ಕಲಾಲೋಕದ ಮಾಯಾಜಾಲ

ನೂರಾರು ಕೆಲಸಗಳನ್ನು ಮಾಡಿಕೊಡುವ ಸಾವಿರಾರು ಯಂತ್ರಾಂಶ-ತಂತ್ರಾಂಶಗಳು ಐಟಿ ಜಗತ್ತಿನಲ್ಲಿ ನಮಗೆ ಸಿಗುತ್ತವೆ. ಇವುಗಳ ಪೈಕಿ ಅದ್ಭುತವೆನಿಸುವ ಮಟ್ಟದ ಜನಪ್ರಿಯತೆ ಗಳಿಸಿಕೊಳ್ಳುವುದು ಎಲ್ಲೋ ಕೆಲವು ಮಾತ್ರ. ಅದರಲ್ಲೂ ಕೆಲವು ಎಷ್ಟರಮಟ್ಟಿಗೆ ಜನರ ಮನ ಗೆಲ್ಲುತ್ತವೆಂದರೆ ಅವು ಮಾಡುವ ಕೆಲಸವನ್ನು ಅವುಗಳದೇ ಹೆಸರಿನಿಂದ ಗುರುತಿಸುವ ಪರಿಪಾಠ ಪ್ರಾರಂಭವಾಗಿಬಿಡುತ್ತದೆ.

ಫೋಟೋ ಕಾಫಿ ಮಾಡಿಕೊಡುವ ಯಂತ್ರಗಳನ್ನು ನಿರ್ಮಿಸುವ ಜೆರಾಕ್ಸ್ ಸಂಸ್ಥೆ ಎಷ್ಟರಮಟ್ಟಿಗೆ ಜನಪ್ರಿಯವೆಂದರೆ ನಾವು ಫೋಟೋ ಕಾಫಿ ಮಾಡುವ ಪ್ರಕ್ರಿಯೆಯನ್ನು ಜೆರಾಕ್ಸ್ ಮಾಡುವುದು ಎಂದೇ ಗುರುತಿಸುತ್ತೇವೆ.

ಗೂಗಲ್ ಸಂಸ್ಥೆಯ ಸರ್ಚ್ ಇಂಜನ್ ಬಳಸಿ ಮಾಹಿತಿ ಹುಡುಕಿಕೊಳ್ಳುವ ಕೆಲಸ ಗೂಗಲ್ ಮಾಡುವುದು ಎಂದೇ ನಮಗೆಲ್ಲ ಪರಿಚಿತವಾಗಿದೆ. ಇದೇ ಮಟ್ಟದ ಜನಪ್ರಿಯತೆ ಗಳಿಸಿಕೊಂಡಿರುವ ತಂತ್ರಾಂಶಗಳಲ್ಲಿ ಇನ್ನೊಂದು ಪ್ರಮುಖ ಹೆಸರು ಅಡೋಬ್ ಫೋಟೋಶಾಪ್. ಚಿತ್ರಗಳನ್ನು ನಮಗೆ ಬೇಕಾದಂತೆ ಬದಲಿಸಲು ಅನುವುಮಾಡಿಕೊಡುವ ಈ ತಂತ್ರಾಂಶ ಮಾರುಕಟ್ಟೆಗೆ ಬಂದು ಇದೀಗ ಮೂವತ್ತು ವರ್ಷ. ಮೂರು ದಶಕಗಳ ಅವಧಿಯಲ್ಲಿ ಈ ತಂತ್ರಾಂಶ ಗಳಿಸಿಕೊಂಡಿರುವ ಜನಪ್ರಿಯತೆ ಎಷ್ಟರ ಮಟ್ಟಿಗೆ ಎಂದರೆ ಕಂಪ್ಯೂಟರ್ ಸಹಾಯದಿಂದ ಚಿತ್ರಗಳನ್ನು ಬದಲಿಸುವ ಕೆಲಸವನ್ನು ಫೋಟೋಶಾಪ್ ಮಾಡುವುದು ಅಥವಾ ಫೋಟೋಶಾಪಿಂಗ್ ಎಂದೇ ಗುರುತಿಸಲಾಗುತ್ತದೆ.

ಅತ್ಯಂತ ಉತ್ಕೃಷ್ಟ ಗುಣಮಟ್ಟದ ಚಿತ್ರಗಳನ್ನು ಸೃಷ್ಟಿಸುವುದು ಹಾಗೂ ಈಗಾಗಲೇ ಇರುವ ಚಿತ್ರಗಳನ್ನು ಸುಳಿವೇ ಸಿಗದಂತೆ ಬದಲಿಸಿ ಬಿಡುವುದನ್ನು ಫೋಟೋಶಾಪ್ ಸಾಧ್ಯವಾಗಿಸಿದೆ. ಫೋಟೋಶಾಪ್ ತಂತ್ರಾಂಶವನ್ನು ಥಾಮಸ್ ಮತ್ತು ಜಾನ್ ನಾಲ್ ಎಂಬ ಸಹೋದರರು 1988 ರಲ್ಲಿ ರೂಪಿಸಿದರು. ಮೊದಲಿಗೆ ತಂತ್ರಾಂಶ ಮ್ಯಾಕ್ ಕಂಪ್ಯೂಟರಗಳಲ್ಲಿ ಅಷ್ಟೇ ಕೆಲಸ ಮಾಡುತ್ತಿತ್ತು. ಕೆಲ ಸಮಯದ ನಂತರ ಅಡೋಬಿ ಸಂಸ್ಥೆ ಈ ತಂತ್ರಾಂಶವನ್ನು ಕೊಂಡಾಗ ಫೋಟೋಶಾಪ್ ಹೆಸರಿನ ಹಿಂದಕ್ಕೆ ಅಡೋಬಿ ಸಂಸ್ಥೆಯ ಹೆಸರು ಸೇರಿಕೊಂಡು ಸಾಫ್ಟ್ ವೇರ್ ಪ್ರಪಂಚದ ಅತ್ಯಂತ ಜನಪ್ರಿಯ ನಾಮದೇಯವೆಂದು ಸೃಷ್ಟಿಯಾಯಿತು. ಅಲ್ಲಿಂದ ಮುಂದೆ ನಡೆದದ್ದೆಲ್ಲ ಇತಿಹಾಸವೇ.

ಈಗ ಫೋಟೋಶಾಪ್ ಮಾರುಕಟ್ಟೆಗೆ ಬಂದು ಮೂವತ್ತು ವರ್ಷಗಳಾದ ಹೊತ್ತಿನಲ್ಲಿ ವಿಡಿಯೋಗಳನ್ನು ನಮಗೆ ಬೇಕಾದಂತೆ ತಿರುಚಲು ಸಾಧ್ಯವಾಗಿಸುವ ತಂತ್ರಜ್ಞಾನ ಬೆಳೆಯುತ್ತಿದೆ. ಮುಂದಿನ 30 ವರ್ಷಗಳಲ್ಲಿ ಪರಿಸ್ಥಿತಿ ಇನ್ನೂ ಹೇಗೆಲ್ಲಾ ಬದಲಾಗಿಬಿಡುತ್ತದೋ ಆ ಸಮಯವೇ ಹೇಳಬೇಕು.

–        ಶೃತಿ ಬಿಜ್ಜರಿಗಿ

Exit mobile version