ಲಕ್ಷ್ಮೇಶ್ವರ ತಾಲೂಕಿನಲ್ಲಿ 7 ಜನ ಅವಿರೋಧ ಆಯ್ಕೆ: 167 ಸ್ಥಾನಗಳಿಗೆ ಚುನಾವಣೆ

ಲಕ್ಷ್ಮೇಶ್ವರ: ತಾಲ್ಲೂಕಿನಲ್ಲಿ ಗ್ರಾಮ ಪಂಚಾಯ್ತಿಗಳ ಚುನಾವಣಾ ಕಣ ರಂಗೇರುತ್ತಿದೆ. ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು.

ಒಟ್ಟು 13 ಗ್ರಾಮ ಪಂಚಾಯ್ತಿಗಳಿಗಾಗಿ 174 ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ. ಇದಕ್ಕಾಗಿ 512 ಜನ ಸ್ಪರ್ಧಾಳುಗಳು ಕಣದಲ್ಲಿ ಉಳಿದು ಕೊಂಡಿದ್ದಾರೆ.

ಅವಿರೋಧ ಆಯ್ಕೆ: ಅಡರಕಟ್ಟಿ ಪಂಚಾಯ್ತಿಯಿಂದ 1, ಪುಟಗಾಂವ್‍ ಬಡ್ನಿಯಿಂದ 1, ಹುಲ್ಲೂರು ಪಂಚಾಯ್ತಿಯಿಂದ ಇಬ್ಬರು, ಮಾಡಳ್ಳಿ ಪಂಚಾಯ್ತಿಯಿಂದ ಮೂವರು ಸೇರಿ ಒಟ್ಟು ಏಳು ಜನ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಅಂದರೆ 174 ಸದಸ್ಯರ ಪೈಕಿ ಉಳಿದ 167 ಸದಸ್ಯರ ಆಯ್ಕೆಗೆ ಮತದಾರರು ಮತ ಚಲಾಯಿಸಬೇಕಾಗಿದೆ.

ಮತದಾರರು: ತಾಲ್ಲೂಕಿನಲ್ಲಿ ಒಟ್ಟು 55,482 ಮತದಾರರು ಇದ್ದು, ಅವರಲ್ಲಿ 28,100 ಪುರುಷ ಮತ್ತು 27,382 ಮಹಿಳಾ ಮತದಾರರು ಇದ್ದಾರೆ. ಪ್ರಚಾರ ಪತ್ರಿಕೆಗಳಿಗಾಗಿ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ಮುದ್ರಣಾಲಯಕ್ಕೆ ಮುಗಿ ಬಿದ್ದಿದ್ದು, ಪಟ್ಟಣದ ಎಲ್ಲ ಮುದ್ರಣಾಲಯಗಳು ಜನರಿಂದ ತುಂಬಿದ್ದವು.

ಪ್ರಚಾರ ಶುರು: ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕೆಲ ಅಭ್ಯರ್ಥಿಗಳು ತಮ್ಮ ಗುಂಪಿನವರೊಂದಿಗೆ ಪ್ರಚಾರ ಆರಂಭಿಸಿದ್ದಾರೆ. ವಾರ್ಡ್‍ನ ಪ್ರತಿ ಮನೆಗೂ ಭೇಟಿ ನೀಡಿ ಮತ ಬೇಟೆ ಆರಂಭಿಸಿದ್ದಾರೆ.

Exit mobile version