ವೈದ್ಯೋಪಚಾರದ ಗವಿಯಲ್ಲಿದ್ದೂ ಕವಿಯಾದ ಡಾ. ಸಂಕನಗೌಡರು

ತ್ತೀಚೆಗೇಕೋ ಡಾ. ವ್ಹಿ. ಕೆ. ಸಂಕನಗೌಡರನ್ನು ಕಾಡುತ್ತಿದ್ದಾಳಂತೆ ಕಾವ್ಯ ಕನ್ನಿಕೆ. ಅವರ ಮನದೊಳಗೆ ಹೊಕ್ಕವಳು ಹೊರಬಾರದೇ ಮನೆ ಮಾಡಿ ನಿಂದು ಜನರಿಗೇ ಬೆರಗು ಮೂಡಿಸಿದ್ದಾಳೆ. ಕುಂತಲ್ಲಿ ನಿಂತಲ್ಲಿ ಅವಳದೇ ಧ್ಯಾನ. ಜಾಲ ತಾಣಗಳಲ್ಲಿ ಎಲ್ಲೇ ಸಿಕ್ಕರೂ ಅವಳೊಂದಿಗೇ ಇವರ ಭೇಟಿ. ಸದಾ ಸ್ಟೆತಸ್ಕೋಪಿನೊಂದಿಗೆ ವೈದ್ಯೋಪಚಾರದ ಗವಿಯಲ್ಲಿದ್ದು ಒಮ್ಮೆಲೇ ಕವಿ ಹೇಗಾದರು ಎಂಬುದು ಎಲ್ಲರಿಗೂ ಸದಾಶ್ಚರ್ಯ. ಆದರೆ ಇವಳ ಸಾಂಗತ್ಯವೇ ಹೀಗೆ. ಕಾವ್ಯ ಕನ್ಯೆಯ ಹೆಜ್ಜೆ-ಗೆಜ್ಜೆಯ ನಾದಕ್ಕೆ ಸೋಲದವರಾರು. ಈಗಿವರು ಇವಳಿಗೆ ಸೋತು ಕವಿಯಾಗಿ ಗೆದ್ದಿದ್ದಾರೆ. ಇವರ ಕವಿತೆಗಳನ್ನು ಓದುತ್ತ ಓದುತ್ತ ಕವಿತೆಗಳಲ್ಲಿ ಮಡುಗಟ್ಟಿದ ಅಧ್ಯಯನಾನುಭವ, ಜೀವನಾನುಭವÀ ಇದನ್ನು ಪುಷ್ಟೀಕರಿಸುತ್ತಿದೆ.
ಕವಿ ಡಾ. ವ್ಹಿ. ಕೆ. ಸಂಕನಗೌಡರ ಕವಿತೆ ಕಟ್ಟುವ ರೀತಿ ಅತ್ಯಂತ ಆಪ್ತವಾದುದು. ಸಹಜದ ಹಾದಿಯಲ್ಲಿ ನಡೆಯುತ್ತ, ನಡೆಸುತ್ತ ದಾರಿಯುದ್ದಕ್ಕೂ ಮಾತಿಗಿಳಿದವರಂತೆ ಕವಿತೆಗಳು ಓದಿಸಿಕೊಂಡು ಹೋಗುತ್ತವೆ. ಕವಿತೆಗಳುದ್ದಕ್ಕೂ ಕಾಠಿಣ್ಯವಿಲ್ಲದೇ ಆಪ್ತವಾಗಿ ನಿವೇದಿಸುವ ಪರಿ ಸುಲಭ ಸಾಧ್ಯದ ಸಂವಹನಕ್ಕೆ ಸಹಕಾರಿಯಾಗಿದೆ. ಇಲ್ಲಿನ ಬಹುತೇಕ ಕವಿತೆಗಳು ಕವಿಯ ಸ್ವಗತಗಳಂತಿವೆ. ‘ಕಟ್ಟಿಟ್ಟ ಗಂಟು ಮೂಟೆಗಳ ಸುತ್ತ, ಪ್ರೀತಿ ಪ್ರೇಮದ ಸುತ್ತ, ಸ್ವಪ್ನ-ದುಸ್ವಪ್ನಗಳ ಸುತ್ತ ಹೀಗೆ ಬದುಕಿನ ಅನುಭವಗಳ ಮೂಟೆಗಳನ್ನು ಕಲಾತ್ಮಕವಾಗಿ ರೂಪುಗೊಳಿಸಿ ಕವಿತೆಯಾಗಿಸುತ್ತಾರೆ. ಇವರ ಕವಿತೆಗೆ ಚಿತ್ರಕ ಶಕ್ತಿ ಇದೆ.
