ಅವೈಜ್ಞಾನಿಕ ಚರಂಡಿ ನಿರ್ಮಾಣ 50ಕ್ಕೂ ಮನೆಗಳಿಗೆ ನುಗ್ಗಿದ ಮಳೆ ನೀರು ಗ್ರಾಮಸ್ಥರ ಆರೋಪ

ಉತ್ತರಪ್ರಭ ಸುದ್ದಿ

ನರೇಗಲ್: ಸಮೀಪದ ಕಳಕಾಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಯ ನೀರು 50ಕ್ಕೂ ಹೆಚ್ಚಿನ ಮನೆಗಳಿಗೆ ನುಗ್ಗಿದೆ. ಗ್ರಾಮದಲ್ಲಿ ಗುತ್ತಿಗೆದಾರರು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಚರಂಡಿ ಕಾರಣ ಮಳೆ ನೀರು ಮನೆಗಳಿಗೆ ನುಗ್ಗಿ ಹಾನಿ ಮಾಡಿದೆ ಎಂದು ಸ್ಥಳೀಯರಾದ ರಮಜಾನಬಿ ಗಾಣದ, ಯಲ್ಲಪ್ಪ ಶಿರಗುಂಪಿ, ಪಡಿಯವ್ವ ಮಾದರ, ಬನ್ನೆಪ್ಪ ಕಟ್ಟಿಮನಿ, ಯಮನೂರಸಾಬ ಮಾರನಬಸರಿ ಆರೋಪ ಮಾಡಿದರು.

ಗ್ರಾಮ ಪಂಚಾಯ್ತಿಯ ಸದಸ್ಯರು ಕಮಿಷನ್ ಆಸೆಗೆ ಬೇಕಾಬಿಟ್ಟಿ ಚರಂಡಿ ನಿರ್ಮಾಣ ಮಾಡಿರುವ ಕಾರಣ ಜುಮಾ ಮಸೀದಿ ಯಿಂದ ಕನಕದಾಸರ ಮೂರ್ತಿವರೆಗಿನ ಎಲ್ಲಾ ಮನೆಗಳಿಗೆ ಮಳೆ ನೀರು ನುಗ್ಗಿದೆ. ಚರಂಡಿ ತೆರುವು ಮಾಡುವಂತೆ ಗ್ರಾಮದ ಅರ್ಧಕ್ಕೂ ಹೆಚ್ಚು ಜನರು ಆಗ್ರಹ ಮಾಡಿದ ಕಾರಣ ಸಿಸಿ ರಸ್ತೆ ಇಂದಿಗೂ ನಿರ್ಮಾಣ ಆಗಿಲ್ಲ ಆದರೆ ಚರಂಡಿ ಮರು ನಿರ್ಮಾಣ ಮಾಡಲು ಮುಂದಾಗದೇ ಇರುವ ಕಾರಣಕ್ಕೆ ಗ್ರಾಮಸ್ಥರ ಮನೆಗಳು ಮಳೆ ನೀರಿನಲ್ಲಿ ನಿಂತಿವೆ ಎಂದು ಲಾಡಸಾಬ ತಿಮ್ಮನೆಟ್ಟಿ, ಮುಸ್ತುಸಾಬ ದೊಡ್ಡಮನಿ, ಅಂದಪ್ಪ ಶಿರಹಟ್ಟಿ ಆರೋಪ ಮಾಡಿದರು.

ಮುಂಗಾರು ಬಿತ್ತನೆಗಾಗಿ ತಂದಿದ್ದ ಗೊಬ್ಬರ, ಬೀಜ ಹಾಗೂ ಸಂಗ್ರಹಿಸಿ ಇಡಲಾಗಿದ್ದ ಬಿಳಿ ಜೋಳ, ಗೋಧಿ, ಮನೆಯ ದಿನಿಸಿ, ಬಟ್ಟೆ ಎಲ್ಲವೂ ಮಳೆ ನೀರಿನಲ್ಲಿ ಒದ್ದೆಯಾಗಿ ಹಾನಿಯಾಗಿದೆ ಎಂದು ರೈತ ದೇವಪ್ಪ ಹಳ್ಳಿ, ಕಳಕಪ್ಪ ಬೂದಿಹಾಳ, ಬಾಬುಸಾಬ ದೊಡ್ಡಮನಿ ಹೇಳಿದರು.

Exit mobile version