ರಮೇಶ್ ಜಾರಕಿಹೊಳಿ ಯಾರ ಮಾತು ಕೇಳಲ್ಲ: ಸತೀಶ್ ಜಾರಕಿಹೊಳಿ

ಗೋಕಾಕ್: ರಮೇಶ್ ಜಾರಕಿಹೊಳಿಯವರು ಯಾರ ಮಾತುಗಳನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಸಿಡಿ ಪ್ರಕರಣದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಗೋಕಾಕಿನಲ್ಲಿ ಯಾವ ಪರಿಸ್ಥಿತಿ ಇದೆ, ಜಾರಕಿಹೊಳಿ ಕುಟುಂಬ ಯಾರು ನಡೆಸುತ್ತಾರೆ ಎಂಬುದು ಗೊತ್ತಿದೆ. ರಮೇಶ್ ವೈಯಕ್ತಿಕವಾಗಿ ಇದ್ದಾರೆ. ಅಳಿಯ ಅಂಭಿರಾವ್ ಪಾಟೀಲ ಅವರ ಮಾತು ಬಿಟ್ರೆ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ರಮೇಶ್ ಇಲ್ಲ ಎಂದರು.

ರಮೇಶ್ ಸಿಡಿ ಪ್ರಕರಣದಲ್ಲಿ ಯುವತಿ ಹೇಳಿಕೆ ಅತೀ ಮುಖ್ಯ. ಪೊಲೀಸರು ತನಿಖೆ ನಡೆಸಿ, ಯುವತಿಗೆ ನೊಟೀಸ್ ನೀಡಿ, ಕರೆಸಿ ವಿಚಾರಣೆ ನಡೆಸಬೇಕು. ಬೇರೆ ಯಾರೇ ದೂರು ನೀಡಿದರೂ ಅದರಿಂದ ಪ್ರಯೋಜನವಾಗದು. ಯುವತಿಯ ಹೇಳಿಕೆಯೇ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಪಕ್ಷ ಯಾವುದೇ ಇದ್ದರೂ ಇಂತಹ ಘಟನೆಗಳು ನಡೆಯಬಾರದು. ಹಾಗೇನಾದರೂ ಇದ್ದಲ್ಲಿ ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡಿ, ತನಿಖೆ ನಡೆಸುವಂತೆ ಆಗ್ರಹಿಸಬೇಕು. ಇದು ಉತ್ತಮ ವೇದಿಕೆ. ಅದರ ಬದಲಿಗೆ ಇಂತಹ ಪ್ರಕರಣಗಳನ್ನು ಬೀದಿಗೆ ತರಬಾರದು ಎಂದರು.

ಸಿಡಿ ಪ್ರಕರಣ ಮುಗಿದ ವಿಚಾರ. ಈಗಾಗಲೇ ರಮೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಂಬಂಧಿಸಿದವರಿಗೆ ಪೊಲೀಸರು ನೊಟೀಸ್ ನೀಡಿ, ತನಿಖೆ ನಡೆಸಬೇಕು. ಆಗ ಸತ್ಯಾಂಶ ಹೊರಬಲಿದೆ ಎಂದರು.

Exit mobile version