ಬಹುತೇಕವಾಗಿ ಕವಿ ಸಂಕನಗೌಡರು ಒಂದೇ ಕವಿತೆಯಲ್ಲಿ ಹಲವು ಸಂಗತಿಗಳ ಸಾಂಗತ್ಯ ಸಾಧಿಸಲು ಯತ್ನಿಸುತ್ತಾರೆ. ಇದಕ್ಕೊಂದು ಕವಿತೆಯನ್ನು ಸಾಕ್ಷೀಕರಿಸುವುದಾದರೆ ‘ನಾನೊಂದು ಆಲದ ಮರ’ ನೋಡಬಹುದು. ಈ ಕವಿತೆಯಲ್ಲಿ ಆಲದಮರ ತನ್ನ ಇರುವನ್ನು ತನ್ನತನವನ್ನು ಹೇಳಿಕೊಳ್ಳುತ್ತ ತನ್ನಡಿಯ ಕೆರೆ, ಕೆರೆಯ ಹೂಳೆತ್ತುವಾಗಿನ ಬ್ರಷ್ಟಾಚಾರ, ದೇವರು, ಮಠ- ಮಂದಿರಗಳು, ಮಕ್ಕಳಾಟ, ಮರ ಕಡಿಯುವ ಮರಕಟುಗರು ಹೀಗೇ ಕವಿ ಮನಸು ಹಲವೆಡೆ ಸುತ್ತಿ ಸುಳಿದು ಅನುಭಾವದ ನೇಯ್ಗೆಯೊಂದಿಗೆ ಸುಂದರ ಕವಿತೆ ಕಟ್ಟುತ್ತಾರೆ. ‘ಹನುಮಂತನೇ ಹಗ್ಗ ತಿನ್ನುವಾಗ, ಪೂಜಾರಿ ಶ್ಯಾವಿಗಿ ಕೇಳಿದನಂತೆ’, ‘ಇರುಳು ಬಂದರೆ ನೆರಳು ಕೂಡ ಜೊತೆಗೆ ಬರುವುದಿಲ್ಲ’ ಎನ್ನುವಂಥ ಜನಪದ ನುಡಿಗಟ್ಟುಗಳನ್ನು ಗಾದೆಗಳನ್ನು ಕವಿತೆಗಳಲ್ಲಿ ಅರ್ಥಪೂರ್ಣವಾಗಿ ಬಳಸಿಕೊಂಡು ಕವಿತೆಯ ಸೌಂರ‍್ಯ ಹೆಚ್ಚಿಸಿದ್ದಾರೆ.
