ಶಿರಹಟ್ಟಿ: ಮತಕ್ಷೇತ್ರದ ವ್ಯಾಪ್ತಿಯ ಹಳ್ಳಿಗಳಿಗೆ ಸುಗಮ ರಸ್ತೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ನೀಡುವುದರ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ತಾಲೂಕಿನ ಸಾಸರವಾಡ ಗ್ರಾಮದಲ್ಲಿ ಸಾಸರವಾಡದಿಂದ ಕಲ್ಲಾಗನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ (ಅಂದಾಜು 4 ಕೋಟಿ ವೆಚ್ಚದಲ್ಲಿ) ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕೇಂದ್ರ ಹಾಗು ರಾಜ್ಯ ಸರಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವಿವಿಧ ಯೋಜನೆ ಮೂಲಕ ಸಾಕಷ್ಟು ಅನುದಾನ ಕಲ್ಪಿಸುತ್ತಿದ್ದು, ಪ್ರತಿಯೊಂದು ಹಳ್ಳಿಯಲ್ಲಿ ಸಿಸಿ ರಸ್ತೆ, ಶುದ್ಧ ಕುಡಿಯುವ ನೀರು, ಆಶ್ರಯ ಮನೆ, ಶೌಚಾಲಯ, ಚರಂಡಿ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಹಳ್ಳಿಯಿಂದ ಪಟ್ಟಣ, ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳ ಅಭಿವೃದ್ಧಿ, ನರೇಗಾ ಯೋಜನೆಯಡಿ ಉದ್ಯೋಗ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಜನರ ಆರ್ಥಿಕ ಮಟ್ಟವನ್ನು ಸುಧಾರಿಸಲಾಗುತ್ತಿದೆ ಎಂದು ಹೇಳಿದರು.
ಕೃಷಿ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿಗೆ ಹಾಸ್ಟಲ್ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಆರೋಗ್ಯ ಸೇವೆ ಸೇರಿದಂತೆ ಸಾರ್ವಜನಿಕರಿಗೆ ಸರ್ವ ಸೇವೆಗಳನ್ನು ಕಲ್ಪಿಸುವುದರ ಮೂಲಕ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ ಎಂದರು.
ಹದಗೆಟ್ಟ ಇಟಗಿ ಸಾಸಲವಾಡ ರಸ್ತೆ ಸುಧಾರಣೆ ಕುರಿತು ಹಲವಾರು ಬಾರಿ ಗ್ರಾಮದ ಮುಖಂಡರು ನನ್ನ ಗಮನಕ್ಕೆ ತಂದಿದ್ದರು. ಇದಕ್ಕೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ 4 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಸುಸಜ್ಜಿತ ರಸ್ತೆ ನಿರ್ಮಾಣವಾಗಿ ಈ ಭಾಗದ ರೈತರಿಗೆ ಬೆಳೆಗಳನ್ನು ಸಾಗಿಸಲು ಅನುಕೂಲವಾಗಲಿದೆ. ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ಸಹಕರಿಸಬೇಕಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಹೇಳಿದರು.
ತಾಪಂ ಉಪಾಧ್ಯಕ್ಷೆ ಪವಿತ್ರ ಶಂಕಿನದಾಸರ, ಪ್ರಕಾಶ ಬಳ್ಳಾರಿ, ಶಂಕರಗೌಡ ಪಾಟೀಲ್, ಸುರೇಂದ್ರ ಸ್ವಾಮಿ ಕುಲಕರ್ಣಿ, ಕಲ್ಲಪ್ಪ ರಗಟಿ, ನಾಗರಾಜ ಹಲಗಿ, ಮೃತ್ಯುಂಜಯ್ಯ ಹಲಗಿ, ಮಹೇಶ ಬಂಡಿ, ಬಸವರಾಜ ಕಟ್ಟಿ, ಪ್ರೇಮಾ ಪಾಟೀಲ್, ಶಿವಕುಮಾರ, ಕೆಂಗೊಂಡ, ಬಿ.ವಿ.ಬಂಗಿ, ಶ್ರೀಧರ ತಳವಾರ ಸೇರಿದಂತೆ ಗ್ರಾಮದ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.
