ಬೆಂಗಳೂರು : ಕೆಎಎಸ್ ಅಧಿಕಾರಿ ಡಾ. ಸುಧಾ ಅವರ ಮನೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದ್ದು, ಬರೋಬ್ಬರಿ 3.7 ಕೆಜಿ ಚಿನ್ನ ಹಾಗೂ 10.5 ಕೆಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಎಸಿಬಿ ಐಜಿಪಿ ಚಂದ್ರಶೇಖರ್ ತಿಳಿಸಿದ್ದಾರೆ. ಇತ್ತೀಚೆಗೆ ಡಾ. ಸುಧಾ ಅವರ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿತ್ತು. ಬೆಂಗಳೂರು, ಉಡುಪಿ, ಮೈಸೂರು ಸೇರಿದಂತೆ ಏಳು ಸ್ಥಳಗಳಲ್ಲಿ ದಾಳಿ ಮಾಡಲಾಗಿದ್ದು, ಈ ವೇಳೆ ರೂ. 36.89 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬ್ಯಾಂಕ್ ಖಾತೆಯಲ್ಲಿ ರೂ. 3.5 ಕೋಟಿ ಠೇವಣಿ ಹಾಗೂ 20ಕ್ಕೂ ಹೆಚ್ಚು ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಸ್ಥಿರಾಸ್ತಿ ಕ್ರಯ ಪತ್ರಗಳು, ಜಿಪಿಎ ಕರಾರುಗಳು, ಖರೀದಿ ಒಪ್ಪಂದ ಸೇರಿದಂತೆ 200 ಆಸ್ತಿ ಪತ್ರಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ.
ಸುಧಾ ಅವರಿಗೆ ನೊಟೀಸ್ ನೀಡಿಲ್ಲ. ಆದರೆ, ದಾಖಲೆಗಳಿದ್ದರೆ ತಿಳಿಸುವಂತೆ ಸೂಚಿಸಲಾಗಿದೆ. ಸುಧಾ ಅವರ ಹೊರತಾಗಿ ಅವರ ಮನೆ ಮೇಲೆ ದಾಳಿ ಮಾಡಲಾಗಿದ್ದು, ದಾಳಿಗೆ ತುತ್ತಾದವರನ್ನು ಬೇನಾಮಿಗಳು ಎಂದು ಪರಿಗಣಿಸಲಾಗಿದೆ. 50 ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, 50 ಚೆಕ್ ಲೀಫ್ ಗಳು ದೊರೆತಿವೆ ಎಂದು ಹೇಳಿದ್ದಾರೆ.
