ಮೀನು ಸಾರು ಮಾಡಿವಿ ಬಾ ಅಪ್ಪಾ, ಎನ್ನುವ ಕರುಳಿನ ಕೂಗಿಗೂ ಬಾರದೇ ಹೋದ ಅಪ್ಪ..!

ಲಕ್ಷ್ಮೇಶ್ವರ: ಕೂಲಿ ಕೆಲಸ ಮುಗಿಸಿ ಮನೆಗೆ ಬಂದ ಅಪ್ಪನನ್ನು ಕಂಡ ಮಕ್ಕಳು ಅಪ್ಪ, ಕೈಯಲ್ಲಿ ಹಿಡಿದುಕೊಂಡು ಬಂದ ಚೀಲವನ್ನೆ ಕಣ್ಣರಳಿಸಿ ನೋಡಿದ್ದಾರೆ. ಅಪ್ಪ ತಂದ ಮೀನು ಕಂಡು ಹಿರಿಹಿರಿ ಹಿಗ್ಗಿದ್ದಾರೆ. ಮಕ್ಳಾ ಮೀನು ಸಾರು ರೆಡಿ ಆಗ್ಲಿ ನಾನು ಸ್ವಲ್ಪ ಹೊರಗ್ ಹೋಗಿ ಬರ್ತಿನಿ ಅಂತ ಹೊರ ನಡೆದ ಅಪ್ಪ.
ಇತ್ತ ಮೀನು ಸಾರು ರೆಡಿಯಾಯ್ತು ಬರ್ತಿನಿ ಅಂತ ಹೇಳಿ ಹೋದ ಅಪ್ಪ ರಾತ್ರಿಯಾದರೂ ಬರಲೇ ಇಲ್ಲ. ಹಸಿದ ಮಕ್ಕಳು ಅಪ್ಪನ ಹಾದಿ ನೋಡಿ ಸಾಕಾಗಿ ಊಟ ಮಾಡಿ ಆತಂಕದಲ್ಲೆ ಮಲಗಿದವು. ಆದರೆ ಅಪ್ಪನ ಪಾಲಿನ ಮೀನೂಟ ಇನ್ನೂ ಬಾಕಿ ಇತ್ತು. ಆದರೆ ಬೆಳಗಾಗುವಷ್ಟರಲ್ಲಿ ಊಟಕ್ಕೆ ಬರಬೇಕಾಗಿದ್ದ ಅಪ್ಪ ಶವವಾಗಿ ಪತ್ತೆಯಾದ.

ಮರಿಯಪ್ಪ ಕೂಲಿ ಕೆಸಲ ಮಾಡಿ ಜೀವನ ಮಾಡುತ್ತಿದ್ದ. ಆದರೆ ಶನಿವಾರವೂ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದಿದ್ದಾನೆ. ಮನೆಗೆ ಬರುವಾಗ ಮಕ್ಕಳಿಗೆ ಅಂತ ಮೀನು ತಂದಿದ್ದಾನೆ. ಮಕ್ಕಳ ಕೈಗೆ ಮೀನು ಕೊಟ್ಟು ಮೀನಿನ ಸಾರು ಮಾಡಲು ಹೇಳಿ ಮತ್ತೆ ಮನೆಯಿಂದ ಹೋರಗೆ ಹೋಗಿದ್ದಾನೆ. ಆದರೆ ತಡರಾತ್ರಿ ಆದ್ರೂ ತಂದೆ ಮನೆಗೆ ಬರಲೇ ಇಲ್ಲ. ಆದ್ರೆ, ಬೆಳಿಗ್ಗೆ ಮರಿಯಪ್ಪನ ಕೊಲೆಯ ಸುದ್ದಿ ಊರೆಲ್ಲ ಹಬ್ಬಿದಾಗಲೇ ವಿಷಯ ಕುಟುಂಬಕ್ಕೆ ಗೊತ್ತಾಯಿತು.


