ರಾಮನ ಗುಡಿ ಗುದ್ದಲಿ ಪೂಜೆಗೆ ಸಿದ್ಧವಾಗ್ತಿದೆ ವೇದಿಕೆ: 40 ಕೆಜಿ ಬೆಳ್ಳಿ ಇಟ್ಟಿಗೆಯೇ ಅಡಿಗಲ್ಲು!

ram mandir ayodhye

ರಾಮನ ಗುಡಿ ಗುದ್ದಲಿ ಪೂಜೆಗೆ ಸಿದ್ಧವಾಗ್ತಿದೆ ವೇದಿಕೆ

ಪ್ರಧಾನಿ ಮೋದಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ಬಿಹಾರ್ ಸಿಎಂ ನಿತೀಶ್ ಕುಮಾರ ಭಾಗಿಯಾಗುವ ನಿರೀಕ್ಷೆ.

 ಅಯೋಧ್ಯಾ: ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆಗೆ ಅಗಸ್ಟ್ 5 ರ ಮುಹೂರ್ತ ಪಕ್ಕಾ ಆಗಿದ್ದು, ವೇದಿಕೆ ಸಿದ್ಧಗೊಳ್ಳುತ್ತಿದೆ.

ಗುದ್ದಲಿ ಬಿದ್ದ ನಂತರ 40 ಕೆಜಿಯ ಬೆಳ್ಳಿ ಇಟ್ಟಿಗೆಯನ್ನು ಅಡಿಗಲ್ಲನ್ನಾಗಿ ನೆಡಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ.

ಅಡಿಗಲ್ಲಿಗೂ ಮೊದಲು 3 ದಿನ ವೇದ ಮಂತ್ರಪಠಣ ನಡೆಯಲಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 50ಕ್ಕೂ ಹೆಚ್ಚು ಅತಿಥಿಗಳು ಪಾಲ್ಗೊಳ್ಳಲಿದ್ದು, ಭಕ್ತರು ಅಡಿಗಲ್ಲು ಸಮಾರಂಭ ವೀಕ್ಷಿಸಲು ಅನುವಾಗುವಂತೆ ಅಯೋಧ್ಯೆಯ ವಿವಿಧ ಕಡೆ ಬೃಹತ್ ಟಿವಿ ಪರದೆಗಳನ್ನು ಅಳವಡಿಸಲಾಗಿದೆ ಎಂದು ಟ್ರಸ್ಟ್ ಹೇಳಿದೆ.

ರಾಮ ಜನ್ಮಭೂಮಿ ಆಂದೋಲನದಲ್ಲಿ ಭಾಗಿಯಾಗಿದ್ದ ಬಿಜೆಪಿಯ ಬಹುಪಾಲು ನಾಯಕರನ್ನು ಆಮಂತ್ರಿಸಲಾಗಿದ್ದು, ಲಾಲ್ ಕೃಷ್ಣ ಅದ್ವಾನಿ, ಮುರಳಿ ಮನೋಹರ ಜೋಶಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಉಮಾಭಾರತಿ, ಬಜರಂಗ ದಳ ಸಂಸ್ಥಾಪಕ ವಿನಯ್ ಕಟಿಯಾರ್ ಮುಂತಾದವರು ಭಾಗವಹಿಸಲಿದ್ದಾರೆ.

2019ರ ನವೆಂಬರಿನಲ್ಲಿ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ಕಟ್ಟಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದ್ದು, ನಿರ್ಮಾಣದ ಉಸ್ತುವಾರಿಯನ್ನು  ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿಗೆ ನೀಡಿದೆ.

ಈ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮಂದಿರ ಕಟ್ಟಿದರೆ ಕೋರೊನಾ ಹೋಗಲಿದೆ ಎಂದು ಕೆಲವರು ಭಾವಿಸಿದ್ದಾರೆ ಎಂದು ಎನ್ಸಿಪಿ ನಾಯಕ ಶರದ್ ಪವಾರ್ ಸಹಿತ ಕೆಲವರು ಟೀಕೆ ಮಾಡಿದ್ದರು.

Exit mobile version