ಇವರ ಕವಿತೆಗಳಲ್ಲಿ ಆತ್ಮ ನಿವೇದನೆಯ ಮನದ ಮಾತುಗಳು ಮೇಳೈಸಿದ್ದು ಅವರ ವ್ಯಕ್ತಿತ್ವದ ದರ್ಶನ ಮಾಡಿಸುತ್ತವೆ. ಪ್ರತಿಯೊಂದೂ ಅವರೇ ಆಗುವ ಪರಿ ಕವಿತೆಗಳುದ್ದಕ್ಕೂ ಇದೆ. ಮರ, ಆನೆ, ದೀಪ, ದೇವರು, ಪುಸ್ತಕ, ಮಳೆ ಹನಿ, ಸಮುದ್ರ, ಗೊಂಬೆ ಹೀಗೆ ಇವೆಲ್ಲವೂ ತಾವೇ ಆಗಿದ್ದಾರೆ. ‘ದೀಪ ನಾನಾಗಿ’ ಕವಿತೆಯಲ್ಲಿ ‘ಎಣ್ಣೆ ಯಾರೋ ಹಾಕಿ, ಬತ್ತಿ ಮತ್ತೊಬ್ಬರು ಹೊಸೆದು, ದೀಪ ಹಚ್ಚಿದ್ಯಾರೋ ಉರಿದದ್ದು ನಾನು. ನಾನು ಉರಿಯುತ್ತೇನೆ ಒಡಲಲ್ಲಿ ಬೆಂಕಿ ಇಟ್ಟುಕೊಂಡು, ಸುಟ್ಟು ಹೋಗುತ್ತ ಸಣ್ಣಗಾಗುತ್ತ ನನ್ನ ವೇದನೆಯು ನಿಮಗೇಕೆ?’ ಎನ್ನುತ್ತಾರೆ. ಮತ್ತೊಂದು ಕವಿತೆಯಲ್ಲಿ ‘ದುಡಿಮೆಯುಂಟು ದುರಹಂಕಾರವಿಲ್ಲ, ಆಸೆಯುಂಟು ದುರಾಸೆಯಿಲ್ಲ, ಎನ್ನುವ ಕವಿ ನಾನೇನು ಸಂತ ಸನ್ಯಾಸಿಯಲ್ಲ ನೀವು ದುಡ್ಡು ಕೊಟ್ಟಷ್ಟು ಕೊಟ್ಟದ್ದೀರಿ. ದುಡ್ಡಿನಿಂದಲೇ ಶಾಂತಿ ನೆಮ್ಮದಿ ಎಂದು ತಿಳಿದವನಲ್ಲ ನಾನು, ಸಾಕು ಹೊಟ್ಟೆ ಬಟ್ಟೆಗೆ ಎಂದು ಸಮಾಧಾನಪಟ್ಟಿದ್ದೇನೆ. ನಾನೇನೂ ತಪ್ಪೇ ಮಾಡಿಲ್ಲ ಎನ್ನಲಾಗುವುದಿಲ್ಲ; ಆಗಿರಬಹುದು ಒಂದೆರಡು ಚುಚ್ಚುತ್ತಿವೆ ಎದೆಯೊಳಗೆ’ ಎಂದು ಪಶ್ಚಾತ್ತಾಪದ ಪರಾಮರ್ಶನದ ಮಾತುಗಳನ್ನಾಡುತ್ತಾರೆ.
ಕವಿಯ ಅಪ್ಪ-ಅವ್ವನ ಬಗೆಗಿನ ಶ್ರದ್ಧಾ-ಭಕ್ತಿಗೆ ಸಾಕ್ಷಿಯಾಗಿ ಈ ಸಂಕಲನದಲ್ಲಿ ‘ಅವ್ವನನ್ನು ಹುಡುಕುತ್ತ’, ‘ಅಪ್ಪನ ಕೊಡೆ’ ಕವಿತೆಗಳು ಗಮನ ಸೆಳೆಯುತ್ತವೆ. ಅವ್ವನನ್ನು ನೆನಪಿಸಿಕೊಳ್ಳುವ ಕವಿ ‘ಹುಗಿದು ಬಂದ ತಾಯಿಯನ್ನು ಹುಡುಕುತ್ತಿದ್ದೇನೆ ಸ್ಮಶಾನದ ಸಮಾದಿಗಳಡಿಯಲ್ಲಿ ಅಗೆದಗೆದು’ ಎಂದು ತಾಯಿಯನ್ನು ಹುಡುಕುತ್ತ ಸಾಗುತ್ತಾರೆ ಭಾವಲೋಕದಲ್ಲಿ ಮಿಂದು. ಅಪ್ಪನ ಅವತಾರಗಳನ್ನು ಮತ್ತವರಿಬ್ಬರ ಬಾಂಧವ್ಯವನ್ನು ಅವ್ವನೇ ಹೇಳಿದಂತೆ ಭಾವಿಸಿ ಸ್ಮರಿಸಿಕೊಳ್ಳುತ್ತಾರೆ. ‘ಅವ್ವನನ್ನು ಮದುವೆಯಾಗಿದ್ದನೋ ಅಥವಾ ಕೊಡೆಯನ್ನು ಮದುವೆಯಾಗಿದ್ದನೋ ಎಂದು ಸಂದೇಹಪಡುವಷ್ಟು ಕೊಡೆಯನ್ನು ಪ್ರಿತಿಸುತ್ತಿದ್ದ ತನ್ನ ಪಾಲಿನ ಹೀರೋ ಅಪ್ಪನ ನೆನಪಾಗಿ ಕೊಡೆಯನ್ನು ಮುಂದಿಟ್ಟುಕೊAಡು ಅದಕ್ಕೇ ನಮಸ್ಕರಿಸಿ ಸನ್ಮಾರ್ಗದಲ್ಲಿ ನಡೆಸುವಂತೆ ಬೇಡಿಕೊಳ್ಳುತ್ತಾರೆ.
