ಗಜೇಂದ್ರಗಡ: ಜೀವನದಲ್ಲಿ ಒಂದಿಲ್ಲ ಒಂದು ಸಂಕಷ್ಟಗಳು ಇರುತ್ತವೆ. ಸಂಕಷ್ಟ ಎದುರಿಸುವ ಮನೋಬಲ ಬಲಿಷ್ಠವಿದ್ದರೆ ಎಂತಹ ಸಮಸ್ಯೆಯೂ ದೂರ ಮಾಡಬಹುದು ಈ ನಿಟ್ಟಿನಲ್ಲಿ ಸಾಧಕರ ಯಶೋಗಾಥೆಗಳನ್ನು ಅವಲೋಕಿಸಿಕೊಂಡು ಮುನ್ನಡೆಯಿರಿ ಎಂದು ರೋಟರಿ ಕ್ಲಬ್ ಅಧ್ಯಕ್ಷ ಸುರೇಂದ್ರಸಾ ರಾಯಬಾಗಿ ಹೇಳಿದರು.
ಪಟ್ಟಣದ ಬಾಲಕಿಯರ ಪ್ರೌಢ ಶಾಲೆಯಲ್ಲಿ ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿನಿಯರಿಗೆ ಟ್ಯಾಬ್ ವಿತರಣೆ ಮಾಡಿ ಮಾತನಾಡಿದ ಅವರು, ಮಾನವನ ಬದುಕಿನಲ್ಲಿ ಸಮಯ ಕೋಟಿ ಕೊಟ್ಟರೂ ಸಿಗದು. ಹೀಗಾಗಿ ವಿದ್ಯಾರ್ಥಿಗಳು ವೇಳೆಗೆ ಬಹಳ ಮಹತ್ವ ನೀಡಬೇಕು. ಅಂದಾಗ ಮಾತ್ರ ದೇಶ ಮೆಚ್ಚುವಂತಹ ಸಾಧನೆ ಗೈಯಲು ಸಾದ್ಯ. ಜೀವನದಲ್ಲಿ ಎಲ್ಲರೂ ಯಶಸ್ಸು ಕಾಣಲು ಭಯ ಪಡುತ್ತಾರೆ. ಆದರೆ ಕೇವಲ ಹಣಗಳಿಸುವುದು, ವೈಭವದ ಜೀವನ ನಡೆಸುವುದರಿಂದ ಯಶಸ್ವಿಯಾಗುವುದಿಲ್ಲ. ಬದಲಾಗಿ ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಿದಾಗ ಮಾತ್ರ ಯಶಸ್ಸು ಎಂಬ ಪದಕ್ಕೆ ಅರ್ಥ ಬರುತ್ತದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರಂತರ ಶ್ರಮ, ಕಠಿಣ ಅಭ್ಯಾಸದೆಡೆಗೆ ಮುಂದಾಗಿ ಎಂದರು.
ಮುಖ್ಯ ಶಿಕ್ಷಕ ಬಿ.ಎನ್.ಜಾಲಿಹಾಳ ಮಾತನಾಡಿ, ಶಿಕ್ಷಣದಿಂದ ಪಡೆದುಕೊಳ್ಳುವ ಸಂಸ್ಕಾರದಿಂದ ಭವಿಷ್ಯದ ಜೀವನ ನಿರ್ವಹಣೆಗೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ನಿಗದಿತ ಗುರಿ ಸಾಧನೆಗೆ ಕಠಿಣ ಪರಿಶ್ರಮ ತೋರುವ ಮೂಲಕ ಪೋಷಕರ ಆಶಯ ಈಡೇರಿಸಲು ಮುಂದಾಗಬೇಕು ಎಂದರು.
ಇದೇ ವೇಳೆ ವಿದ್ಯಾರ್ಥಿನಿಯರಿಗೆ ಟ್ಯಾಬ್ ವಿತರಿಸಲಾಯಿತು. ರಿತೇಶ ಮೆಹರವಾಡೆ, ಮುಖ್ಯ ಶಿಕ್ಷಕ ಅಶೋಕ ಶೆಟ್ಟರ, ರಮೇಶ ಮಾರನಬಸರಿ, ಆರ್.ಎಂ.ರಾಯಬಾಗಿ, ಜಗದೀಶ ಕನಕೇರಿ, ವಿಶಾಲ ಕಟ್ಟಿ, ಟಿ.ಶಂಕರ, ಗಣಪತಸಾ ರಾಯಬಾಗಿ, ಸಂತೋಷ ಕೆಂಚಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
