದ್ದರು.

Exit mobile version