ಸಂಕನಗೌಡರ ಕವಿತೆಗಳುದ್ದಕ್ಕೂ ಜೀವನೋತ್ಸಾಹ ಜಿನುಗಿದೆ. ‘ಜೀವನ ಪ್ರೀತಿಸುವ ನನಗೆ ಉತ್ಸಾಹ ಬತ್ತಬೇಕೇಕೆ?’ ಎಂದು ಪ್ರಶ್ನಿಸಿಕೊಳ್ಳುತ್ತ ‘ಎಲ್ಲವನ್ನು ಬದಿಗಿಟ್ಟು ಸ್ವಲ್ಪ ಸಾವರಿಸಿಕೊಂಡು ಖುಷಿಪಡಬೇಕು’ ಎನ್ನುತ್ತಾರೆ. ಸದಾ ಗಂಟು ಮೋರೆ ಹಾಕಿಕೊಂಡಿರುವವರಿಗೆ ‘ನಕ್ಕು ಬಿಡಿ ನಿಮ್ಮ ಗಂಟೇನೂ ಹೋಗುವುದಿಲ್ಲ’ ಎನ್ನುತ್ತ ಜೀವನ ಪಥದ ಕುರಿತು ಮಾತನಾಡುತ್ತಾರೆ. ‘ಜೀವನವೇ ಒಂದು ವಿಸ್ಮಯ, ದಾರಿಯುಂಟು, ಕೆಲವು ಕಡೆ ನೇರಾ ನೇರ ಹೆದ್ದಾರಿ. ಒಮ್ಮೊಮ್ಮೆ ದಾರಿಯೇ ಸಿಗುವುದಿಲ್ಲ. ಸಿಕ್ಕರೂ ತಗ್ಗು ದಿಣ್ಣೆ, ಕಚ್ಚಾ ರಸ್ತೆಗಳು.’ ಹೇಗಿದ್ದರೂ ಸಾಗಲೇ ಬೇಕಲ್ಲ ಎಂದು ಆತ್ಮಸ್ಥೆöರ‍್ಯ ಕಳೆದುಕೊಳ್ಳದೇ ಆಶಾವಾದಿಯಾಗಿ ಮುನ್ನಡೆಯಬೇಕೆಂಬ ಸಂದೇಶವನ್ನು ಈ ಮೂಲಕ ನೀಡುತ್ತಾರೆ.

