ಆಶ್ರಯ ನಿವಾಸಿಗಳು ಮತ್ತು ಸ್ಥಳೀಯ ಮುಸ್ಲಿಂ ಸಮುದಾಯದ ನಡುವೆ ಪರಸ್ಫರ ವಾಗ್ವಾದ

ಉತ್ತರಪ್ರಭ ಸುದ್ದಿ

ಲಕ್ಷ್ಮೇಶ್ವರ: ಪಟ್ಟಣದ ಆಶ್ರಯ ಪ್ಲಾಟ್‌ವೊಂದರಲ್ಲಿ ಕಚ್ಚಾ ರಸ್ತೆ, ಚರಂಡಿ ನಿರ್ಮಾಣದ ಸಂಬಂಧ ಮಂಗಳವಾರ ಆಶ್ರಯ ನಿವಾಸಿಗಳು ಮತ್ತು ಸ್ಥಳೀಯ ಮುಸ್ಲಿಂ ಸಮುದಾಯದ ನಡುವೆ ಪರಸ್ಫರ ವಾಗ್ವಾದ ಉಂಟಾದ ಘಟನೆ ನಡೆಯಿತು.

ಪಟ್ಟಣದ ಯತ್ನಳ್ಳಿ ರಸ್ತೆಗೆ ಹೊಂದಿಕೊಂಡಿರುವ ವಾರ್ಡ್ ನಂ-2 ರ ವ್ಯಾಪ್ತಿಯ ಆಶ್ರಯ ಪ್ಲಾಟ್‌ಗೆ ಕಚ್ಚಾ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಬೇಕು ಎಂಬ ಇಲ್ಲಿನ ನಿವಾಸಿಗಳ ಹೋರಾಟದ ಹಿನ್ನೆಲೆ ಮಂಗಳವಾರ ಪುರಸಭೆಯವರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸಲು ಕಚ್ಚಾರಸ್ತೆ ನಿರ್ಮಾಣ ಕಾರ್ಯ ಕೈಗೊಂಡಿದ್ದರು. ಈ ವೇಳೆ ಮೊದಲಿನಿಂದಲೂ ಇದು ಖಬರಸ್ತಾನದ ಜಾಗೆ ಇಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ವಿರೋಧ ಮಾಡುತ್ತಲೇ ಬಂದಿದ್ದರು.

ಮಂಗಳವಾರವೂ ಇನ್ನೂ ಸಮಸ್ಯೆ ಬಗೆಹರಿದಿಲ್ಲ ಅಲ್ಲಿಯವರೆಗೂ ರಸ್ತೆ,ಚರಂಡಿ ಮಾಡದಂತೆ ಪುರಸಭೆಯ ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ವೇಳೆ ನಿವಾಸಿಗರು ಮತ್ತು ಸೇರಿದ್ದ ಮುಸ್ಲಿಂ ಯುವಕರ ನಡುವೆ ಪರಸ್ಫರ ಮಾತಿನ ಚಕಮಕಿ ನಡೆದಿದೆ. ಕೂಡಲೇ ಪರಿಸ್ಥಿತಿ ಅರಿತ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಯಾಗಿ ಗುಂಪು ಚದುರಿಸಿದ್ದಾರೆ.

ಒಂದು ಕಡೆ ರಸ್ತೆ ಕೆಲಸ ಮಾಡಿಸುವಂತೆ ನಿವಾಸಿಗರು ಒತ್ತಾಯಿಸಿದರೆ ಮತ್ತೊಂದೆಡೆ ಕೆಲಸ ತಡೆಯುವಂತೆ ಆಗ್ರಹಿಸಿ ಮುಸ್ಲಿಂ ಯುವಕರು ತಹಸೀಲ್ದಾರ ಕಾರಿಗೆ ಅಡ್ಡಲಾಗಿ ಕುಳಿತು ಒತ್ತಾಯಿಸಿದರು. ಈ ವೇಳೆ ತಹಸೀಲ್ದಾರ ಭ್ರಮರಾಂಬ ಗುಬ್ಬಿಶೆಟ್ಟಿ, ಸಿಪಿಐ ವಿಕಾಸ ಲಮಾಣಿ, ಪಿಎಸ್‌ಐ ಪ್ರಕಾಶ ಡಿ ಅವರು ಎರಡೂ ಗುಂಪಿನ ಮುಂಖಂಡರು, ಯುವಕರರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿ ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಲಾಗುವುದು. ಪಟ್ಟಣದ ಹಿರಿಯರು, ಅಧಿಕಾರಿಗಳು ಪರಸ್ಫರ ಸಮಾಲೋಚಿಸಿ ಕಾನೂನುಬದ್ಧ, ನ್ಯಾಯಸಮ್ಮತ ತೀರ್ಮಾನ ಕೈಗೊಂಡ ನಂತರ ಎಲ್ಲರೂ ತೀರ್ಮಾನಕ್ಕೆ ಬದ್ಧರಾಗೋಣ ಎಂದು ಹೇಳಿ ಸೇರಿದ್ದ ಜನರನ್ನು ಚದುರಿಸಿದರು.

