ಗದಗ: ರಾಜ್ಯ ಸರ್ಕಾರ ಪೂಜ್ಯ ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಹೆಸರಿನಿಂದ ಶ್ರೀಗಳ ಜನ್ಮದಿನವಾದ ಫೆ.21 ಈ ದಿನವನ್ನು ಭಾವೈಕ್ಯತೆ ದಿನವೆಂದು ಆಚರಿಸಬೇಕು. ಹಾಗೂ ಪ್ರತಿ ವರ್ಷ ಶ್ರೀಗಳ ಹೆಸರಿನಲ್ಲಿ ಭಾವೈಕ್ಯತೆ ಪ್ರಶಸ್ತಿ ನೀಡಬೇಕು ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಒತ್ತಾಯಸಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕಾಮತ್ ಹೋಟೆಲ್ ಪಕ್ಕದಲ್ಲಿರು ಮಠದ 2 ಎಕರೆ ಜಾತ್ರಾ ಬಯಲು ಜಾಗೆ ಇದೆ. ಅಲ್ಲಿ ಶ್ರೀಗಳ ಹೆಸರಿನಲ್ಲಿ ಭಾವೈಕ್ಯತೆ ಭವನ ನಿರ್ಮಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದರು.
ಲಿಂ.ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ 72ನೇ ಜಯಂತಿ ಹಾಗೂ ಶ್ರೀಗಳ ಕುರಿತು ಗ್ರಂಥಗಳ ಬಿಡುಗಡೆ ಸಮಾರಂಭವನ್ನು ಫೆ.21 ರಂದು ಬೆಳಗ್ಗೆ 11ಕ್ಕೆ ನಗರದ ತೋಂಟದಾರ್ಯ ಸಂಸ್ಥಾನ ಮಠದಲ್ಲಿ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9ಕ್ಕೆ ಬಸವೇಶ್ವರ ಪುತ್ಥಳಿಯಿಂದ ಶ್ರೀಮಠದವರೆಗೆ ಭಾವೈಕ್ಯತಾ ಯಾತ್ರೆ ಜರುಗಲಿದ್ದು, ನಂತರ ಶ್ರೀಮಠದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಮುಂಡರಗಿ ತೋಂಟದಾರ್ಯ ಶಾಖಾಮಠದ ಪೂಜ್ಯ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ, ಶಿರೋಳ ತೋಂಟದಾರ್ಯ ಶಾಖಾಮಠದ ಪೂಜ್ಯ ಗುರುಬಸವ ಸ್ವಾಮೀಜಿ, ಭೈರನಟ್ಟಿ ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಸ್ವಾಮೀಜಿ, ಸಂಡೂರ ವಿರಕ್ತಮಠದ ಪ್ರಭು ಸ್ವಾಮೀಜಿ, ಅರಸಿಕೆರೆ ಕೋಲಶಾಂತೇಶ್ವರಮಠದ ಶಾಂತಲಿಂಗ ಸ್ವಾಮೀಜಿ, ಆಳಂದ ಅನುಭವ ಮಂಟಪದ ಕೋರಣೇಶ್ವರ ಸ್ವಾಮೀಜಿ, ಯಶವಂತನಗರ ಸಿದ್ಧರಾಮೇಶ್ವರಮಠದ ಗಂಗಾಧರ ಸ್ವಾಮೀಜಿ, ತೋಂಟದಾರ್ಯ ಮಠದ ಶ್ರೀ ಮಹಾಂತದೇವರು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ ಎಂದರು.
ಲಿಂಗೈಕ್ಯ ಶ್ರೀಗಳ ಕುರಿತು ಡಾ.ಜಗದೀಶ ಕೊಪ್ಪ ಹಾಗೂ ಪ್ರೊ.ಶಶಿಧರ ತೋಡಕರ ಸಂಪಾದಿಸಿದ ಸಮಾಜಮುಖಿ, ಪ್ರೊ.ಮಲ್ಲಿಕಾರ್ಜುನ ಹುಲಗಬಾಳಿ ರಚಿಸಿದ ಸನ್ನಿಧಾನ, ವೀರನಗೌಡ ಮರಿಗೌಡರ ರಚಿಸಿದ ವಿಶ್ವ ಮಾನವ ಜಿ. ಹಿರೇಮಠ ರಚಿಸಿದ ಡಂಬಳದ ತೋಂಟದ ಅರ್ಧನಾರೀಶ್ವರ ಶಿವಯೋಗಿಗಳು ಕೃತಿಗಳನ್ನು ನಿವೃತ್ತ ಗೃಹ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ ಬಿಡುಗಡೆಗೊಳಿಸಲಿದ್ದಾರೆ. ಡಂಬಳ-ಮಾನ್ವಿಯ ಪ್ರಸಿದ್ಧ ವೈದ್ಯ ಡಾ.ಎಸ್.ಡಿ.ಪ್ಯಾಟಿ ಅವರನ್ನು ಸನ್ಮಾನಿಸಿ, ಗೌರವಿಸಲಾಗುವುದು ಎಂದು ತಿಳಿಸಿದರು.
ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ದಾನಯ್ಯ ಗಣಾಚಾರಿ, ಚಂದ್ರು ಚವ್ಹಾಣ, ಗಂಗಾಧರ ಹಿರೇಮಠ, ಕೊಟ್ರೇಶ ಮೆಣಸಿನಕಾಯಿ ಮುಂತಾದವರು ಉಪಸ್ಥಿತರಿದ್ದರು.
