ಬೆಂಗಳೂರು: ಸಾರಿಗೆ ಇಲಾಖೆಯ ಅಧೀನದಲ್ಲಿರುವ ನಾಲ್ಕು ಸಾರಿಗೆ ನಿಗಮಗಳಲ್ಲಿನ ಮೇಲ್ವಿಚಾರಕರನ್ನು ಬಿಟ್ಟು ಮೂರು ಮತ್ತು ನಾಲ್ಕನೇ ಶ್ರೇಣಿಯ ಕಾಯಂ ನೌಕರರ ಅಂತರ ನಿಗಮ ವರ್ಗಾವಣೆಗೆ ಅವಕಾಶ ಕಲ್ಪಿಸಿ ಮಂಗಳವಾರ ಆದೇಶ ಹೊರಡಿಸಿದೆ.
ಸಾರಿಗೆ ನೌಕರರು ಈಚೆಗೆ ನಡೆಸಿದ್ದ ಮುಷ್ಕರದ ವೇಳೆ ಮುಂದಿಟ್ಟಿದ್ದ ಬೇಡಿಕೆಗಳಲ್ಲಿ ಅಂತರ ನಿಗಮಗಳ ವರ್ಗಾವಣೆ ಪ್ರಮುಖವಾಗಿತ್ತು. ಈ ಹಿಂದೆ ಆರು ಬೇಡಿಕೆಗಳನ್ನು ಈಡೇರಿಸಿದ್ದ ಇಲಾಖೆ, ಈಗ ಅಂತರ ನಿಗಮ ವರ್ಗಾವಣೆಗೂ ಅವಕಾಶ ಕಲ್ಪಿಸಿದೆ.
ನೂತನ ಮಾರ್ಗಸೂಚಿ ಪ್ರಕಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನೌಕರರನ್ನು ಅವರ ಕೋರಿಕೆಯ ಮೇರೆಗೆ ಅಂತರ ನಿಗಮಗಳಿಗೆ ವರ್ಗಾವಣೆ ಮಾಡಬಹುದು.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಇತರ ಮೂರು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಸದಸ್ಯರಾಗಿರುವ ಸಮಿತಿ ವರ್ಗಾವಣೆ ಪ್ರಾಧಿಕಾರವಾಗಿರುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಕಡ್ಡಾಯವಾಗಿದ್ದು, ಸೂಕ್ತ ತಂತ್ರಾಂಶ ಅಭಿವೃದ್ಧಿಪಡಿಸಿ, ಪ್ರತಿ ವರ್ಷ ಏಪ್ರಿಲ್ 1ರಿಂದ 30ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಕಲ್ಯಾಣ ಕರ್ನಾಟಕ ಸ್ಥಳೀಯ ಅಭ್ಯರ್ಥಿಗಳಿಗೂ ಮೀಸಲಾತಿ ಒದಗಿಸಬೇಕು. ಪ್ರತಿ ವರ್ಷ ಮೇ ತಿಂಗಳಿನಲ್ಲಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ವರ್ಗಾವಣೆಗೊಂಡ ನೌಕರರು ಮೂಲ ನಿಗಮದಲ್ಲಿ ಪಡೆಯುತ್ತಿದ್ದ ವೇತನವನ್ನು ರಕ್ಷಿಸಲಾಗುತ್ತದೆ. ಆದರೆ, ಇತರ ಸೌಲಭ್ಯಗಳ ವಿಚಾರದಲ್ಲಿ ವರ್ಗಾವಣೆ ಹೊಂದುವ ನಿಗಮದ ನಿಯಮಗಳು ಅನ್ವಯವಾಗುತ್ತದೆ. ವರ್ಗಾವಣೆಗೊಂಡ ನಿಗಮದ ಜೇಷ್ಠತಾ ಪಟ್ಟಿಯ ಕೊನೆಯಲ್ಲಿ ಈ ನೌಕರರ ಹೆಸರನ್ನು ಸೇರಿಸಬೇಕು. ವರ್ಗಾವಣೆ ಭತ್ಯೆಯ ಸೌಲಭ್ಯ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ತರಬೇತಿ ಅವಧಿ ಕಡಿತಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಗೆ ಕಡತ ಸಲ್ಲಿಸಲಾಗಿದೆ. ವೇತನ ಪರಿಷ್ಕರಣೆ ಸಂಬಂಧ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.