ಅಷ್ಟಾಗಿಯೂ ಇಲ್ಲಿನ ನಿವಾಸಿಗಳು ತಾವು ಕಳೆದ 20 ವರ್ಷದಿಂದ ಯಾವುದೇ ಮೂಲಭೂತ ಸೌಲಭ್ಯದಿಂದ ವಂಚಿತರಾಗಿದ್ದೇವೆ. ರಸ್ತೆ ನಿರ್ಮಾಣಕ್ಕೆ ಬಳಸುವ ಜಾಗೆ ಸರ್ಕಾರದ್ದಾಗಿದ್ದು ಯಾರದೂ ಮುಲಾಜಿಗೆ ಒಳಗಾಗದೇ ಅಧಿಕಾರಿಗಳು ಕಾನೂನು ಬದ್ಧ ಕ್ರಮ ಕೈಗೊಳ್ಳಬೇಕು. ಮೂಲಭೂತ ಸೌಲಭ್ಯ ಕಲ್ಪಿಸುವವರೆಗೂ ಹೋರಾಟ ಮಾಡುತ್ತೇವೆ ಎಂದು ಪಟ್ಟುಹಿಡಿದರು. ಅಧಿಕಾರಿಗಳ ಸೂಚನೆಯಂತೆ ಸಿಬ್ಬಂದಿಗಳು ಕಾರ್ಯ ನಿಲ್ಲಿಸಿದರೂ ಇಲ್ಲಿನ ನಿವಾಸಿಗಳು ಪಟ್ಟಣದ ಶಿಗ್ಲಿ ನಾಕಾದ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಅವಕಾಶ ಕಲ್ಪಿಸಲಿಲ್ಲ. ಅಲ್ಲಿಂದ ತಹಸೀಲ್ದಾರ ಕಚೇರಿಗೆ ತೆರಳಿ ಅಲ್ಲಿ ತಮಗೆ ಲಿಖಿತ ಭರವಸೆ ನೀಡುವವರೆಗೂ ಇಲ್ಲಿಂದ ಕದುಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.

ಈ ವೇಳೆ ತಹಸೀಲ್ದಾರರು ನಿವಾಸಿಗರನ್ನು ಸಮಾಧಾನಪಡಿಸಿ ಹಿರಿಯರು, ಅಧಿಕಾರಿಗಳ ಜತೆ ಚರ್ಚಿಸಲು ಒಂದೆರಡು ದಿನ ಕಾಲಾವಕಾಶ ಬೇಕು. ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂಬ ಭರವಸೆಯ ಹಿನ್ನೆಲೆ ಉಂಟಾಗಿದ್ದ ಗೊಂದಲಕ್ಕೊಂದಿಷ್ಟು ತಾತ್ಕಾಲಿಕ ರಿಲೀಪ್ ಸಿಕ್ಕಂತಾಯಿತು. ಆದಾಗ್ಯೂ ಈ ವಿಷಯ ಪಟ್ಟಣದಲ್ಲಿ ಪರಿಸ್ಥಿತಿ ಕೊಂಚ ಬೂದಿ ಮುಚ್ಚಿದ ಕೆಂಡದಂತಿದೆ. ಘಟನಾ ಸ್ಥಳಕ್ಕೆ ಬೇಟಿ ನೀಡಿದ ಡಿವೈಎಸ್‌ಪಿ ಶಿವಾನಂದ ಪಟ್ಟಣಶೆಟ್ಟಿ ಪಟ್ಟಣದಲ್ಲಿ ಶಾಂತಿ ಕಾಪಾಡಲು ಹೆಚ್ಚಿನ ಪೊಲೀಸ್ ಬಂದುಬಸ್ತ್ ನಿಯೋಜಿಸಿ ನಿಗಾವಹಿಸಿದ್ದಾರೆ.

Exit mobile version