ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಯ ಮೇಲಿನ ದಾಳಿ ಬಗ್ಗೆ ಸಿಸಿಬಿ ಹೇಳಿದ್ದೇನು?

ಬೆಂಗಳೂರು : ನಗರದಲ್ಲಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮಧ್ಯಂತರ ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ.

ಈ ಪ್ರಕರಣದಲ್ಲಿ ಟೆಕ್ನಿಕಲ್ ಮತ್ತು ಡಿಜಿಟಲ್ ಸಾಕ್ಷ್ಯಗಳು ಪ್ರಮುಖ ಪಾತ್ರ ವಹಿಸಿವೆ. 30ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 52 ಆರೋಪಿಗಳ ವಿರುದ್ದ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಆದರೆ, ಸದ್ಯ ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ರಿಲೀಫ್‌ ಸಿಕ್ಕಿದೆ. ಸಂಪತ್ ರಾಜ್ ಅನಾರೋಗ್ಯ ಕಾರಣ ನೀಡಿದ್ದಾರೆ. ಎದೆ ನೋವು, ಬಿಪಿ, ಶುಗರ್ ಇದೆ ಎಂದು ವೈದ್ಯರು ವರದಿ ನೀಡಿದ್ದರು. ಸಂಪತ್ ರಾಜ್ ದಾಖಲಾಗಿದ್ದ ಆಸ್ಪತ್ರೆಗೆ ತೆರಳಿ ಸಿಸಿಬಿ ಪೊಲೀಸರು ಮೆಡಿಕಲ್‌ ವರದಿ ಪಡೆದುಕೊಂಡಿದ್ದಾರೆ. 

ಕುಮ್ಮಕ್ಕಿಗೆ ಕಿವಿಗೊಟ್ಟು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ನವೀನ್ ಫೇಸ್‌ ಬುಕ್‌ ಪೋಸ್ಟ್ ಕೇವಲ ಒಂದು ನೆಪ ಮಾತ್ರ. ಪೋಸ್ಟ್ ವಿರುದ್ಧ ಪ್ರತಿಭಟನೆ ಮಾಡಲು ಮುಖಂಡರು ನಿರ್ಧರಿಸಿದ್ದರು. ಆದರೆ, ಕೆಲವರು ಇದನ್ನೇ ದುರುಪಯೋಗ ಪಡಿಸಿಕೊಂಡು ಶಾಸಕರ ಮೇಲಿನ ದ್ವೇಷವನ್ನು ಈ ರೀತಿ ತೀರಿಸಿಕೊಂಡಿದ್ದಾರೆ. ಅಖಂಡ ಶ್ರೀನಿವಾಸ ಮೂರ್ತಿ ರಾಜಕೀಯವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಗಲಭೆಗೆ ಕುಮ್ಮಕ್ಕು ನೀಡಲಾಗಿದೆ. ಅರುಣ್ ರಾಜ್ ಮತ್ತು ಮುಜಾಹೀದ್ ಅಖಂಡ ಮನೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಇಬ್ಬರು ಆರೋಪಿಗಳ ಮೊಬೈಲಿನಲ್ಲಿ ವಾಟ್ಸಪ್‌ ಚಾಟ್‌ ಮತ್ತು ಕರೆ ಮಾಹಿತಿಯಲ್ಲಿ ಸಂಚಿನ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ.

ಆಖಂಡ ಶ್ರೀನಿವಾಸಮೂರ್ತಿ ಹೆಸರು ಹಾಳು ಮಾಡಲು ಪೂರ್ವ ನಿಯೋಜಿತ ಸಂಚು ಎಂಬುದು ತನಿಖೆ ವೇಳೆ ಬಯಲಾಗಿದೆ. 850 ಪುಟಗಳನ್ನೊಳಗೊಂಡ ಮಧ್ಯಂತರ ಚಾರ್ಜ್ ಶೀಟ್‌ನಲ್ಲಿ ಮಾಜಿ ಮೇಯರ್ ಸಂಪತ್ ರಾಜ್ 51ನೇ ಆರೋಪಿಯಾಗಿದ್ದರೆ, ಮಾಜಿ ಪಾಲಿಕೆ ಸದಸ್ಯ ಝಾಕೀರ್ 52ನೇ ಆರೋಪಿಯಾಗಿದ್ದಾರೆ. ಶಾಸಕರ ಮನೆಗೆ ಬೆಂಕಿ ಇಟ್ಟ ಪ್ರಕರಣದಲ್ಲಿ ಇವರ ಪಾತ್ರವೂ ಇದೆ ಎನ್ನಲಾಗಿದೆ. ಅಲ್ಲದೇ, ಟೆಕ್ನಿಕಲ್ ಸಾಕ್ಷ್ಯಗಳ ಇನ್ನಷ್ಟು ಆರೋಪಿಗಳ ಹೆಸರನ್ನು ಸೇರಿಸಲಾಗುವುದು ಎಂದು ಚಾರ್ಜ್‌ ಶೀಟ್‌ ನಲ್ಲಿ ತಿಳಿಸಲಾಗಿದೆ.

Exit mobile version