ಆನ್‍ ಲೈನ್ ಪರೀಕ್ಷೆಗಳು ಬೇಡ: ಶಿಕ್ಷಣದಲ್ಲಿ ಡಿಜಿಟಲ್ ವಿಭಜನೆ ಬರಬಾರದು

examination digitol sfi

ಆನ್ ಲೈನ್ ಪರೀಕ್ಷೆಗಳು ಬೇಡ: ಶಿಕ್ಷಣದಲ್ಲಿ ಡಿಜಿಟಲ್ ವಿಭಜನೆ ಬರಬಾರದು

ಬೆಂಗಳೂರು:ಕೊರೊನಾ ಮತ್ತು ಲಾಕ್‍ಡೌನ್ ಪರಿಸ್ಥಿತಿಗಳಲ್ಲಿ  ಭೌತಿಕ  ವಿಧಾನದಲ್ಲಿ  ಪರೀಕ್ಷೆಗಳನ್ನು  ನಡೆಸುವುದು ಸಾಧ್ಯವಿರದಿರುವಲ್ಲಿ ಆನ್‍ ಲೈನ್/ತೆರೆದ  ಪುಸ್ತಕದ  ಪರೀಕ್ಷೆಗಳ  ಒಂದು  ಏಕಪ್ರಕಾರದ  ರಾಷ್ಟ್ರೀಯ ವಿಧಾನವನ್ನು ಹೇರುವ ಸುತ್ತೋಲೆಯನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯು.ಜಿ.ಸಿ.)  ಜುಲೈ 6ರಂದು ಹೊರಡಿಸಿದೆ. ಈ ಏಕಪಕ್ಷೀಯ ಪ್ರಸ್ತಾವನೆಯನ್ನು ಭಾರತ ವಿದ್ಯಾರ್ಥಿ ಫೆಡರೇಶನ್  (ಎಸ್ಎಫ್ಐ) ಕೇಂದ್ರ ಸಮಿತಿ ತಿಸ್ಕರಿಸಿದೆ.

ಈಗಲೂ ದೇಶದಲ್ಲಿ ಅಂತರ್ಜಾಲ ಸಂಪರ್ಕ ಸುಮಾರು 30ಶೇ, ಮಾತ್ರ. ನಮ್ಮ ಬಹುಪಾಲು ವಿದ್ಯಾರ್ಥಿಗಳಿಗೆ, ಅದರಲ್ಲೂ ಆರ್ಥಿಕವಾಗಿ, ಸಾಮಾಜಿಕವಾಗಿ ಅಂಚಿನಲ್ಲಿರುವ, ನಮ್ಮ ದೇಶದ ದೂರ-ದೂರದ ಡಿಜಿಟಲ್ ಸಂಪರ್ಕ ಹೊಂದಿರದ ಗ್ರಾಮೀಣ, ಬುಡಕಟ್ಟು ಭಾಗಗಳಲ್ಲಿ ವಾಸಿಸುತ್ತಿರುವರಿಗೆ ಆನ್‍ ಲೈನ್‍ ತರಗತಿಗಳ ಅಥವ ಪರೀಕ್ಷೆಗಳ ಸಾಧ್ಯತೆಗಳು ಲಭ್ಯವಿಲ್ಲ. ಈ ಯು.ಜಿ.ಸಿ. ನಿರ್ದೇಶನ ಅತ್ಯಂತ ತಾರತಮ್ಯದಿಂದ ಕೂಡಿರುವುದರಿಂದಾಗಿ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಹೇಳಿದ್ದಾರೆ.

ಶಿಕ್ಷಣ ನಮ್ಮ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದೆ. ರಾಜ್ಯ ಸರಕಾರಗಳೊಂದಿಗೆ, ಬೋಧನೆ ಮತ್ತು ಪರೀಕ್ಷೆಗಳಿಗೆ ವಿಭಿನ್ನ ವ್ಯವಸ್ಥೆಗಳನ್ನು/ ರಚನೆಗಳನ್ನು  ಹೊಂದಿರುವ  ರಾಜ್ಯ  ವಿಶ್ವವಿದ್ಯಾಲಯಗಳು/  ಕಾಲೇಜುಗಳೊಂದಿಗೆ ಸಮಾಲೋಚನೆಗಳನ್ನು ನಡೆಸದೆ ಇಂತಹ ಏಕಪ್ರಕಾರದ ನಿರ್ದೇಶನವನ್ನು ಕೊಡಲು ಸಾಧ್ಯವಿಲ್ಲ. ಅಧ್ಯಾಪಕರ, ನಿರ್ದಿಷ್ಟವಾಗಿ ವಿದ್ಯಾರ್ಥಿಗಳ ಪ್ರತಿನಿಧಿಗಳೊಂದಿಗೆ ಕೂಡ ಸಮಾಲೋಚನೆ ನಡೆಸುವುದು ಮಹತ್ವದ್ದಾಗುತ್ತದೆ. ಏಕೆಂದರೆ ಇಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಿದೆ ಎಂದು ಅವರು ಹೇಳಿದ್ದಾರೆ.

