ಕಲಬುರ್ಗಿ: ‘ಅರಣ್ಯ ಪ್ರದೇಶ ಹಾಗೂ ಗುಡ್ಡಗಾಡಿನ ಹಳ್ಳಿಗಳ ಶಾಲೆಗೆ ಹೋಗುವ ಶಿಕ್ಷಕಿಯರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಇದೆ. ಬಹಳಷ್ಟು ಹಳ್ಳಿಗಳಲ್ಲಿಯೂ ರಕ್ಷಣೆ ಅಗತ್ಯವಾಗಿದೆ. ಆದ್ದರಿಂದ ಶಿಕ್ಷಕಿಯರಿಗಾಗಿ ಗ್ರಾಮೀಣ ಪ್ರದೇಶದಲ್ಲಿ ವಸತಿ ಸೌಕರ್ಯ ಕಲ್ಪಿಸಬೇಕು’ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಡಾ.ಲತಾ ಮುಳ್ಳೂರ ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಉತ್ಸವ, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕ, 12 ತಾಲ್ಲೂಕು ಘಟಕ ಹಾಗೂ ಉತ್ತರ ವಲಯ ಘಟಕಗಳ ಉದ್ಘಾಟನೆ, ಕೊರೊನಾ ಸೇನಾನಿಗಳಿಗೆ ಸನ್ಮಾನ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಉತ್ತಮ ಶಿಕ್ಷಕಿಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಹೆಣ್ಣುಮಕ್ಕಳಿಗೆ ಗೌರವ ಸ್ಥಾನ ನೀಡಲಾಗಿದೆ. ಆದರೆ, ಶಕ್ತಿ- ಸಾಮರ್ಥ್ಯ ತೋರಿಸುವಂಥ ಅವಕಾಶ ನೀಡುತ್ತಿಲ್ಲ. ಇದನ್ನು ಪ್ರತಿಪಾದಿಸುವ ಸಲುವಾಗಿ ಶಿಕ್ಷಕಿಯರ ಸಂಘ ಹುಟ್ಟುಹಾಕಿದ್ದೇವೆ. ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿರುವ ಪದಾಧಿಕಾರಿಗಳ ಹುದ್ದೆಗಳಲ್ಲಿ ಶೇ 50ರಷ್ಟು ಸ್ಥಾನಗಳನ್ನು ಶಿಕ್ಷಕಿಯರಿಗೆ ಮೀಸಲಿಡಬೇಕು’ ಎಂದೂ ಆಗ್ರಹಿಸಿದರು.
ಕೇಂದ್ರ ಸಂಘಟನೆಗಳಲ್ಲಿ ಶೇ 70ರಷ್ಟು ಶಿಕ್ಷಕಿಯರೇ ಇದ್ದಾರೆ. ಹಾಗಾಗಿ, ಅವರಿಗೂ ಪ್ರಮುಖ ಹುದ್ದೆಗಳಲ್ಲಿ ಪಾಲು ಸಿಗಬೇಕು’ ಎಂದು ಒತ್ತಿ ಹೇಳಿದ ಅವರು, ‘ಯಾವುದೇ ಸಂಘಟನೆ ಹಾಗೂ ವ್ಯಕ್ತಿಗಳನ್ನು ವಿರೋಧಿಸುವ ಸಲುವಾಗಿ ನಾವು ಸಂಘಟನೆ ಹುಟ್ಟುಹಾಕಿಲ್ಲ. ನೀವೂ ನಮ್ಮನ್ನು ವಿರೋಧಿಸಬೇಡಿ. ಒಬ್ಬರಿಗೊಬ್ಬರು ಹೊಂದಿಕೊಂಡು ಹೋದರೆ ಸಂಘಟನೆ ಶಕ್ತಿ ಹೆಚ್ಚಲಿದೆ’ ಎಂದರು.
ಇಲ್ಲಿಯವರೆಗೂ ಶಿಕ್ಷಕಿಯರನ್ನು ವೋಟ್ ಬ್ಯಾಂಕ್ ಆಗಿಯೇ ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ, ಮಹಿಳೆಯರಿಗೆ ನಾಯಕತ್ವ ತರಬೇತಿ ನೀಡುವ, ಸಬಲೀಕರಣಕ್ಕೆ ಒತ್ತು ಕೊಡುವ ಪ್ರಯತ್ನವನ್ನು ಈ ಸಂಘಟನೆ ಮಾಡುತ್ತಿದೆ’ ಎಂದೂ ಹೇಳಿದರು.
ಶ್ರೀಶೈಲ ಮತ್ತು ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಬುದ್ಧ ವಿಹಾರದ ಸಂಗಾನಂದ ಭಂತೇಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮೂಡ, ಡಯಟ್ ಉಪ ನಿರ್ದೇಶಕ ಶಾಂತಗೌಡ ಪಾಟೀಲ, ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದ ಅದ್ಯಕ್ಷ ನಾಗಪ್ಪ ಹೊನ್ನಳ್ಳಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ಕಟ್ಟಿಮನಿ, ಸಿದ್ಧಣ್ಣ ಪೂಜಾರಿ, ಮಹೇಶ ಹೂಗಾರ, ಮಲ್ಲಯ್ಯ ಗುತ್ತೇದಾರ, ಬಸವರಾಜ, ಹರೀಶ ಭರಣಿ, ಶೋಭಾ ಪತ್ತಾರ, ಅನ್ನಪೂರ್ಣಾ ಸೋಮಾ, ಮೀನಾಕ್ಷಿ ಬನಸೋಡೆ, ಶ್ರೀದೇವಿ ಶಿರಹಟ್ಟಿ, ಮಲ್ಲಮ್ಮ ಮತ್ತಿಮೂಡ, ಗೌರಾಬಾಯಿ ಆಹೇರಿ, ಸುಧಾ ಬಿರಾದಾರ ಶಾಂತಾ, ಭವಾನಿ, ಎಸ್.ವಿಶಾಲಾಕ್ಷಿ, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಪ್ರಮೀಳಾದೇವಿ ಗೌಡಪ್ಪ ಶೇರಿಕಾರ, ಅರ್ಚನಾ ಜೈನ್, ಶೈಲಜಾ, ಸುಮಂಗಲಾ ಡಿಗ್ಗಾವಿ, ವಿಜಯಲಕ್ಷ್ಮೀ ಹಿರೇಮಠ, ನಾಗುಬಾಯಿ ಮಲಘಾಣ, ಶಶಿಕಲಾ ಮೂಲಭಾರತಿ, ನಾಗವೇಣಿ, ಕೃಷ್ಣಾಬಾಯಿ ರಾಂಪುರ, ಕಲಾವತಿ ನೆಲೋಗಿ, ಶಶಿಕಲಾ ಹವಾಲ್ದಾರ, ಸವಿತಾ ಬಡಿಗೇರ ಮುಂತಾದವರುಇದ್ದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸೇವಂತಾ ಚವ್ಹಾಣ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.
ಹೊಗಳಿದ್ದು ಸಾಕು; ಸಾಮರ್ಥ್ಯ ತೋರುವ ಅವಕಾಶ ನೀಡಿ
