ಬೆಂಗಳುರು: ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದ ಮನೆಗಳನ್ನು ಗುರುತಿಟ್ಟುಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಬಲ ಪಂಥೀಯ ಸಂಘಟನೆಗಳು ಕಿಡಿ ಕಾರಿದ್ದವು. ಇದೊಂದು ಪ್ರಚಾರದ ಗಿಮಿಕ್ ಎಂದು ಟೀಕಿಸಿದ್ದವು. ಈಗ ಕುಮಾರಸ್ವಾಮಿ ಅವರು ಈ ಎಲ್ಲಾ ಟೀಕೆಗಳಿಗೆ ಉತ್ತರ ನೀಡಿದ್ದಾರೆ.
ರಾಮನ ಹೆಸರಿನ ಮೇಲೆ ನಡೆಯುತ್ತಿರುವ ರಾಜಕೀಯ, ಹಣದ ಕೊಳ್ಳೆ, ಅಧಿಕಾರಕ್ಕಾಗಿ ನಡೆಯುತ್ತಿರುವ ಸ್ತುತಿಯನ್ನು ಪ್ರಶ್ನೆ ಮಾಡಿದ್ದಕ್ಕೆ ನಕ(ಇ)ಲಿ ಹಿಂದೂಗಳು ಬೀದಿಗೆ ಬಿದ್ದು ಅರಚಾಡುತ್ತಿವೆ. ದೇವರಿಗಾಗಿ ನಾವು ಮಾಡಿದಷ್ಟು ಪ್ರಾರ್ಥನೆ, ಪೂಜೆಗಳ ಮುಂದೆ, ಈ ನಕಲಿಗಳು ಮಾಡಿದ ಅಧಿಕಾರ ರಾಮ ಜಪ ಕಾಲು ಭಾಗಕ್ಕೂ ಸಾಲದು ಎಂದು ತಮ್ಮ ಟ್ವೀಟ್ ಮೂಲಕ ಉತ್ತರಿಸಿದ್ದಾರೆ.
ಇಚ್ಛೆಗಳನ್ನಿಟ್ಟುಕೊಂಡು ದೇವರನ್ನು ಆರಾಧಿಸುವುದೇ ತಪ್ಪು. ಅಂಥದ್ದರಲ್ಲಿ ದೇವರನ್ನು ಅಧಿಕಾರಕ್ಕಾಗಿ, ರಾಜಕೀಯಕ್ಕಾಗಿ, ಹಣಕ್ಕಾಗಿ ಬಳಸಿಕೊಳ್ಳುವುದು ಧಾರ್ಮಿಕ ಭ್ರಷ್ಟಾಚಾರ. ರಾಮನ ಹೆಸರಲ್ಲಿ ಧಾರ್ಮಿಕ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆಲ್ಲ ಮುಂದೆ ತಕ್ಕ ಫಲ ಸಿಗಲಿಕ್ಕಿದೆ. ಈಗ ಅರಚುವವರೆಲ್ಲರೂ ಅದಕ್ಕಾಗಿ ಕಾಯಲಿ. ಅದರ ಫಲವನ್ನೂ ಉಣ್ಣಲಿ, ಎಂದಿದ್ದಾರೆ.
ಶ್ರೀರಾಮನ ಮೇಲೆ ನಂಬಿಕೆ ಇದ್ದರೆ ಕುಮಾರಸ್ವಾಮಿ ದೇಣಿಗೆ ನೀಡಲಿ ಎಂದು. ಹಣ, ದೇಣಿಗೆ ನೀಡಿ ಶ್ರೀರಾಮನನ್ನು ಕುರುಡು ಕುರುಡಾಗಿ ಆರಾಧಿಸುವ ಭಕ್ತ ನಾನಲ್ಲ. ಹಣ ನೀಡಿ ನನ್ನ ಭಕ್ತಿ ಸಾಬೀತು ಮಾಡಬೇಕಿಲ್ಲ. ನಮ್ಮೆಲ್ಲರ ಭಕ್ತಿ, ಭಾವನೆಗಳನ್ನು ಹಣವಾಗಿ, ಅಧಿಕಾರವಾಗಿ ಪರಿವರ್ತಿಸುವ ನಿಮ್ಮ ನಡವಳಿಕೆ ತಿದ್ದಿಕೊಳ್ಳಿ. ನನ್ನ ಹೇಳಿಕೆಯಲ್ಲಿ ಬೇಜವಾಬ್ದಾರಿ ಗುರುತಿಸಿರುವ ಧಾರ್ಮಿಕ ಮುಖಂಡರೊಬ್ಬರು ಮೊದಲು ತಮ್ಮ ಜವಾಬ್ದಾರಿ ಅರಿಯಬೇಕು. ರಾಮನ ಭಕ್ತಿಯು ಹಣ, ಅಧಿಕಾರ, ರಾಜಕಾರಣವಾಗಿ ಪರಿವರ್ತನೆಯಾಗುವುದನ್ನು ಅವರು ತಡೆದಿದ್ದರೆ, ಅದು ಅವರ ಜವಾಬ್ದಾರಿಯ ಸಮರ್ಥ ನಿರ್ವಹಣೆ ಆಗಿರುತ್ತಿತ್ತು. ಅದು ಬಿಟ್ಟು ರಾಜಕೀಯದ ಹೇಳಿಕೆ ನೀಡುವುದು ಧಾರ್ಮಿಕ ನಾಯಕರಿಗೆ ಶೋಭೆಯಲ್ಲ ಎಂದು ಹೆಚ್‌ಡಿಕೆ ಹೇಳಿದ್ದಾರೆ.
ರಾಮಮಂದಿರ ಹಿಂದೂಗಳ ಭಕ್ತಿ, ಭಾವನೆಗಳ ಮೂರ್ತ ರೂಪ ಅದು ಆಗಬೇಕು. ಆದರೆ, ಅದೇ ಹೆಸರಿನಲ್ಲಿ ನಡೆಯುತ್ತಿರುವ ವಿಭಜನೆಗೆ ನನ್ನ ವಿರೋಧವಿದೆ ಎಂದು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
