ಬೆಂಗಳೂರು : ಸೋಮವಾರ ಮೈಸೂರಿನ ಚಿತ್ರೀಕರಣದ ಸೆಟ್ ನಲ್ಲಿ ದರ್ಶನ್ ಅಭಿಮಾನಿಗಳು ತಮ್ಮ ಮೇಲೆ ನಡೆಸಿದ ಅಂಧಾದುಂದಿ ವರ್ತನೆಗೆ ಹಿರಿಯ ನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ವಿಷಾದ ಹೊರಹಾಕಿರುವ ಅವರು, ಯಾವುದೋ ಘಟನೆಯನ್ನು ಇನ್ನಾವುದೋ ಲಿಂಕ್ ಮಾಡಿ ಅವಮಾನಿಸುವ ಕೆಟ್ಟ ಚಾಳಿಯಿಂದ ಚಿತ್ರರಂಗವೇ ಸರ್ವನಾಶವಾಗಲಿದೆ ಎಂದು ಎಚ್ಚರಿಸಿದ್ದಾರೆ. ದರ್ಶನ್ ಅಭಿಮಾನಿಗಳು ತಮ್ಮ 40 ವರ್ಷಗಳ ಸಿನಿ ಜರ್ನಿಗೆ ಅವಮಾನಿಸಿದ್ದಾರೆ. ತಾವೇನು ಇದ್ದಕ್ಕಿದ್ದಂತೆ ಉದ್ಭವವಾದ ನಟನಲ್ಲ. ಚಾಪೆ ಹಾಸಿಕೊಂಡು ಕಲಾವಿದನಾಗಿ ಬೆಳೆದಿದ್ದೇನೆ. ಕನ್ನಡಿಗರ ಚಪ್ಪಾಳೆಯಿಂದ ಬೆಳೆದಿದ್ದೇನೆ ಎಂದು ಜಗ್ಗೇಶ್ ಭಾವುಕರಾಗಿ ಹೇಳಿದ್ದಾರೆ.
ತಮ್ಮನ್ನು ಅವಮಾನಿಸುವುದು, ಕನ್ನಡಿಗರನ್ನೇ ಅವಮಾನಿಸಿದಂತೆ. ಚಿತ್ರರಂಗದಲ್ಲಿ ಕೆಳಮಟ್ಟದಿಂದ ಬೆಳೆದು ಬಂದವರು ನಾವು. ನಿನ್ನೆಯ ಘಟನೆಯಿಂದ ತಮಗೆ ನೋವಾಗಿದೆ ಎಂದು ನಟ ಜಗ್ಗೇಶ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಚಿತ್ರರಂಗ ಎತ್ತ ಸಾಗುತ್ತಿದೆ ಎನ್ನುವುದನ್ನೂ ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ಜಗ್ಗೇಶ್, ಹೀಗೆ ಮುಂದುವರಿದರೆ ಸ್ಯಾಂಡಲ್ ವುಡ್ ಗೆ ಉಳಿಗಾಲವಿಲ್ಲ ಎಂದಿದ್ದಾರೆ.
