ಕೊಪ್ಪಳ : ಆನ್ ಲೈನ್ ವಂಚಕರು ಇಲ್ಲಿ ಶಿಕ್ಷಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಶಿಕ್ಷಕರ ಖಾತೆಗೆ ಕನ್ನ ಹಾಕಿ, ವಂಚಿಸುತ್ತಿರುವ ನೂರಾರು ಪ್ರಕರಣಗಳು ಜಿಲ್ಲೆಯಲ್ಲಿ ಬೆಳಕಿಗೆ ಬರುತ್ತಿವೆ.
ಬ್ಯಾಂಕ್ ನಿಂದ ನಾವು ಕರೆ ಮಾಡುತ್ತಿದ್ದೇವೆ ಎಂದು ಶಿಕ್ಷಕರನ್ನೇ ನಂಬಿಸಿ, ಅವರಿಂದ ಹೆಸರು, ಎಟಿಎಂ ಕಾರ್ಡ್ ನಂಬರ್, ಸಿಸಿವಿ ನಂಬರ್ ಸೇರಿದಂತೆ ಓಟಿಪಿಯನ್ನೂ ಕೂಡ ಕೇಳಿ ಅವರಿಂದ ಪಡೆದು ಆನ್ ಲೈನ್ ಮೂಲಕ ಖದೀಮರು ಹಣ ಎಗರಿಸುತ್ತಿದ್ದಾರೆ.
ಇಂತಹ ವಂಚನೆ ಪ್ರಕರಣಗಳು ಕೂಡ ಈ ಹಿಂದೆಯೂ ರಾಜ್ಯ ಸೇರಿದಂತೆ ದೇಶದಲ್ಲಿ ದಾಖಲಾಗುತ್ತಿವೆ. ಆದರೆ, ಇವರು, ಶಿಕ್ಷಕರನ್ನೇ ಟಾರ್ಗೆಟ್ ಮಾಡಿ, ವಂಚಿಸುತ್ತಿರುವುದಕ್ಕೆ ಸಂಶಯ ಮೂಡುತ್ತಿದೆ. ಸಾಮಾಜಿಕ ಜ್ಞಾನವುಳ್ಳ ಶಿಕ್ಷಕರೇ ಇದಕ್ಕೆ ಬಲಿಯಾಗುತ್ತಿರುವುದು ಹೇಗೆ? ಇಂತಹ ಬುದ್ಧಿವಂತವರನ್ನೇ ಖತರ್ನಾಕ್ ಖದೀಮರು ವಂಚಿಸುತ್ತಿರುವುದಾದರೂ ಹೇಗೆ? ಎಂದು ಜನ ಚರ್ಚಿಸುತ್ತಿದ್ದಾರೆ.
ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಸರ್ಕಾರ, ಪ್ರತಿ ತಿಂಗಳು ರೂ. 5 ಸಾವಿರದಂತೆ ಗೌರವ ಧನವನ್ನು ತಹಸೀಲ್ದಾರ್ ಕಚೇರಿಯಿಂದ ನೀಡಲಾಗುತ್ತಿದೆ. ಇದಕ್ಕಾಗಿ ಶಿಕ್ಷಕರು ತಾವು ಕಾರ್ಯನಿರ್ವಹಿಸುತ್ತಿರುವ ಶಾಲೆಯ ವ್ಯಾತಿಯಲ್ಲಿನ ಮತದಾರರ ನೋಂದಣಿ, ತಿದ್ದುಪಡಿ ಸೇರಿದಂತೆ ಇದಕ್ಕೆ ಸಂಬಂಧಿಸಿದ ಬಹುತೇಕ ಕಾರ್ಯಗಳನ್ನು ಮಾಡುತ್ತಾರೆ. ಈ ಮತಗಟ್ಟೆಯ ಕೆಲಸ ನಿರ್ವಹಿಸಿರುವ ಶಿಕ್ಷಕರಿಗೆ ಮಂಗಳವಾರ ಹಾಗೂ ಬುಧವಾರ ಕರೆ ಬಂದಿವೆ.
ಕರೆ ಮಾಡಿದ ಕೂಡಲೇ ನಾವು ಬ್ಯಾಂಕಿನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಖಾತೆಗೆ ರೂ. 5 ಸಾವಿರ ಹಣ ಜಮಾ ಮಾಡಬೇಕಿದೆ. ಇದಕ್ಕಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಇದಕ್ಕಾಗಿ ನೀವು ಬ್ಯಾಂಕ್ ಖಾತೆ ನಂಬರ್, ಎಟಿಎಂ ನಂಬರ್ ಹಾಗೂ ಸಿವಿಸಿ ನೀಡಿ ಎಂದು ಕೇಳಿದ್ದಾರೆ. ಇದನ್ನೇ ನಂಬಿದ ಕೆಲವು ಶಿಕ್ಷಕರು, ಅವರಿಗೆ ಬರುವ ಓಟಿಪಿ ಸಮೇತ ಎಲ್ಲ ವಿವರಗಳನ್ನು ನೀಡಿದ್ದಾರೆ.
ಅಮಾಯಕ ಶಿಕ್ಷಕರು ತಮ್ಮ ಶಾಲೆಯ ಹೆಸರಿನೊಂದಿಗೆ ಈ ಎಲ್ಲ ದಾಖಲೆಗಳನ್ನು ನೀಡಿದ್ದಾರೆ. ಆ ನಂತರ ಖಾತೆಯಲ್ಲಿನ ಹಣ ಮಾಯವಾಗಿದೆ. ಈಗ ಶಿಕ್ಷಕರು ಮೋಸ ಹೋಗಿರುವ ಕುರಿತು ಹೇಳುತ್ತಿದ್ದಾರೆ. ಹಲವರು ತುಂಬಾ ವ್ಯಥೆ ಪಡುತ್ತಿದ್ದಾರೆ.
