ಹೆಲ್ಮೆಟ್ ಜಾಗೃತಿ: ವಾಹನ ಸವಾರರಿಗೆ ಪೊಲೀಸ್ ಇಲಾಖೆಯಿಂದ ಜಾಗೃತಿ ಕಾರ್ಯ

ಗಜೇಂದ್ರಗಡ: ಸ್ಥಳೀಯ ಪೊಲೀಸ್ ಇಲಾಖೆಯಿಂದ ಶ್ರೀ ಕಾಲಕಾಲೇಶ್ವರ ವೃತ್ತದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಕರಪತ್ರ ನೀಡುವ ಮೂಲಕ ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ ವಾಹನ ಚಲಾವಣೆ ಮಾಡಬೇಕು ಎಂದು ಶುಕ್ರವಾರ ಜಾಗೃತಿ ಮೂಡಿಸಿದರು.

ಈ ವೇಳೆ ಠಾಣೆ ಪಿಎಸ್‌ಐ ಗುರುಶಾಂತ್ ದಾಶ್ಯಾಳ ಮಾತನಾಡಿ, ಹೆಲ್ಮೆಟ್ ಧರಿಸದವರನ್ನು ಹಿಡಿದು ದಂಡ ವಿಧಿಸುವುದು ಪೊಲೀಸರ ಉದ್ದೇಶವಲ್ಲ. ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ತಮ್ಮ ಅಮೂಲ್ಯ ಜೀವ ಕಾಪಾಡಲಿ ಎಂಬ ಸದುದ್ದೇಶ ಇಲಾಖೆಯದ್ದಾಗಿದೆ. ಭಾರತದಲ್ಲಿ ಪ್ರತಿ ವರ್ಷ ರೋಗ, ರುಜಿನಗಳಿಗೆ ಬಲಿಯಾಗುವವರಿಗಿಂತ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಜನಹಿತಾಸಕ್ತಿಯ ಯೋಜನೆ ಸಾಕಾರವಾಗಲು ಜನರ ಸಹಭಾಗಿತ್ವ ಅತಿಮುಖ್ಯ. ಆದ್ದರಿಂದ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಹೆಲ್ಮೆಟ್ ಧರಿಸುವ ಮೂಲಕ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಕೈ ಜೋಡಿಸಬೇಕು. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವವರನ್ನು ಎಚ್ಚರಿಸುವುದು ಯುವಕರ ಕರ್ತವ್ಯ. ಮುಖ್ಯವಾಗಿ ಯುವಕರು ಮೊದಲು ಹೆಲ್ಮೆಟ್ ಧರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಬೇಕು ಈ ದೆಸೆಯಲ್ಲಿ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ತಮ್ಮ ಪ್ರಾಣ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದರು.

ಕಾಲಕಾಲೇಶ್ವರ ವೃತ್ತದಲ್ಲಿ ಸಂಚರಿಸುವ ಪ್ರತಿಯೊಬ್ಬ ಬೈಕ್ ಸವಾರನಿಗೂ ಕರೆದು, ಕರಪತ್ರ ನೀಡಿ, ಹೆಲ್ಮೇಟ್‌ನ ಮಹತ್ವವನ್ನು ಪೊಲೀಸ್ ಸಿಬ್ಬಂದಿಗಳು ಸಾರಿದರು. ಎಎಸ್‌ಐ ಎಸ್.ಬಿ. ದಾಡಿಬಾವಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಇದ್ದರು.

Exit mobile version