ಊರ ಹೊರವಲಯದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದ್ದು, ಈ ಘಟನೆ ಇಡೀ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮರಿಯಪ್ಪಾ(38) ಕೊಲೆಗೀಡಾದ ವ್ಯಕ್ತಿ. ಸೂರಣಗಿ-ನೆಲೋಗಲ್ ರಸ್ತೆಯ ಮದ್ಯದಲ್ಲಿ ಸೂರಣಗಿ ಹೊರವಲಯದಲ್ಲಿ ಭಾನುವಾರ ಬೆಳಿಗ್ಗೆ ಮೃತ ದೇಹ ಪತ್ತೆಯಾಗಿದೆ. ಈ ಬಗ್ಗೆ ಸ್ಥಳೀಯರು ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಮಾಹಿತಿ ಆಧರಿಸಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.





ಯಾರೋ ಕೊಲೆ ಮಾಡಿ ಮೃತ ದೇಹವನ್ನು ಬಿಸಾಕಿ ಹೋಗಿದ್ದಾರೆ ಎನ್ನುವ ಮಾಹಿತಿ ಪೊಲೀಸ್ ಠಾಣೆಗೆ ಬಂದ ಹಿನ್ನೆಲೆ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕೊಲೆಯ ಬಗ್ಗೆ ನಿಖರ ಕಾರಣ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದ್ದು, ತನಿಖೆಯಿಂದ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು.

-ಯತೀಶ್ ಎನ್, ಜಿಲ್ಲಾ ಪೊಲೀಸ್ ವರೀಷ್ಟಾಧಿಕಾರಿ


ಊರ ಹೊರವಲಯದ ನಡುರಸ್ತೆಯಲ್ಲೇ ನಡುರಾತ್ರಿ ಕೊಚ್ಚಿ ಕೊಲೆ ಮಾಡಿದ್ದಾರೆ. ಆ ಮೇಲೆ ರಸ್ತೆಯಿಂದ ಎಳೆದು ಜಮೀನಿನಲ್ಲಿ ಹಾಕಿದ್ದಾರೆ ಎನ್ನುವುದು ಗ್ರಾಮಸ್ಥರ ಸಂದೇಹ. ಕೊಲೆ ಸುದ್ದಿ ಗೊತ್ತಾಗುತ್ತಿದ್ದಂತೆ ಎಸ್ಪಿ ಯತೀಶ್ ಎನ್, ಡಿವೈಎಸ್ಪಿ ಶಿವಾನಂದ, ಸಿಪಿಐ ವಿಕಾಸ್ ಲಮಾಣಿ ಸ್ಥಳಕ್ಕೆ ಧಾವಿಸಿದ್ದಾರೆ. ಕೊಲೆಯ ಭೀಕರತೆ ಅರಿತ ಅಧಿಕಾರಿಗಳು ಶ್ವಾನ ದಳ ತರಿಸಿದ್ದಾರೆ.

ಕೊಲೆ ವಿಚಾರವಾಗಿ ಪೊಲೀಸರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದ್ದು, ಅವರು ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆ ಹಚ್ಚುತ್ತಾರೆ ಎನ್ನುವ ವಿಶ್ವಾಸ ನಮಗಿದೆ. ಮೂರು ಪುಟ್ಟ ಮಕ್ಕಳನ್ನು ಹೊಂದಿದ್ದ ಮರಿಯಪ್ಪನ ಕೊಲೆಯಲ್ಲಿ ಶಾಮೀಲಾದವರು ಯಾರೇ ಇರಲಿ ನಿಷ್ಪಕ್ಷಪಾತವಾಗಿ ತನಿಖೆಯಾಗಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು.

-ಕೋಟೆಪ್ಪ ವರ್ದಿ, ಗ್ರಾಮಸ್ಥ


ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಮರಿಪ್ಪನ ಮಕ್ಕಳ ಆಕ್ರಂಧನ ಮುಗಿಲು ಮುಟ್ಟಿತ್ತು. ಮೀನೂಟ ಮಾಡಿಸಿದ ಅಪ್ಪ ಇನ್ನೆಂದು ಮೀನು ತಿನ್ನಲು ತಮ್ಮೊಂದಿಗೆ ಬರಲಾರ. ಶಾಶ್ವತವಾಗಿ ತಮ್ಮಿಂದ ದೂರಾದರೆಂದರಿತ ಪುಟ್ಟ ಕಂದಮ್ಮಗಳ ಆಕ್ರಂಧನ ಕಂಡು ಗ್ರಾಮಸ್ಥರು ಕಣ್ಣೀರಾದರು.

Exit mobile version