ಬ್ರೆಜಿಲ್‍,ಆಫ್ರಿಕಾ ವೈರಸ್ ವಿಚಾರದಲ್ಲಿ ಕೇಂದ್ರದ ನಿರ್ಲಕ್ಷ್ಯ; ರಾಹುಲ್‍ ಕಿಡಿ

ನವದೆಹಲಿ : ದೇಶದಲ್ಲಿ ಮತ್ತೆ ಏರಿಕೆಯತ್ತ ಸಾಗಿರುವ ಕೊರೊನಾ ಸೋಂಕಿನ ವಿಚಾರದಲ್ಲಿ ಕೇಂದ್ರ ಸರ್ಕಾರ ನಿಷ್ಕಾಳಜಿ ತೋರಿಸುತ್ತಿದೆ ಎಂದು ಕಾಂಗ್ರೆಸ್‍ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲ್ ನಿಂದ ಬರುವ ಪ್ರಯಾಣಿಕರ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಅಸಲಿಗೆ ಕೋವಿಡ್ ಸೋಂಕು ಇನ್ನು ದೇಶದಿಂದಾಗಲಿ ಅಥವಾ ವಿಶ್ವದಿಂದ ಹೊರಹೋಗಿಲ್ಲ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂದು ರಾಹುಲ್‍ ಗಾಂಧಿ ಆಡಳಿತಾರೂಢ ನಾಯಕರನ್ನು ತಿವಿದಿದ್ದಾರೆ.

ದೇಶದಲ್ಲಿ ಕೋವಿಡ್‍ ಸೋಂಕಿನ ಪ್ರಮಾಣ ಮತ್ತೆ ಹೆಚ್ಚಳವಾಗುತ್ತಿರುವ ಕುರಿತ ಮಾಧ್ಯಮ ವರದಿಗಳ ಸ್ಕ್ರೀನ್ ಶಾಟ್‍ ಉಲ್ಲೇಖಿಸಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‍ ನಾಯಕ, ಮೋದಿ ಸರ್ಕಾರ ಕೊರೊನಾವನ್ನು ಗೆದ್ದಂತೆ ಬೀಗುತ್ತಿದೆ ಎಂದು ಚಾಟಿ ಬೀಸಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲ್ ವೈರಸ್ ಸಾರ್ವತ್ರಿಕವಾಗಿ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಎರಡು ದೇಶಗಳಿಂದ ಬಂದಿರುವ ಜನರ ಮೇಲೆ ಸೂಕ್ತ ನಿಗಾ ಇಡಬೇಕಿದೆ ಎಂದು ರಾಹುಲ್ ಆಗ್ರಹಿಸಿದ್ದಾರೆ.

ಐಸಿಎಂಆರ್ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಇಲ್ಲಿಯವರೆಗೆ ಬ್ರೇಜಿಲ್ ಕೋವಿಡ್ ವೈರಸ್‍ ಸೋಂಕು ಓರ್ವ ವ್ಯಕ್ತಿಯಲ್ಲಿ ಹಾಗೂ ದಕ್ಷಿಣ ಆಫ್ರಿಕಾ ಕೋವಿಡ್‍ ವೈರಸ್‍ ಸೋಂಕು ನಾಲ್ವರಲ್ಲಿ ಪತ್ತೆಯಾಗಿದೆ. ಹೀಗಾಗಿ ದೇಶಾದ್ಯಂತ ಮತ್ತೆ ಕಳವಳಕಾರಿ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕೊರೊನಾ 3ನೇ ಅಲೆಯ ಭೀತಿ ನಿರ್ಮಾಣವಾಗಿದೆ. ಕಳೆದೆರೆಡು ದಿನಗಳಿಂದ ಮಹಾರಾಷ್ಟ್ರದಲ್ಲಿ 4 ಸಾವಿರಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಕೇಸ್ ಗಳು ವರದಿಯಾಗಿವೆ.  

Exit mobile version