ಒಬ್ಬ ಹಿರಿಯ ನಟನನ್ನು ಹೀಗೆ ಅವಮಾನಿಸುವುದು ತರವಲ್ಲ. ಕೆಲ ಯುವಕರ ಮಾತನ್ನೇ ಮುಂದಿಟ್ಟುಕೊಂಡು ಕೆಲ ಮಾಧ್ಯಮಗಳು ಕಾಗೆ ಹಾರಿಸಿದ ಜಗ್ಗೇಶ್ ಎಂದು ಬರೆಯುತ್ತಾರೆ. ತಾವೇನು ಸೆಟ್ ನಿಂದ ಓಡಿ ಹೋಗಿಲ್ಲ. ಪಲಾಯನ ಮಾಡಿಲ್ಲ. ಆ ಉದ್ವೇಗದಲ್ಲಿದ್ದ ಯುವಕರು ಮಾತನಾಡಿದ್ದ ಮಾತುಗಳನ್ನು ಬಹಿರಂಗವಾಗಿ ಹೇಳಿದ್ದರೆ ಬೆಂಕಿ ಹಚ್ಚುವಂತಹ ಕೆಲಸಗಳು ನಡೆಯುತ್ತಿದ್ದವು. ಆದರೆ, ತಾವು ಹಾಗೆ ಮಾಡಿಲ್ಲ. 20 ಜನರು ಮಾತನಾಡುವಾಗ ತಾಳ್ಮೆಯಿಂದಲೇ ಅಲ್ಲೇ ಇದ್ದು ಕೇಳಿಸಿಕೊಂಡಿದ್ದೇನೆ. ಹೀಗಿದ್ದರೂ ಇಂತಹ ಅವಮಾನಕಾರಿ ಪದ ಬಳಕೆ ಮಾಡುವುದು ಎಷ್ಟು ಸರಿ ಎಂದು ಜಗ್ಗೇಶ್ ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನಾನು ಯಾರಿಗೂ ಅಪಮಾನ ಮಾಡಿಲ್ಲ ಎಂದಿರುವ ಜಗ್ಗೇಶ್, ತಮಗೂ ಅಭಿಮಾನಿ ಬಳಗವಿದೆ. ಅವರಿಗೆಲ್ಲ ಉದ್ವೇಗಕ್ಕೆ ಒಳಗಾಗದಂತೆ ಹೇಳಿದ್ದೇನೆ. ನಿನ್ನೆಯಿಂದ ಸಾಕಷ್ಟು ಸಾಂತ್ವನದ ಮಾತುಗಳು ದಶ ದಿಕ್ಕಿನಿಂದಲೂ ಬರುತ್ತಿವೆ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ. ಡಾ.ರಾಜ್, ವಿಷ್ಣು, ಅಂಬರೀಷ್, ಶಂಕರ್ ನಾಗ್ ರಂತಹ ಘಟಾನುಘಟಿ ನಾಯಕ ನಟರುಗಳ ಇದ್ದ ಕಾಲದಿಂದಲೂ ಚಿತ್ರರಂಗದಲ್ಲಿದ್ದು, ಬೆಳೆದು ಬಂದಿದ್ದೇನೆ. ಕನ್ನಡಿಗರ ಪ್ರೀತಿ ವಿಶ್ವಾಸದಿಂದ ಕಲಾವಿದನಾಗಿದ್ದೇನೆ. ಬೇರೆ ಭಾಷೆಗಳಿಗೆ ಹೋಗದೇ ಕನ್ನಡಕ್ಕಾಗಿ ಇಲ್ಲಿಯೇ ಇದ್ದೇನೆ ಎಂದು ಜಗ್ಗೇಶ್ ನೋವಿನಿಂದ ನುಡಿದಿದ್ದಾರೆ.
ಡಾ.ರಾಜ್, ವಿಷ್ಣು, ಅಂಬಿ ಮರಣದ ಮರು ದಿನವೇ ಕನ್ನಡಿಗರ ಸ್ವಾಭಿಮಾನ ಸತ್ತು ಹೋಗಿದೆ. ಈಗ ಬದುಕಿರುವವರು ತಾವು, ಶಿವರಾಜ್ ಕುಮಾರ್ ,ರವಿಚಂದ್ರನ್, ರಮೇಶ್ ಮಾತ್ರ. ನಾವೆಲ್ಲ ಸತ್ತ ಮೇಲೆ ನಮ್ಮ ತಿಥಿ ಮಾಡಿ ಆನಂದಿಸಿ ಎಂದು ಜಗ್ಗೇಶ್ ಆಕ್ರೋಶ ಭರಿತರಾಗಿ ಹೇಳಿದ್ದಾರೆ.
