ಹುಬ್ಬಳ್ಳಿ: ಬಿಜೆಪಿಯ ಆಂತರಿಕ ವಿಚಾರಕ್ಕೆ ನಾವು ಹೋಗುವದಿಲ್ಲ. ಆದರೆ ತಾವೇ ಹೊಡೆದಾಡಿಕೊಂಡು ಸರ್ಕಾರ ಬಿದ್ದರೆ, ಚುನಾವಣೆ ಎದುರಿಸಲು ನಾವು ಸಿದ್ಧ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ಆ ಪಕ್ಷಕ್ಕೆ ಬಿಟ್ಟಿದ್ದು, ಮತ್ತೆ ನಾವೇನು ಹೇಳುವುದಿಲ್ಲ ಎಂದರು.
ಮಥುರಾ ವಿವಾದದ ಬಗ್ಗೆ ಪ್ರತಿಕ್ರಿಯೆ ಮಥುರಾ ವಿವಾದದ ಬಗ್ಗೆ ಸಿ.ಟಿ. ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮಥುರಾ ವಿಚಾರ ಜನರ ಸಮಸ್ಯೆ ಅಲ್ಲ. ಗೊಂದಲ, ಕೋಮವಾದ ಸೃಷ್ಟಿ ಮಾಡೋದಕ್ಕೆ ನಡೆಯುತ್ತಿರುವ ಪ್ರಯತ್ನ ಎಂದು ತಿರುಗೇಟು ನೀಡಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬೀಳಲಿಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೇ ನೀಡಿದ ಅವರು, ಚುನಾವಣೆ ಬಂದಾಗ ಈ ವಿಚಾರ ಹೇಳುವ ಉದ್ದೇಶವೇನು? ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 1.30ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ನಾನು ಐದು ವರ್ಷ ಸಿಎಂ ಇದ್ದಾಗ ಯಾವೊಬ್ಬ ಎಂಎಲ್‌ಎ ನನ್ನ ವಿರುದ್ಧವಾಗಿರಲಿಲ್ಲ. ಆದರೆ ಈಗ ಯಾಕೆ ಹೀಗೆ ಆಗ್ತಿದೆ ಎಂದು ಪ್ರಶ್ನಿಸಿದರು.
ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ಪ್ರವಾಹ ನಿರ್ವಹಣೆ ವಿಚಾರವಾಗಿ ಇದೇ ತಿಂಗಳು 25, 26, 27 ರಂದು ಬೆಳಗಾವಿ, ವಿಜಾಪುರ , ರಾಯಚೂರು, ಕಲಬುರ್ಗಿ ಸೇರಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತೇನೆ. ನಾನು ಏರಿಯಲ್ ಸಮೀಕ್ಷೆ ಮಾಡದೇ, ಕಾರಿನಲ್ಲಿ ಹೋಗಿ ಜನರ ಸಮಸ್ಯೆ ಆಲಿಸುತ್ತೇನೆ. ಈ ಬಾರಿ 15,000 ಕೋಟಿ ನಷ್ಟವಾಗಿದೆ. ಈವರೆಗೂ ಕೇಂದ್ರ ತಂಡ ಭೇಟಿ ನೀಡಿಲ್ಲ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಸಿಎಂ ಇದ್ದಾಗ ಶಾಸಕರುಗಳನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಅವರ ಕ್ಷೇತ್ರಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡಿದ್ದರೆ ಅವರೇಕೆ ಸರ್ಕಾರ ಬೀಳಿಸುತ್ತಿದ್ದರು? ಕುಣಿಯಲು ಬಾರದವರು ನೆಲ ಡೊಂಕು ಎನ್ನುವಂತಾಗಿದೆ ಎಂದು ಲೇವಡಿಯಾಡಿದರು.