ಡಾ. ಸಂಕನಗೌಡರು


ಈ ಕವಿತೆಯ ಉಸಾಬರಿಯೇ ಹೀಗೆ ಬರೆಯಬೇಕೆಂದು ಪೆನ್ನು ಹಾಳೆ ಹಿಡಿದು ಕುಳಿತರೆ ಬಾರದು. ಆದರೆ ಹೊತ್ತುಗೊತ್ತಿಲ್ಲದೇ ದುತ್ತನೇ ಬಂದು ಭಾವನೆಗಳ ಮಹಾಪೂರವನ್ನೇ ಸೃಷ್ಟಿಸುತ್ತದೆ. ಇಂಥ ಭಾವ ಈ ಕವಿಯಲ್ಲೂ ಒಡಮೂಡಿದೆ. ಇವರಿಗೆ ಗಾಳ ಹಾಕಿ ಕವಿತೆಯ ಮೀನು ಹಿಡಿವ ಕಲೆ ಕರಗತವಾದಂತಿದೆ. ಅದೆಷ್ಟೆಂದರೆ ಆರೋಗ್ಯವಂತರ ಉಸಿರಿನಷ್ಟು ನಿರಾಳ. ಕವಿ ಗಾಳ ಹಾಕಿ ಕುಳಿತು ಕೇವಲ ಹಸಿ ಮೀನನ್ನು ಮಾತ್ರ ಹಿಡಿದು ಕೊಡುವುದಿಲ್ಲ, ಅವರೆ ಹೇಳುವಂತೆ ಸಿಕ್ಕ ಮೀನಿಗೆ ಉಪ್ಪು ಖಾರ ಒಗ್ಗರಣಿ ಹಾಕಿ ಒಲೆಯ ಮೇಲಿಟ್ಟು ಬೇಯಿಸಿ ರುಚಿಕಟ್ಟಾಗಿಸಿ ಕೊಡುತ್ತಾರೆ. ಅಂದರೆ ಇವರ ಕವಿತೆಗಳು ಪಕ್ಕಾ ದೇಸಿ ‘ಮೇಡ್ ಇನ್ ಡಾ. ಸಂಕನಗೌಡರ’ ಅಂತ ಅರ್ಥ. ಇಷ್ಟು ಹದ ಮಾಡಿ ಕವಿತೆ ಕಟ್ಟಿಕೊಟ್ಟರೂ ‘ತಿಂದವರೆ ಹೇಳಬೇಕು ಬಾಯಿ ಚಪ್ಪರಿಸಿ ಒಂದೆರಡು ಮುಳ್ಳು ಗಂಟಲಲಿ ಸಿಕ್ಕಿಕೊಂಡಾವು ಜೋಕೆ’ ಎನ್ನುತ್ತಾರೆ. ಖಂಡಿತ ಆತಂಕ ಪಡಬೇಕಿಲ್ಲ. ಅಲ್ಲಲ್ಲಿ ಕಾಣ ಸಿಗುವ ಮುಳ್ಳುಗಳನ್ನು ನಿರಾಳವಾಗಿ ಬೇರ್ಪಡಿಸಿ ತಿನ್ನುವ ಜಾಣ್ಮೆ ಸಹೃದಯಿ ಓದುಗರಿಗಿದ್ದು ಬಾಯಿ ಚಪ್ಪರಿಸಿ ಸವಿಯುತ್ತಾರೆ ಎಂಬುದನ್ನು ನಾನಿವರ ಕವಿತೆಯನ್ನು ಆಸ್ವಾದಿಸಿದ ಅನುಭವದಿಂದ ಹೇಳಬಲ್ಲೆ.
