ಡಿಕೆಶಿ ಮಗಳ ಮದುವೆ; ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯ-ಅಮರ್ಥ್ಯ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಮಗ ಅಮರ್ಥ್ಯ ಹೆಗ್ಡೆ ಪ್ರೇಮಿಗಳ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅದ್ದೂರಿಯಾಗಿ ನಡೆದ ಮದುವೆಯಲ್ಲಿ ಶಾಸ್ತ್ರೋಕ್ತವಾಗಿ ಇಬ್ಬರೂ ಸಪ್ತಪದಿ ತುಳಿದಿದ್ದಾರೆ. ಎಸ್.ಎಂ.ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಹೆಗ್ಡೆ ಹಾಗೂ ಡಿ.ಕೆ.ಶಿವಕುಮಾರ್ ಪುತ್ರಿಯ ಮದುವೆಯಲ್ಲಿ ಇಂದು ಕಾಂಗ್ರೆಸ್, ಬಿಜೆಪಿ ರಾಜಕೀಯ ನಾಯಕರೂ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇಂದಿನ ಮದುವೆಗೆ ಒಟ್ಟು ೮೦೦ ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಇಂದು ಅದ್ದೂರಿಯ ಮದುವೆ ನಡೆದಿದೆ. ಆಪ್ತ ಸಂಬAಧಿಕರಿಗಷ್ಟೇ ಆಮಂತ್ರಣ ನೀಡಲಾಗಿದೆ. ರಿಸೆಪ್ಷನ್‌ನಲ್ಲಿ ಪ್ರಭಾವಿ ರಾಜಕೀಯ ನಾಯಕರು, ಉದ್ಯಮಿಗಳು ಕೂಡ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಮಗಳಿಗೆ ಅಮರ್ಥ್ಯ ತಾಳಿ ಕಟ್ಟುತ್ತಿದ್ದಂತೆ ಡಿ.ಕೆ.ಶಿವಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಸಂಗೀತ ಕಾರ್ಯಕ್ರಮದಲ್ಲಿ ಕೂಡ ಅಪ್ಪಾ ಐ ಲವ್ ಯೂ ಎಂದು ನೃತ್ಯ ಮಾಡಿದ ಐಶ್ವರ್ಯಳನ್ನು ಕಂಡು ಡಿಕೆ ಶಿವಕುಮಾರ್ ಕಣ್ಣೀರು ಹಾಕಿದ್ದರು. ಇಂದು ಮದುವೆಯಲ್ಲಿ ಕೂಡ ಕಣ್ಣೀರು ಸುರಿಸುತ್ತಲೇ ಅವರು ವಧು-ವರರಿಗೆ ಅಕ್ಷತೆ ಹಾಕಿ ಹಾರೈಸಿದ್ದಾರೆ.
ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಆತ್ಮಹತ್ಯೆ ಬಳಿಕ ಅಮರ್ಥ್ಯ ಮತ್ತು ಐಶ್ವರ್ಯಾಳ ಮದುವೆ ವಿಷಯ ಮುನ್ನೆಲೆಗೆ ಬಂದಿತ್ತು. ಕಳೆದ ವರ್ಷ ಜೂನ್ ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಕುಟುಂಬಸ್ಥರು ಎಸ್.ಎಂ ಕೃಷ್ಣ ಅವರ ಮನೆಗೆ ತೆರಳಿ ಮದುವೆ ಮಾತುಕತೆ ನಡೆಸಿದ್ದರು. ಬಳಿಕ ಲಾಕ್‌ಡೌನ್ ಸಮಯದಲ್ಲಿ ಅವರಿಬ್ಬರ ನಿಶ್ಚಿತಾರ್ಥವೂ ನೆರವೇರಿತ್ತು.

Exit mobile version