ರೋಣ: ಸರ್ಕಾರದ ಕೆಟ್ಟ ಧೋರಣೆಗಳು ಎಲ್ಲಿಯವರೆಗೆ ನಡೆಯುತ್ತವೇಯೋ ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವದಿಲ್ಲ ನಮ್ಮ ಕಾರ್ಮಿಕ ವರ್ಗದವರು ಅನುಭವಿಸುವ ನೋವು ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ ಎಂದು ಕಾರ್ಮಿಕ ಮುಖಂಡ ಮಹೇಶ್ ಹಿರೇಮಠ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ರೋಣ ಪಟ್ಟಣದಲ್ಲಿ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ, ಕಾರ್ಮಿಕರ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದು ಖಂಡನೀಯ. ಈ ಮೂಲಕ ರೈತರ ಹಕ್ಕುಗಳನ್ನು ಕಸೆಯುವ ಪ್ರಯತ್ನ ಮಾಡಲಾಗುತ್ತಿದೆ. ಕಾರ್ಮಿಕರು ಹೋರಾಟ ಮಾಡಬೇಕಾದರೂ ಎರಡು ತಿಂಗಳ ಮುಂಚಿತವಾಗಿ ಮನವಿ ಕೊಡಬೇಕು ಎಂದು ಸರ್ಕಾರ ಹೊಸ ನಿಯಮ ಜಾರಿಗೆ ತರಲು ಹೊರಟಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕಿಗಾಗಿ ಹೋರಾಟ ಮಾಡುವ ವ್ಯವಸ್ಥೆಯನ್ನು ಕಾಯ್ದೆಗಳ ಮೂಲಕ ಹತ್ತಿಕ್ಕುವ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿವೆ. ಇನ್ನು ಭಾರತದ ಸಂವಿಧಾನವೇ ಕನಿಷ್ಟ ವೇತನದ ಬಗ್ಗೆ ಹೇಳುತ್ತದೆ. ಆದರೆ ದೇಶದ ಕಾರ್ಮಿಕರಿಗೆ ಈವರೆಗೂ ಕನಿಷ್ಠ ವೇತನ ಸಿಗುತ್ತಿಲ್ಲ. ಹೀಗಾಗಿ ಕಾರ್ಮಿಕ ಹಾಗೂ ರೈತ ವಲಯವನ್ನು ಶೋಷಣೆ ಮಾಡುವಂತಹ ಕಾನೂನುಗಳು ನಮಗೆ ಬೇಡ. ಒಂದು ವೇಳೆ ಜಾರಿಗೆ ತಂದರೆ ಇನ್ನು ಹೆಚ್ಚಿನ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸೇನೆ ಜಿಲ್ಲಾಧ್ಯಕ್ಷ ಮುತ್ತನಗೌಡ ಚೌಗರಡ್ಡಿ ಮಾತನಾಡಿ ರೈತ ವಿರೋಧಿ ನೀತಿಗಳ ಹಾಗೂ ಕಾರ್ಮಿಕರ ವಿರೋಧಿ ಕಾಯ್ದೆಗಳ ತಿದ್ದುಪಡಿ ವಿಚಾರವನ್ನು ಸರ್ಕಾರ ತಕ್ಷಣ ನಿಲ್ಲಿಸಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ರೈತ ಸಂಘದ ತಾಲೂಕಾಧ್ಯಕ್ಷ ಮೇಘರಾಜ್ ಭಾವಿ ಮಾತನಾಡಿ, ಸರ್ಕಾರ ರೈತರ ಸಮಸ್ಯೆಗಳ ಜೊತೆ ಚಲ್ಲಾಟ ಆಡುತ್ತಿದೆ. ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದು ಏಕ ಪಕ್ಷೀಯ ನೋಟ ಬೀರಿದೆ. ಸರ್ಕಾರ ದುಡ್ಡು ನೀಡಿ ಕೆಲವೊಂದು ರೈತ ಯುವ ಮೋರ್ಚಾ ಸಂಘಗಳನ್ನು ಮಾಡಿ ಮನೆ ಮನೆಗೆ ಸರ್ಕಾರದ ಯೋಜನೆಗಳ ಪರ ಪ್ರಚಾರ ಮಾಡಿಸುತ್ತಿದೆ. ಅವರಿಗೆ ರೈತರ ಸಂಕಟ ಏನು ಗೊತ್ತು? ರೈತ ವಿರೋಧಿ ನೀತಿಗಳ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಅದು ನಮ್ಮ ಸರ್ಕಾರಕ್ಕೆ ಬಿಟ್ಟ ವಿಚಾರವೆಂದು ಸಲೀಸಾಗಿ ಹೇಳಿ ಜಾರಿಕೊಳ್ಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕ ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ದಿನಗೂಲಿ ನೌಕರರು ಹಾಗೂ ಇನ್ನಿತರ ದಿನಗೂಲಿ ನೌಕರರು ರೈತ ಭಾಂದವರು ಭಾಗವಸಿದ್ದರು.