ಹಲವು ವಿಶ್ವವಿದ್ಯಾಲಯಗಳು ವಿಶಾಲ ಪ್ರದೇಶಗಳಲ್ಲಿ ವ್ಯಾಪಿಸಿರುವ ಸಂಯೋಜಿತ ಕಾಲೇಜುಗಳನ್ನು ಹೊಂದಿವೆ. ಏರುತ್ತಿರುವ ಸೋಂಕು ಮತ್ತು ಲಾಕ್‍ ಡೌನ್‍ ನಿರ್ಬಂಧಗಳಿಂದಾಗಿ ಹಲವಾರು ವಿದ್ಯಾರ್ಥಿಗಳಿಗೆ ಇಂಟರ್ನೆಟ್‍  ಲಭ್ಯತೆ ಇರುವುದಿಲ್ಲ ಮತ್ತು ಅವರು ಆನ್‍ ಲೈನ್‍ ಶಿಕ್ಷಣ/ ಪರೀಕ್ಷೆಗಳಲ್ಲಿ ಭಾಗವಹಿಸುವುದು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಡಿಜಿಟಲ್‍ ವಿಭಜನೆಯನ್ನು ಒಪ್ಪಲು ಸಾಧ್ಯವಿಲ್ಲ. ಆದರೆ ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಮುಂದಿನ ದಾರಿಯನ್ನು ಆರಿಸಿಕೊಳ್ಳಲು ಅನುವು ಮಾಡಿಕೊಡಲು ಪರೀಕ್ಷೆ ನಡೆಸಿ ಅವರಿಗೆ ಪದವಿಗಳನ್ನು ಪ್ರದಾನ ಮಾಡಬೇಕಾಗಿದೆ. ಆದ್ದರಿಂದ ಅದಕ್ಕೆ, ಹಿಂದಿನ ಸೆಮಿಸ್ಟರುಗಳಲ್ಲಿ ಅವರು ಪಡೆದಿರುವ ಅವರ ಮಾಲ್ಯಮಾಪನಗಳು ಅವರಿಗೆ ಪದವಿ ಪ್ರಧಾನ ಮಾಡುವ ಮೌಲ್ಯಮಾಪನಗಳ ಆಧಾರವಾಗಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿದ್ಯಾರ್ಥಿಗಳು ಈಗ ಅನಿಶ್ಚಿತತೆಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಂವೇದನಾ ಶೂನ್ಯತೆಯಿಂದಾಗಿ ತೀವ್ರ ಮಾನಸಿಕ ವೇದನೆಗಳ ಮೂಲಕ ಹಾದು ಹೋಗುತ್ತಿದ್ದಾರೆ. ಆನ್‍ ಲೈನ್‍ ಪರೀಕ್ಷೆಗಳ ಪ್ರಸ್ತಾವನೆ ಅವರನ್ನು ಇನ್ನಷ್ಟು ವೇದನೆಗಳಿಗೆ ಒಳಪಡಿಸುತ್ತದೆ.  ಈಗಾಗಲೇ ಆನ್‍ ಲೈನ್‍ ತರಗತಿಗಳನ್ನು  ಲಭ್ಯಗೊಳಿಸಿಕೊಳ್ಳುವುದು ಸಾಧ್ಯವಾಗದ್ದರಿಂದ ವಿದ್ಯಾರ್ಥಿಗಳು ತಮ್ಮ ಬದುಕನ್ನೇ ಅಂತ್ಯಗೊಳಿಸಿಕೊಂಡಿರುವ ದುರಂತಮಯ ಉದಾಹರಣೆಗಳು ಕಂಡು ಬಂದಿವೆ ಎಂದು ನಡೆದ ಅಹಿತಕರ ಘಟನೆಗಳನ್ನು ನೆನಪಿಸಿದ್ದಾರೆ.

ಇಂತಹ ಸನ್ನಿವೇಶಗಳಲ್ಲಿ ವಿದ್ಯಾರ್ಥಿಗಳಿಗೆ ಈಗಾಗಲೇ ಹಿಂದಿನ ಸೆಮಿಸ್ಟರುಗಳಲ್ಲಿ ಅವರು ಪಡೆದಿರುವ ಮೌಲ್ಯಮಾಪನಗಳ ಆಧಾರದಲ್ಲಿ ಪದವಿಗಳನ್ನು ಪ್ರದಾನ ಮಾಡಬೇಕು ಎಂದು ಎಸ್ಎಫ್ಐ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.

Exit mobile version