ಶ್ರೀರಾಮ್ ಘೋಷಣೆಗೆ ಜೈ ಸಿಯಾ ರಾಮ್ ಎಂಬ ಪ್ರತ್ಯುತ್ತರ

ಪಶ್ಚಿಮ ಬಂಗಾಳ: ದೇಶದೆಲ್ಲೆಡೆ ಟೂಲ್‌ಕಿಟ್, ರೈತರ ಪ್ರತಿಭಟನೆ, ಪೆಟ್ರೋಲ್ ದರ ಏರಿಕೆ ಸುದ್ದಿಯಾಗುತ್ತಿದ್ದರೆ, ಪಶ್ಚಿಮ ಬಂಗಾಳದಲ್ಲಿ ಮಾತ್ರ ಘೋಷಣೆಗಳ ರಾಜಕೀಯ ನಡೆಯುತ್ತಿದೆ. ಚುನಾವಣೆ ಎದುರು ನೋಡುತ್ತಿರುವ ಪಶ್ಚಿಮ ಬಂಗಾಳದಲ್ಲಿ ಈಗಲೇ ಬಿಜೆಪಿ ಮತ್ತು ಆಡಳಿತರೂಢ ಟಿಎಂಸಿ ಪಕ್ಷಗಳು ತಮ್ಮ ಕಾರ್ಯಕರ್ತರನ್ನು ಸೆಳೆಯಲು ಘೋಷಣೆಗಳ ಮೊರೆ ಹೋಗಿದ್ದಾರೆ.

ಜೈಕಾಳಿಮಾ ಗೆ ಬದಲಾದ ಬಿಜೆಪಿ ಘೋಷಣೆ

ಬಿಜೆಪಿಯು ಬೇರೆ ರಾಜ್ಯಗಳಲ್ಲಿ ಹೇಳಿದಂತೆ ಡಬಲ್ ಇಂಜಿನ್ ಸರ್ಕಾರ ಘೋಷಣೆಯನ್ನು ಪಶ್ಚಿಮ ಬಂಗಾಳದಲ್ಲಿಯೂ ಪ್ರಯೋಗಿಸಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರವಿದ್ದರೆ ಅಭಿವೃದ್ದಿ ವೇಗವಾಗಿ ಸಾಗುತ್ತದೆ ಎಂಬ ಪ್ರಯೋಗವನ್ನು ಬಿಜೆಪಿ ಪಶ್ಚಿಮ ಬಂಗಾಳದಲ್ಲಿಯೂ ನಡೆಸಲು ಪ್ರಯತ್ನಿಸುತ್ತಿದೆ.

ಇದಕ್ಕೂ ಮೊದಲು ಜೈಶ್ರೀರಾಮ್ ಎಂಬ ಘೋಷಣೆ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಕಾರಣವಾಗಿತ್ತು. ಚುನಾವಣೆಯ ನಂತರ ಮಮತಾ ಬ್ಯಾನರ್ಜಿಯ ಬಾಯಿಂದ ಜೈಶ್ರೀರಾಮ್ ಎಂದು ಹೇಳಿಸಿಯೇ ತೀರುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸವಾಲು ಹಾಕಿದ್ದರು. ಈಗ ಟಿಎಂಸಿ ನಾಯಕರು ಬಿಜೆಪಿಯ ಘೋಷಣೆಗಳಿಗೆ ಉತ್ತರ ನೀಡಲು ಮುಂದಾಗಿದ್ದಾರೆ.

ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಮಾತನಾಡಿ, ಮಮತಾ ಬ್ಯಾನರ್ಜಿ ಎಂಬ 5 ಅಡಿ 2 ಇಂಚು ಎತ್ತರದ ಸಿಂಗಲ್ ಇಂಜಿನ್ ಅನ್ನು ಸೋಲಿಸಲು, ದೆಹಲಿ, ಗುಜರಾತ್ ಮಧ್ಯಪ್ರದೇಶದಿಂದ 500 ಇಂಜಿನ್‌ಗಳನ್ನು ತರಿಸಬೇಕಾದ ಅಗತ್ಯತೆ ಬಿಜೆಪಿಗೆ ಇದೆ. ಇನ್ನು ಯಾವ ಡಬಲ್ ಇಂಜಿನ್ ಬಗ್ಗೆ ಮಾತನಾಡುತ್ತಿದ್ದೀರಾ? ಎಂದು ವ್ಯಂಗ್ಯವಾಡಿದ್ದಾರೆ.

ಪ.ಬಂಗಾಳ ; ಶ್ರೀರಾಮನಿಗೂ ತೋರಿದ ಅಗೌರವ

ಇನ್ನು ಜೈ ಶ್ರೀರಾಮ್ ಘೋಷಣೆಗೆ ಉತ್ತರ ನೀಡಿರುವ ಅಭಿಷೇಕ್ ಅವರು, ಗುಜರಾತ್‌ನಿಂದ ಬಂದವರು, ಬಂಗಾಳದ ಮಗಳನ್ನು ಅವಮಾನಿಸುವರೇ. ಮಮತಾ ಬ್ಯಾನರ್ಜಿ ಬಾಯಿಂದ ಜೈ ಶ್ರೀರಾಮ್ ಹೇಳಿಸುವ ಸವಾಲು ಹಾಕಿರುವ ಅಮಿತ್ ಶಾ ಅವರೇ, ನಿಮ್ಮ ಬಾಯಿಂದ ನಾವು ಜೈ ಸಿಯಾ ರಾಮ್ ಘೋಷಣೆಯನ್ನು ಹೇಳಿಸುತ್ತೇವೆ. ಜೈ ಸಿಯಾ ರಾಮ್ ಎಂದರೆ, ಸೀತಾ ಮಾತೆಗೂ, ಶ್ರೀರಾಮನಿಗೂ ಜಯಘೋಷ ಹಾಕಿದಂತೆ, ಎಂದಿದ್ದಾರೆ.

ಬಿಜೆಪಿಯ ಜೈ ಶ್ರೀರಾಮ್ ಘೋಷಣೆಗೆ  ಜೈ ಸಿಯಾ ರಾಮ್ ಎಂದು ಉತ್ತರಿಸಿದ ಟಿಎಂಸಿ. ಪಶ್ಚಿಮ ಬಂಗಾಳ ಚುನಾವಣೆಗೆ ಐದು ರಥ ಯಾತ್ರೆಗಳನ್ನು ನಡೆಸಲಿರುವ ಬಿಜೆಪಿ ಜೈ ಸಿಯಾ ರಾಮ್ ಎಂಬ ಘೋಷಣೆಯೇ ಮೂಲ ಘೋಷಣೆಯಾಗಿತ್ತು. ಇದನ್ನು ಪುರುಷ ಪ್ರಧಾನವಾಗಿಸಲು ಜೈ ಶ್ರೀರಾಮ್ ಎಂದು ಬದಲಾಯಿಸಲಾಯಿತು. ಮಹಿಳೆಯರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುದನ್ನು ನಾವು ಕಲಿಸಿಕೊಡುತ್ತೇವೆ. ಇಲ್ಲಿ ಮಹಿಳೆಯರನ್ನು ದುರ್ಗೆಯಂತೆ ಕಾಣುತ್ತಾರೆ. ಇದು ಪಶ್ಚಿಮ ಬಂಗಾಳದ ಸಂಸ್ಕೃತಿ. ನಿಮಗೆ ಇದನ್ನು ಕಲಿಸದೇ ತೀರುವುದಿಲ್ಲ ಎಂದು ಅಭಿಷೇಕ್ ಹೇಳಿದ್ದಾರೆ.

Exit mobile version