ಕವಿ ತಮ್ಮ ಹಲವು ಕವಿತೆಗಳಲ್ಲಿ ಮತ್ತೆ ಮತ್ತೆ ತಮ್ಮ ಕವಿತೆ ಎಂಥದೆAದು ಹೇಳಲು ಹವಣಿಸುತ್ತಾರೆ. ‘ಮೆಲ್ಲಗೆ ನಗುತ್ತ ಬರುವ ಮದುವೆ ಹೆಣ್ಣಿನಂತೆ, ಮನೆ ಅಳಿಯನ ಬಿಗುಮಾನದಂತೆ, ಹರಕೆ ಹೊತ್ತು ಹಡೆದ ಮಗುವಿನಂತೆ ‘ಮಳೆಯಂತೆ ನನ್ನ ಕವಿತೆ’ ಎಂದು ವಿಭಿನ್ನ ಹೋಲಿಕೆ ನೀಡುತ್ತಾರೆ. ಮತ್ತೆ ‘ನೆಲಕ್ಕೂ ಜಲಕ್ಕೂ ಇರುವ ಪ್ರೀತಿಯಂತೆ ನನ್ನ ಕವಿತೆ’ ಎಂದು ವಿಶ್ಲೇಷಿಸುತ್ತಾರೆ. ಸೋನೆ ಮಳೆಯಂತೆ, ಕಪ್ಪು ಮೋಡ ಮಳೆ ಸುರಿಸಿದಂತೆ, ನಡುನಡುವೆ ಗುಡುಗು, ಯಾವಾಗಲಾದರೊಮ್ಮೆ ಸಿಡಿಲು ಇದ್ದರೇನೆ ಚೆನ್ನ. ಅಂದರೆ ಶಾಂತ ಚಿತ್ತದ ಸೋನೆಯಿಂದ ಗುಡುಗು ಸಿಡಿಲಿನ ಆರ್ಭಟವೂ ತಮ್ಮ ಕವಿತೆಗಳಲ್ಲಿದೆ ಎಂಬ ಭಾವ ವ್ಯಕ್ತಿಸಿದ್ದಾರೆ. ಹೌದು ಇವರ ‘ನಾನೊಂದು ಗುಡ್ಡ’ ಕವಿತೆಯಲ್ಲಿ ನನ್ನಷ್ಟಕ್ಕೆ ನನ್ನನ್ನು ಬಿಡದಿದ್ದರೆ ಕಲ್ಲಾಗಿ ಸಿಡಿಯುತ್ತೇನೆ ಎಂದೂ ಎಚ್ಚರಿಸುತ್ತಾರೆ.
ಬದುಕಿನ ಗೊಂದಲಕ್ಕೆ ತೆರೆಯೆಳೆಯಲು ಪ್ರಯತ್ನಿಸುವ ಕವಿ ‘ಗೊಂದಲ ಬೇಡ ಬಾಳೊಂದು ಗುಲಾಬಿ – ಜೇನು ಇದ್ದ ಹಾಗೆ, ಚುಚ್ಚುವ ಮುಳ್ಳು, ಕಚ್ಚುವ ಹುಳು ಇದ್ದದ್ದೇ’. ಸಿಹಿ ಬೇಕೆಂದರೆ ಒಂದಷ್ಟು ಕಹಿ ಅನುಭವಿಸಲೇಬೇಕು. ಕಹಿಯನ್ನು ಸಿಹಿಯಾಗಿ ಪರಿವರ್ತಿಸಬೇಕು ಎಂದು ಸಾಂತ್ವನದ ನುಡಿಗಳನ್ನಾಡುತ್ತಲೇ; ‘ಜಯ ದಾಖಲಿಸುವ ಹಂಬಲ ಇದ್ದರೇನೇ ಸಾಕು, ದಕ್ಕೀತು ಇಂದಲ್ಲ ನಾಳೆ, ಕತ್ತಲೆ ಕಳೆದು ಬೆಳಕು ಬರಲೇಬೇಕಲ್ಲ’ ಎಂದು ಬರುವ ಅಡ್ಡಿ ಆತಂಕಗಳ ದಾಟಿ ಗುರಿ ಮುಟ್ಟಿ ಗೆಲುವು ಸಾಧಿಸೇನೆಂಬ ಛಲ-ಮನೋಬಲ ಹೊಂದಲು ಆಶಿಸುತ್ತಾರೆ. ಸದಾ ವೈದ್ಯಕೀಯ ಕಾಯಕದಲ್ಲಿ ನಿರತರಾಗಿರುತ್ತಿದ್ದ ಡಾ. ಸಂಕನಗೌಡರು ಕವಿಯಾಗಿ ‘ಅಪ್ಪನ ಕೊಡೆ’ ಕವಿತಾ ಸಂಕಲನದ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಮಿನುಗುತ್ತಾರೆ ಎಂಬ ಸದಾಶಯದೊಂದಿಗೆ ಅಭಿನಂದಿಸುವೆ.

Exit mobile version