ಬೀದಿ ಬದಿ ವ್ಯಾಪಾರಸ್ಥರು ಕಡ್ಡಾಯವಾಗಿ ಲಸಿಕೆ ಪಡೆಯಲು ಮುಂದಾಗಬೇಕು : ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ

ಗಜೇಂದ್ರಗಡ: ಮಹಾಮಾರಿ ಕೊರೊನಾ ಹೊಡೆದೊಡಿಸುವ ಉದ್ದೇಶದಿಂದ ಬೀದಿ ಬದಿ ವ್ಯಾಪಾರಸ್ಥರು ಕಡ್ಡಾಯವಾಗಿ ಲಸಿಕೆ ಪಡೆಯಲು ಮುಂದಾಗಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಪಟ್ಟಣದ ತಹಶಿಲ್ದಾರ ಕಚೇರಿ ಆವರಣದಲ್ಲಿ ಪುರಸಭೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರಿಗೆ ಲಸಿಕೆ ನೀಡುವಿಕೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆ ತೀವೃವಾಗಿ ಹಬ್ಬುತ್ತಿದೆ. ಇದನ್ನು ತಡೆಗಟ್ಟಲು ಲಸಿಕೆಯೊಂದೆ ಅಸ್ತ್ರವಾಗಿದೆ. ಹೀಗಾಗಿ ಮುಂಚೂಣಿ ಕಾರ್ಯಕರ್ತರಾಗಿರುವ ಬೀದಿ ಬದಿ ವ್ಯಾಪಾರಸ್ಥರಿಗೂ ಲಸಿಕೆ ನೀಡಲು ಸರ್ಕಾರ ಸೂಚಿಸಿದ ಹಿನ್ನಲೆಯಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಪಟ್ಟಣದಲ್ಲಿನ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಸ್ಥರೂ ಸಹ ಲಸಿಕೆ ಹಾಕಿಸಿಕೊಳ್ಳಬೇಕು. ಇಲ್ಲದಿದ್ದರೆ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದರು.

ವೈದ್ಯಾಧಿಕಾರಿ ಡಾ. ರಮೇಶ ದೇವಗಿನಹಳ್ಳಿ ಮಾತನಾಡಿ, ಕೋವಿಡ್ ಲಸಿಕೆ ಪ್ರತಿಯೊಬ್ಬ ಭಾರತೀಯನ ಹಕ್ಕಾಗಿದೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಪಡೆದುಕೊಳ್ಳುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕಿದೆ ಎಂದರು.

ಇದೇ ಸಮದರ್ಭದಲ್ಲಿ 200ಕ್ಕೂ ಅಧಿಕ ಬೀದಿ ಬದಿ ವ್ಯಾಪಾರಸ್ಥರಿಗೆ ಲಸಿಕೆ ನೀಡಲಾಯಿತು. ಪಿಎಸ್‌ಐ ಗುರುಶಾಂತ್ ದಾಶ್ಯಾಳ, ಅಶೋಕ ವನ್ನಾಲ, ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಬಾಷೇಸಾಬ ಕರ್ನಾಚಿ, ರಾಘವೇಂದ್ರ ಮಂತಾ, ಶಿವಕುಮಾರ ಇಲ್ಲಾಳ, ಆನಂದ ಮಳಗಿ, ರಾಜು ಮಾಂಡ್ರೆ, ಹುಲ್ಲಪ್ಪ ತಳವಾರ ಸೇರಿದಂತೆ ಇನ್ನಿತರರು ಇದ್ದರು.

Exit mobile version