ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ!: 50 ಕ್ಕೂ ಹೆಚ್ಚು ಜನ ಮೃತ

iraq hospital on fire

ಇರಾಕ್: ಕೋವಿಡ್ ಆಸ್ಪತ್ರೆ ಒಂದರಲ್ಲಿ ಅಗ್ನಿ ದುರಂತ ಸಂಭವಿಸಿದ ಘಟನೆ ಇರಾಕ್​ನ ನಾಸಿರಿಯಾ ನಗರದಲ್ಲಿ ನಡೆದಿದೆ. ಘಟನೆಯಲ್ಲಿ 50 ಕ್ಕೂ ಹೆಚ್ಚು ಜನ ಸಾವೀಗಿಡಾಗಿದ್ದಾರೆ ಎನ್ನಲಾಗಿದೆ.


ಆಕ್ಸಿಜನ್​ ಟ್ಯಾಂಕ್ ಸ್ಪೋಟಗೊಂಡಿದ್ದು ಅವಘಡಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಆಸ್ಪತ್ರೆಯ ಒಳಗಿದ್ದ ಆಕ್ಸಿಜನ್​ ಟ್ಯಾಂಕ್​ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಅದು ಸಿಡಿದು ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ವರದಿಗಳು ಅಂದಾಜಿಸಿವೆ. ಆದರೆ ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ತನಿಖೆಯಲ್ಲಿ ನಿಖರವಾದ ಮಾಹಿತಿ ಲಭ್ಯವಾಗಲಿದೆ.


ತಡರಾತ್ರಿ ವೇಳೆ ಈ ದುರಂತ ನಡೆದಿದೆ. ಆಸ್ಪತ್ರೆಯ ಐಸೋಲೇಶನ್ ವಾರ್ಡ್ ಹತ್ತಿರ ಬೆಂಕಿ ಕಾಣಿಸಿಕೊಂಡು ವ್ಯಾಪಿಸಿದೆ. ಈ ವೇಳೆ ಏಕಾಏಕಿ ಹೊತ್ತಿ ಉರಿಯಲಾರಂಭಿಸಿತು. ಆಸ್ಪತ್ರೆಯಲ್ಲಿದ್ದವರು ಪ್ರಾಣಾಪಾಯದಿಂದ ಹೊರಬರಲು ಪ್ರಯತ್ನಿಸಿದರು. ತಪ್ಪಿಸಿಕೊಳ್ಳಲಾಗದವರು ಅಗ್ನಿಗೆ ಆಹುತಿಯಾಗಿದ್ದಾರೆ. ಘಟನೆಯಲ್ಲಿ ಆರಂಭದಲ್ಲಿ 30 ಕ್ಕೂ ಹೆಚ್ಚು ಜನ ಸಾವೀಗಿಡಾಗಿರುವ ಕುರಿತು ಅಂದಾಜಿಸಲಾಗಿತ್ತು. ಆದರೆ ಇದೀಗ ಸಾವಿನ ಸಂಖ್ಯೆ 50 ಕ್ಕಿಂತ ಹೆಚ್ಚಾಗಿದೆ ಎನ್ನಲಾಗಿದೆ. ಹಲವರು ಗಂಭೀರ ಗಾಯಗೊಂಡಿದ್ದು ಮೃತರ ಸಂಖ್ಯೆ ಇನ್ನು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Exit mobile version