ಫೆ.24ರಿಂದ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ

ಮುಳಗುಂದ: ಶರಣ ಸಂಸ್ಕೃತಿಯ ಪಾವನ ತಾಣ ಮುಳಗುಂದದ ಕಾರಣಿಕ ಶಿಶು ಬಾಲಲೀಲಾ ಮಹಾಂತ ಶಿವಯೋಗಿಗಳ 162 ನೇ ಸ್ಮರಣೋತ್ಸವದಂಗವಾಗಿ ಫೆ.24 ರಿಂದ 26 ವರೆಗೆ ಗವಿಮಠದ ಅಧ್ಯಕ್ಷ ಮಲ್ಲಿಕಾರ್ಜುನ ಶ್ರೀಗಳ ನೇತ್ರತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಸಂಜಯ ನೀಲಗುಂದ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂಕಷ್ಟದ ನಡುವೆಯೂ ಭಕ್ತರ ಒತ್ತಾಸೆಯಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಫೆ.24 ರಂದು ಬೆಳಗ್ಗೆ 8.30ಕ್ಕೆ ಜನವಾಡ ಅಲ್ಲಮಪ್ರಭುದೇವರ ಆಶ್ರಮದ ಮಲ್ಲಿಕಾರ್ಜುನ ಸ್ವಾಮಿಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ಶ್ರೀಗಳು ಸಮ್ಮುಖ ವಹಿಸುವರು.

ಫೆ.25 ರಂದು ಮಧ್ಯಾಹ್ನ 1ಕ್ಕೆ ಮಹಾದಾಸೋಹ, ಸಂಜೆ 5ಕ್ಕೆ ಸಕಲ ವಾಧ್ಯ ಮೇಳಗಳೊಂದಿಗೆ ಬಾಲಲೀಲಾ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ವಿವಿಧ ಮಠಾಧೀಶರ ಸಮ್ಮುಖದಲ್ಲಿ ನಡೆಯಲಿದೆ.

ಸಂಜೆ 7ಕ್ಕೆ ಜಾತ್ರಾ ಮಹೋತ್ಸವದ ವಿಶೇಷ ಕಾರ್ಯಕ್ರಮದ ಸಾನಿಧ್ಯವನ್ನು ಚಿತ್ರದುರ್ಗ ಬೃಹನ್ಮಠ, ಬಸವಕೇಂದ್ರದ ಡಾ.ಶಿವಮೂರ್ತಿ ಮುರುಘಾ ಶರಣರು, ಉಪ್ಪಿನ ಬೆಟಗೇರಿ ವಿರಕ್ತ ಮಠದ ಕುಮಾರವಿರುಪಾಕ್ಷ ಸ್ವಾಮಿಜಿ, ಸಮ್ಮುಖವನ್ನು ಯರನಾಳ ವಿರಕ್ತ ಮಠದ ಸಂಗನಬಸವ ಸ್ವಾಮಿಜಿ ಸಾನಿಧ್ಯವಹಿಸುವರು. ಸಿ.ಬಿ. ಬಡ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎಚ್.ಕೆ. ಪಾಟೀಲ ಸಾನಿಧ್ಯವಹಿಸುವರು. ಶಿವಕುಮಾರ ಉದಾಸಿ, ಆರ್.ಎನ್. ದೇಶಪಾಂಡೆ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು.

ಶರಣರು ಕಟ್ಟಿಕೊಟ್ಟ ಬದುಕು ವಿಷಯ ಕುರಿತು ವೈ.ಎಂ. ಯಾಕೊಳ್ಳಿ ಅವರಿಂದ ಉಪನ್ಯಾಸ, ರೇವಣ ಸಿದ್ಧಯ್ಯ ಮರಿದೇವರಮಠ, ಜಯಮ್ಮ ದಾನಮ್ಮನವರ ಅವರಿಂದ ವಚನ ಸಂಗೀತ ಜರುಗಲಿವೆ.

ಫೆ.26ರಂದು ಸಂಜೆ 5ಕ್ಕೆ ಮಲ್ಲಿಕಾರ್ಜುನ ಶ್ರೀಗಳಿಂದ ಕಡುಬಿನ ಕಾಳಗ, ಸಂಜೆ 7ಕ್ಕೆ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿರಹಟ್ಟಿ ಸಂಸ್ಥಾನಮಠದ ಜ. ಫಕೀರಸಿದ್ಧರಾಮ ಸ್ವಾಮಿಜಿ ಸಾನಿಧ್ಯವಹಿಸಲಿದ್ದು, ಎಸ್.ವಿ. ಸಂಕನೂರ, ಡಿ.ಆರ್. ಪಾಟೀಲ, ಎಸ್.ಎಂ. ನೀಲಗುಂದ, ಎಂ.ಡಿ. ಬಟ್ಟೂರ ಅತಿಥಿಗಳಾಗಿ ಆಗಮಿಸುವರು.

ನೀಲಗುಂದ ಜೈಭೀಮ ಗೀ ಗೀ ಜಾನಪದ ಮೇಳದಿಂದ ಜಾನಪದ ಕಾರ್ಯಕ್ರಮ, ಮುತ್ತು ನಾಯ್ಕರ ಕಲಾತಂಡದಿAದ ರಸಮಂಜರಿ, ಜೀವನಸಾಬ ಬಿನ್ನಾಳ, ಶರಣು ಕುರ್ನಾಳ ಅವರಿಂದ ಹಾಸ್ಯ, ಖಾಸೀಮ ಅಲಿ, ಮನು ಪಾಟೀಲ ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗುವವು ಎಂದು ತಿಳಿಸಿದರು.

ಡಾ.ಎಸ್.ಸಿ. ಚವಡಿ, ಷಣ್ಮುಖಪ್ಪ ಬಡ್ನಿ, ರಾಮಣ್ಣಾ ಕಮಾಜಿ ಬಸವರಾಜ ಹಾರೋಗೇರಿ, ಡಿ.ಎಸ್. ನೀಲಗುಂದ, ಡಿ.ಎಂ ನಿಂಗಪ್ಪನವರ, ನಾಗಪ್ಪ ಬಾಳಿಕಾಯಿ, ಗುರುಶಾಂತ ಮಟ್ಟಿ ಮುಂತಾದವರು ಉಪಸ್ಥಿತರಿದ್ದರು.

Exit mobile version