ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ 6 ತಿಂಗಳ ಕೋವಿಡ್ ರಿಸ್ಕ್ ಭತ್ಯೆ

ಬೆಂಗಳೂರು: ಕೊರೋನಾ 2ನೇ ಅಲೆಯ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಮೊದಲ ಅಲೆಯಲ್ಲಿ ನೀಡಲಾಗಿದ್ದ ಕೋವಿಡ್ ರಿಸ್ಕ್ ಭತ್ಯೆಯನ್ನು ನಿಲ್ಲಿಸಲಾಗಿತ್ತು. ಆದರೆ ಇದೀಗ ಮತ್ತೆ ಸರ್ಕಾರ ಕೋವಿಡ್ ರಿಸ್ಕ್ ಭತ್ಯೆಯನ್ನು ಆರು ತಿಂಗಳ ಕಾಲ ನೀಡಲು ಮುಂದಾಗಿದೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಯ.ಶಿವಶಂಕರ್ ನಡವಳಿ ಹೊರಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೋವಿಡ್ ರಿಸ್ಕ್ ಅಲೋಯೆನ್ಸ್ ನೀಡಲು ಈಗಾಗಲೇ ಅನುಮತಿಸಲಾದ ಹುದ್ದೆಗಳಿಗೆ ಮಾತ್ರ ಅನ್ವಯವಾಗುವಂತೆ 6 ತಿಂಗಳ ಅವಧಿಗೆ (ದಿನಾಂಕ 01-04-2021 ರಿಂದ ದಿನಾಂಕ 30-09-2021ರವರೆಗೆ) ಈ ಹಿಂದೆ ನಿಗದಿಪಡಿಸಲಾಗಿದ್ದ ಕೋವಿಡ್ ರಿಸ್ಕ್ ಭತ್ಯೆ ನೀಡಲು ಹಾಗೂ ಸ್ಟಾಫ್ ನರ್ಸ್ ಗಳಿಗೆ ಸಂಬಂಧಿಸಿದಂತೆ ಈ ಆದೇಶ ಜಾರಿಯಾದ ದಿನಾಂಕದಿಂದ ದಿನಾಂಕ 30-09-2021ರವರೆಗೆ ರೂ. 8,000ಗಳ ಕೋವಿಡ್ ರಿಸ್ಕ್ ಭತ್ಯೆ ನೀಡಲು ಮಂಜೂರಾತಿ ನೀಡಿ ಆದೇಶಿಸಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ತಜ್ಞರು, ವೈದ್ಯರು, ಸಿಬ್ಬಂದಿಗಳಿಗೆ ದಿನಾಂಕ 21-09-2021ರಲ್ಲಿ ಮಂಜೂರು ಮಾಡಿದ್ದ ಕೋವಿಡ್ ರಿಸ್ಕ್ ಭತ್ಯೆಯನ್ನು ದಿನಾಂಕ 01-04-2021ರಿಂದ ಮುಂದಿನ 6 ತಿಂಗಳ ಅವಧಿಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ನೀಡಲು ಹಾಗೂ ಸ್ಟಾಫ್ ನರ್ಸ್ ಗಳಿಗೆ ಸಂಬಂಧಿಸಿದಂತೆ ಮಾತ್ರ ರೂ. 8,000ಗಳ ರಿಸ್ಕ್ ಅಲೋಯೆನ್ಸ್ ಅನ್ನು ಈ ಆದೇಶ ಜಾರಿಯಾದ ದಿನಾಂಕದಿಂದ ನಿಡಲು ಅನುಮತಿ ನೀಡಿ ಆದೇಶಿಸಲಾಗಿದೆ.
ಇದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವಂತ ವೈದ್ಯರು, ತಜ್ಞರಿಗೆ ರೂ.10,000, ಶುಶ್ರೂಷಕಿಯರಿಗೆ ರೂ.8,000, ಪ್ರಯೋಗ ಶಾಲಾ ತಂತ್ರಜ್ಞರಿಗೆ ರೂ.5,000 ಮತ್ತು ಪಿಪಿಇ ಕಿಟ್ ಧರಿಸದೇ ಕೋವಿಡ್ ಆಸ್ಪತ್ರೆಗಳ ಹೊರಗಡೆ ಕಾರ್ಯನಿರ್ವಹಿಸುವ ಗ್ರೂಪ್-ಡಿ ನೌಕರರಿಗೆ ರೂ.3,000 ಕೋವಿಡ್ ರಿಸ್ಕ್ ಪ್ರೋತ್ಸಾಹಧನ ಸಿಗಲಿದೆ.

Exit mobile version