ಪಾಸಿಟಿವ್ ಗರ್ಭಿಣಿಗೆ ಸಿಸೇರಿನ್: ಗದಗ ಜಿಮ್ಸ್ ನ ಅಪರೂಪದ ಸಾಧನೆ

covid-19

corona

ಗದಗ: ಇದು ಗದಗಿನ ಜಿಮ್ಸ್ ವೈದ್ಯರು ನಡೆಸಿದ ‘ಆಪರೇಷನ್ ಪಾಸಿಟಿವ್’ ಕಾರ್ಯಾಚರಣೆ. ಶುಕ್ರವಾರವಷ್ಟೇ ಪಾಸಿಟಿವ್ ದೃಢಪಟ್ಟಿದ್ದ 9 ತಿಂಗಳ ಗರ್ಭಿಣಿಗೆ ಶನಿವಾರದ ಮುಂಜಾನೆ ಹೊತ್ತಿಗೆಲ್ಲ ಹೆರಿಗೆ ನೋವು ಕಾಣಿಸಿಕೊಂಡಿತ್ತು.

ಜಿಮ್ಸ್ ವೈದ್ಯರಿಗೆ ಇದು ಸವಾಲಿನ ಕೆಲಸವಾಗಿತ್ತು. ತಾಯಿ ದೇಹದೊಳಗೊಂದು ನವಜಾತ ಕೂಸು, ಅದೇ ದೇಹದೊಳಗೆ ಕೊರೋನಾ ಸೋಂಕು ಕೂಡ ಇತ್ತು.

ಸಹಜ ಹೆರಿಗೆಗೆ ಕಾಯುತ್ತ ಕೂಡುವಂತಿರಲಿಲ್ಲ. ಸಿಸೇರಿಯನ್ ಮೊರೆ ಹೋಗದೇ ಬೇರೆ ವಿಧಿ ಇರಲಿಲ್ಲ. ಈ ಅಪರೂಪದ ರಿಸ್ಕಿ ಕೆಲಸಕ್ಕೆ ಕೈ ಹಾಕಿದ ವೈದ್ಯರು ಮಾನಸಿಕವಾಗಿ ಪಾಸಿಟಿವ್ ಅಟಿಟ್ಯೂಡ್ ಹೊಂದಿದ ಕಾರಣಕ್ಕೇ ಪಾಸಿಟಿವ್ ಗರ್ಭಿಣಿಗೆ ಸುರಕ್ಷಿತ ಸಿಸೇರಿಯನ್ ಹೆರಿಗೆ ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ. ಹೆಣ್ಣು ಕೂಸು ಮತ್ತು ತಾಯಿ ಸುರಕ್ಷಿತವಾಗಿದ್ದಾರೆ.

2.7 ಕೆಜಿ ತೂಕವಿರುವ ಮಗುವಿಗೆ ಉಸಿರಾಟದ ತೊಂದರೆಯಾದ ಕಾರಣ ಕೊವಿಡ್ ವಾರ್ಡಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಮ್ಸ್ ವೈದ್ಯರಾದ ಡಾ. ಶಿವನಗೌಡ ಜೋಳದರಾಶಿ, ಡಾ.ಶೃತಿ ಭಾವಿ ಮತ್ತು ಡಾ. ಅಜಯ್ ಬಸರಿಗಿಡದ ಈ ಆಪರೇಷನ್ ಯಶಸ್ವಿಗೊಳಿಸಿದ್ದಾರೆ. ಇದು ರಾಜ್ಯದಲ್ಲೇ ವಿಶಿಷ್ಟ ಪ್ರಕರಣವಾಗಿದ್ದು, ಪಾಸಿಟಿವ್ ಮಹಿಳೆಯ ಸಿಸೇರಿಯನ್ ಹೆರಿಗೆ ಯಶಸ್ವಿಯಾದ ಮೊದಲ ಪ್ರಕಣವೂ ಆಗಿದೆ ಎಂದು ಜಿಮ್ಸ್ ನಿರ್ದೇಶಕ ಡಾ. ಪಿ. ಎಸ್. ಭೂಸರಡ್ಡಿ ತಿಳಿಸಿದ್ದಾರೆ.

ಮಹಿಳೆಗೆ ಶುಕ್ರವಾರ ಪಾಸಿಟಿವ್ ದೃಢಪಟ್ಟಿತ್ತು. ನಂತರ ಹೆರಿಗೆ ಆಸ್ಪತ್ರೆಯನ್ನು ಸೀಲ್ ಮಾಡಲಾಗಿತ್ತು. ಜಿಮ್ಸ್ ಕೊವಿಡ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಇಂದು ಶನಿವಾರ ಹೆರಿಗೆ ಮಾಡಲಾಗಿತು.

ಈ ಹಿಂದೆ ರೋಣ-ಬಾದಾಮಿಯ ಪಾಸಿಟಿವ್ ಗರ್ಭಿಣಿ ಒಬ್ಬರಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದರೂ ಕೂಸು ಉಳಿದಿರಲಿಲ್ಲ.

Exit mobile version