ಪ್ಲೇ ಆಫ್ ಕನಸು ಜೀವಂತವಾಗಿಸಿಕೊಂಡ ಪಂಜಾಬ್!

ಅಬುಧಾಬಿ: ದೆಹಲಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ಐದು ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.

ಈ ಗೆಲುವಿನ ಮೂಲಕ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಗಳಿಸಿದೆ. ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ದೆಹಲಿ ತಂಡ ನಿಗದಿತ 20 ಓವರ್ ಗಳಲ್ಲಿ 165 ರನ್ ಗಳನ್ನು ಪಂಜಾಬ್ ಗೆ ಗುರಿಯಾಗಿ ನೀಡಿತ್ತು.

ಈ ಮೊತ್ತ ಬೆನ್ನಟ್ಟಿದ ಪಂಜಾಬ್ ತಂಡ, ನಾಯಕ ರಾಹುಲ್ ಅವರನ್ನು ಬೇಗನೆ ಕಳೆದುಕೊಂಡಿತು.. ಟೂರ್ನಿಯುದ್ಧಕ್ಕೂ ಉತ್ತಮ ಆಟ ಪ್ರದರ್ಶಿಸಿದ್ದ ತಂಡದ ನಾಯಕ ಕೆ.ಎಲ್. ರಾಹುಲ್ ಈ ಪಂದ್ಯದ ಎರಡನೇ ಓವರ್ ನಲ್ಲಿ ಔಟ್ ಆದರು. ತೀವ್ರ ಸಂಕಷ್ಟದಲ್ಲಿದ್ದ ತಂಡಕ್ಕೆ ಪೊರನ್ ಅರ್ಧ ಶತಕ ಹಾಗೂ ಗೇಲ್ 13 ಎಸೆತಗಳಲ್ಲಿ 29 ಗಳಿಸಿ ಗೆಲ್ಲುವ ಆತ್ಮವಿಶ್ವಾಸ ಮೂಡಿಸಿದರು. ಹೀಗಾಗಿ ಪಂಜಾಬ್ ತಂಡ 19 ಓವರ್ ಗಳಲ್ಲಿಯೇ 5 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿ ಗೆಲುವಿನ ದಡ ಸೇರಿತು. 

ಪೊರನ್ ಅರ್ಧ ಶತಕ ಗಳಿಸಿ ತಂಡವನ್ನು ಗೆಲುವಿನ ಸನಿಹ ತಂದರು. ಪೊರನ್ ಉತ್ತಮ ಸಾಥ್ ನೀಡಿದ ಮ್ಯಾಕ್ಸ್ ವೇಲ್ 32 ಗಳಿಸಿ ಔಟಾದರು. ಅಂತಿಮ ಹಂತದಲ್ಲಿ 24 ಎಸೆತಗಳಲ್ಲಿ 17 ರನ್ ಗಳಿಸಬೇಕಿದ್ದ ಸಂದರ್ಭದಲ್ಲಿ ಒಂದಾದ ದೀಪಕ್ ಹೂಡಾ 15 ರನ್, ನೀಶಾಮ್ 10 ರನ್ ಗಳಿಸಿ 19 ಓವರಿನ ಕೊನೆಯ ಎಸೆದಲ್ಲಿ ತಂಡಕ್ಕೆ ಗೆಲುವು ತಂದು ಕೊಟ್ಟರು. 

ಮೊದಲು ಬ್ಯಾಟಿಂಗ್ ಮಾಡಿದ್ದ ದೆಹಲಿ ತಂಡಕ್ಕೆ ಆರಂಭಿಕ ಆಟಗಾರ ಶಿಖರ್ ಧವನ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಗಳಿಸಿದ ಧವನ್ ಪಂದ್ಯದಲ್ಲಿ 61 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್ ಗಳೊಂದಿಗೆ 106 ರನ್ ಗಳಿಸಿ ಅಜೇಯರಾಗಿ ಉಳಿದರು. ಹೀಗಾಗಿ ದೆಹಲಿ ಡೆಲ್ಲಿ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು.

Exit mobile version