ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ದೇವರಮನಿ

ದಾವಣಗೆರೆ: ಕಾಂಗ್ರೆಸ್ನಿಂದ ಮೇಯರ್ ಆಕಾಂಕ್ಷಿಯಾಗಿದ್ದ ದೇವರಮನಿ ಶಿವಕುಮಾರ್ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದಾರೆ.

ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ ಅಚ್ಚರಿಯ ರಾಜಕೀಯ ಬೆಳವಣಿಗೆಗಳಾಗಿವೆ. ಕಾಂಗ್ರೆಸ್ನಿಂದ ದೇವರಮನಿ ಶಿವಕುಮಾರ್ ಮತ್ತು ಜೆ.ಎನ್. ಶ್ರೀನಿವಾಸ್ ಮೇಯರ್ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದರು. ಕಾಂಗ್ರೆಸ್ ವರಿಷ್ಠರು ಶ್ರೀನಿವಾಸ್ ಅವರ ಮನವೊಲಿಸಿ ಶಿವಕುಮಾರ್ ಅವರನ್ನೇ ಅಂತಿಮಗೊಳಿಸಿದ್ದರು. ಆದರೆ, ಗೆಲುವಿಗೆ ಬೇಕಾದ ಸ್ಥಾನಗಳನ್ನು ಹೊಂದಿಸುವ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ನೊಂದು ಹೊರ ನಡೆದಿದ್ದರು.

ಬೆಳಗಿನಿಂದ ಸಂಜೆಯವರೆಗೆ ಕಾಂಗ್ರೆಸ್ನ ಎಲ್ಲ ಸದಸ್ಯರು ನಾವು ಒಟ್ಟಿಗೆ ಇದ್ದೆವು. ರಾತ್ರಿ ನಮ್ಮಲ್ಲಿಂದ ಹೊರಗೆ ಹೋಗಿರುವ ಅವರು ಬಿಜೆಪಿಗೆ ಸೇರಿದ್ದಾರೆ. ನಾವು ಅಷ್ಟು ಬೆಂಬಲ ನೀಡಿದ್ದೆವು. ವರಿಷ್ಠರು ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಿದ್ದರು’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ತಿಳಿಸಿದ್ದಾರೆ.

ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿಯನ್ನು ಕಂಡು, ಬಿಜೆಪಿಯ ತತ್ವ ಸಿದ್ಧಾಂತವನ್ನು ಒಪ್ಪಿ ಬಿಜೆಪಿಗೆ ಬರುತ್ತೇನೆ ಎಂದು ದೇವರಮನಿ ಶಿವಕುಮಾರ್ ಹೇಳಿದರು. ಅವರಾಗಿಯೇ ಪಕ್ಷಕ್ಕೆ ಬರುವಾಗ ನಾವು ಬರಮಾಡಿಕೊಳ್ಳಬೇಕಾಗುತ್ತದೆ. ಬುಧವಾರ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ ಮಾಹಿತಿ ನೀಡಿದ್ದಾರೆ.

Exit mobile version